ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು : ಪವಿತ್ರವಾದ ಮುಖ್ಯಮಂತ್ರಿ ಸ್ಥಾನದ ಹುದ್ದೆಯನ್ನು ಬಿಜೆಪಿ ಪಕ್ಷದ ಕೆಲ ನಾಯಕರು ಹಣ ಪಡೆದು ಮಾರಾಟ ಮಾಡುತ್ತಾರೆ ಎಂದು ಅವರ ಪಕ್ಷದ ಶಾಸಕರು ಬಹಿರಂಗ ಪಡಿಸಿದ್ದು, ಈ ಕುರಿತು ಸೂಕ್ತ ತನಿಖೆ ಆಗಬೇಕೆಂದು ಕಿತ್ತೂರು ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಮುಖಂಡ ಆನಂದ ಹಂಪಣ್ಣವರ ಆಗ್ರಹಿಸಿದರು.
ಇಂದು ಬೆಳೆಗ್ಗೆ ಸುದ್ದಿ ಸದ್ದು ಜೊತೆ ಮಾತನಾಡಿದ ಅವರು “ಪಿಎಸ್‌ಐ ಹಾಗೂ ಇತರೆ ಸರ್ಕಾರಿ ಹುದ್ದೆಗಳನ್ನು ಹಣ ಪಡೆದು ಸೇಲ್ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಈಗ ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಅವರು ಮುಖ್ಯಮಂತ್ರಿ ಸ್ಥಾನವನ್ನು ಹಣಕ್ಕೆ ಮಾರಾಟ ಮಾಡುತ್ತಿರುವ ವಿಚಾರವನ್ನು ಇತ್ತಿಚೇಗೆ ಬೆಳಗಾವಿಯಲ್ಲಿ ವ್ಯಕ್ತಪಡಿಸಿದ್ದಾರೆ. ರೂ 2500 ಕೋಟಿ ಕೊಟ್ಟರೆ ಸಿಎಂ ಸ್ಥಾನ ಸಿಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಹೇಳಿದ್ದಾರೆ. ಅಷ್ಟು ದೊಡ್ಡ ಮೊತ್ತವನ್ನು ಬಿಜೆಪಿಯಿಂದ ಸಿಎಂ ಆದವರು ಹೇಗೆ ಹೊಂದಿಸಿದ್ದಾರೆ ಹಾಗೂ ಹಣ ಪಡೆದ ಹೈಕಮಾಂಡ್ ಅದರಿಂದ ಏನು ಮಾಡಿದೆ ಎಂಬ ಸತ್ಯ ಬಯಲಾಗಬೇಕು” ಎಂದು ಹೇಳಿದ್ದಾರೆ.
“ಭಾರತೀಯ ಜನತಾ ಪಕ್ಷ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕವಾಗಿ ಪರಿಣಮಿಸಿದ್ದು ಮುಖ್ಯಮಂತ್ರಿಯಂತಹ ಪವಿತ್ರವಾದ ಹುದ್ದೆಯನ್ನು ಸವಾಲಿಗೆ ಇಟ್ಟು ಹೆಚ್ಚು ಹಣ ಕೊಟ್ಟವರಿಗೆಸೇಲ್ ಮಾಡುವ ಪ್ರವೃತ್ತಿ ಒಳ್ಳೆಯದಲ್ಲ. ಮೇಲಿಂದ ಮೇಲೆ ಕರ್ನಾಟಕಕ್ಕೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಸನಗೌಡ ಪಾಟೀಲ ಯತ್ನಾಳ ಅವರು ಬಹಿರಂಗ ಪಡಿಸಿರುವ ವಿಷಯದ ಕುರಿತು ಪ್ರತಿಕ್ರಿಯಿಸಬೇಕು. ಇದರಲ್ಲಿ ಅಮಿತ್ ಶಾ ಅವರಿಗೆ ಎಷ್ಟು ಪರ್ಸೆಂಟ್ ಕಮಿಷನ್ ತಲುಪಿದೆ ಎನ್ನುವುದು ಬಯಲಾಗಬೇಕು” ಅಲ್ಲದೆ ರಾಜ್ಯದಲ್ಲಿ ನಡೆದ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ವಿಭಾಗದ ಕೇಸುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಡಿಜಿಪಿ ಅಮೃತ್ ಪೌಲ್ ಅವರನ್ನು ಇದ್ದಕ್ಕಿದ್ದಂತೆ ಏಕೆ ಎತ್ತಂಗಡಿ ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಆನಂದ ಹಂಪಣ್ಣವರ ಹೇಳಿದರು.