ನವದೆಹಲಿ: ಕೇಜ್ರಿವಾಲ್ ಕನಸು ನನಸಾಗಿದೆ, 10 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಸ್ಥಾನಮಾನ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗ ಎಎಪಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಕರ್ನಾಟಕ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ಅತ್ತ ಕೇಜ್ರಿವಾಲ್ ಪಕ್ಷವಾದ AAPಗೆ ರಾಷ್ಟ್ರೀಯ ಸ್ಥಾನಮಾನ ಸಿಕ್ಕಿದ್ದರೆ, ಮತ್ತೊಂದೆಡೆ ತೃಣ ಮೂಲ ಕಾಂಗ್ರೆಸ್ (TMC), ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕಳೆದುಕೊಂಡಿವೆ. ಮೊದಲಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗೆಲುವಿನ ಯಾತ್ರೆ ಆರಂಭಿಸಿದ್ದ ಆಮ್ ಆದ್ಮಿ, ನಂತರ ದೇಶದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿತ್ತು. ದೆಹಲಿ ಹಾಗೂ ಪಂಜಾಬ್ ಸೇರಿದಂತೆ ಗುಜರಾತ್ ರಾಜ್ಯದಲ್ಲೂ ಕೆಲವು ಕ್ಷೇತ್ರಗಳಲ್ಲಿ ಭಾರಿ ಗೆಲುವು ಸಾಧಿಸುವ ಮೂಲಕ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದುಕೊಂಡಿದೆ AAP.
2012ರ ನವೆಂಬರ್ 26ರಂದು ಕೇಜ್ರಿವಾಲ್ ನೇತೃತ್ವದಲ್ಲಿ ಆಪ್ ಸ್ಥಾಪನೆಯಾಗಿತ್ತು. ದೆಹಲಿಯಲ್ಲಿ ಅತ್ಯದ್ಭುತ ಸಾಧನೆ ಮಾಡುವ ಮೂಲಕ ಇಡೀ ದೇಶದ ರಾಜಕಾರಣದ ಗಮನ ಸೆಳೆದಿತ್ತು ಆಮ್ ಆದ್ಮಿ ಪಕ್ಷ. ಇಷ್ಟೆಲ್ಲಾ ಸಾಧನೆಯ ಪರಿಣಾಮ ಕೇವಲ 10 ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮುವ ಮೂಲಕ ಹೊಸ ಸಾಧನೆ ಮಾಡಿದೆ. ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷಕ್ಕೆ ಇದು ಹೊಸ ಶಕ್ತಿ ನೀಡಿದಂತಾಗಿದೆ.
ರಾಷ್ಟ್ರೀಯ ಪಕ್ಷಕ್ಕೆ ಅರ್ಹತೆ ಏನು? ಯಾವುದೇ ಪ್ರಾದೇಶಿಕ ಪಕ್ಷ ರಾಷ್ಟ್ರೀಯ ಪಕ್ಷವಾಗಲು ಕನಿಷ್ಠ 4 ರಾಜ್ಯಗಳಲ್ಲಿ ಗುರುತಿಸಲ್ಪಟ್ಟಿರಬೇಕು. ಹಾಗೇ 4 ರಾಜ್ಯಗಳಲ್ಲಿ ಕನಿಷ್ಠ 2 ಸ್ಥಾನ ಮತ್ತು ಶೇಕಡಾ 6 ರಷ್ಟು ಮತವನ್ನು ರಾಷ್ಟ್ರೀಯ ಪಕ್ಷವಾಗಲು ಬಯಸುವ ಪಕ್ಷ ಪಡೆದಿರಬೇಕು. ಶೇಕಡಾ 3ರಷ್ಟು ವಿಧಾನಸಭಾ ಸ್ಥಾನ ಅಥವಾ 3 ವಿಧಾನಸಭಾ ಸ್ಥಾನಗಳಲ್ಲಿ ಯಾವುದು ಹೆಚ್ಚೋ ಅಷ್ಟರಲ್ಲಿ ಗೆಲುವು ಸಾಧಿಸಿರಬೇಕು. ಇದಿಷ್ಟು ಮಾತ್ರವಲ್ಲ, ಶೇಕಡಾ 8ಕ್ಕಿಂತಲೂ ಹೆಚ್ಚಿನ ಮತಗಳನ್ನು ಚುನಾವಣೆಯಲ್ಲಿ ಪಡೆದಿರಬೇಕು. ಇಷ್ಟೂ ಅರ್ಹತೆ ಇರುವ ಪಕ್ಷಕ್ಕೆ ಮಾತ್ರ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕೇಂದ್ರ ಚುನಾವಣಾ ಆಯೋಗ ನೀಡುತ್ತದೆ.
ದೆಹಲಿಯಲ್ಲಿ ಬಲವಾಗಿ ಪಕ್ಷ ಸಂಘಟನೆ ಮಾಡಿದ್ದ ಕೇಜ್ರಿವಾಲ್ ಪಕ್ಷ, ನಂತರ ಕಾಂಗ್ರೆಸ್ ಆಡಳಿತವಿದ್ದ ಪಂಜಾಬ್ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯ ಪರಿಣಾಮ ಗೆಲುವು ಕಂಡಿತ್ತು. ಪಂಜಾಬ್ ರಾಜ್ಯದಲ್ಲಿ ಭರ್ಜರಿ ವಿಜಯ ಕಂಡು ಸರ್ಕಾರ ರಚಿಸುವ ಜೊತೆ ಜೊತೆಗೆ ಗೋವಾ ಚುನಾವಣೆ ಟಾರ್ಗೆಟ್ ಮಾಡಿತ್ತು ಹಾಗೂ 2 ಸ್ಥಾನಗಳನ್ನು ಗೆಲ್ಲುವಲ್ಲಿ ಆಪ್ ಯಶಸ್ವಿ ಕೂಡ ಆಗಿತ್ತು. ನಂತರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 5 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು ಆಮ್ ಆದ್ಮಿ ಪಕ್ಷ.
ಇಷ್ಟೆಲ್ಲದರ ನಡುವೆ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ, AAP ರಾಷ್ಟ್ರೀಯ ಪಕ್ಷದ ಸ್ಥಾನಕ್ಕಾಗಿ ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಪದೇ ಪದೇ ವಿನಂತಿ ಮಾಡಿದರೂ ರಾಷ್ಟ್ರೀಯ ಪಕ್ಷವೆಂದು ಗುರುತಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಆಮ್ ಆದ್ಮಿ ಪಕ್ಷದ ಮನವಿ ಪರಿಶೀಲಿಸಿ ಏ.13ರೊಳಗೆ ಈ ಬಗ್ಗೆ ನಿರ್ಧರಿಸಲು ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
ದೆಹಲಿ ಸಿಎಂ ಕೇಜ್ರಿವಾಲ್ ಖುಷ್! ಅಂದಹಾಗೆ ತಮ್ಮ ಪಕ್ಷಕ್ಕೆ ರಾಷ್ಟ್ರೀಯ ಸ್ಥಾನಮಾನ ಸಿಕ್ಕಿದ್ದಕ್ಕೆ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಫುಲ್ ಖುಷ್ ಆಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ‘ಇಷ್ಟು ಕಡಿಮೆ ಅವಧಿಯಲ್ಲಿ ರಾಷ್ಟ್ರೀಯ ಪಕ್ಷವೇ? ಇದು ಪವಾಡಕ್ಕಿಂತ ಕಡಿಮೆಯಿಲ್ಲ. ಎಲ್ಲರಿಗೂ ಅಭಿನಂದನೆಗಳು, ದೇಶದ ಲಕ್ಷಾಂತರ ಜನ ನಮ್ಮನ್ನು ಈ ಸ್ಥಾನಕ್ಕೆ ತಂದಿದ್ದಾರೆ. ಜನ ನಮ್ಮಿಂದ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ಇಂದು ಜನ ನಮಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಈ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಲು ನಮ್ಮನ್ನು ಆಶೀರ್ವದಿಸಿ’ ಎಂದಿದ್ದಾರೆ ಕೇಜ್ರಿವಾಲ್.
ಕೃಪೆ:oneindia kannada