ನಮ್ಮ ದೇಶದ ಮತದಾರರ ಗುಣಮಟ್ಟದ ಕುರಿತು ಒಂದು ಚಿಂತನೆ.

ಉಮೇಶ ಗೌರಿ (ಯರಡಾಲ)

ಮತದಾರರು ಬುದ್ದಿವಂತರೇ, ವಿವೇಚನೆಯುಳ್ಳವರೇ, ಸಂವೇದನಾಶೀಲರೇ, ಸೂಕ್ಷ್ಮಗ್ರಾಹಿಗಳೇ,
ಒಳ್ಳೆಯವರೇ, ಅಥವಾ ದಡ್ಡರೇ, ಸ್ವಾರ್ಥಿಗಳೇ, ಆಮಿಷಗಳಿಗೆ ಬಲಿಯಾಗುವವರೇ, ಮೂರ್ಖರೇ, ಮುಗ್ದರೇ ...

ಮೇಲೆ ಹೇಳಿದ ಎಲ್ಲಾ ರೀತಿಯ ಜನರು ಇರುತ್ತಾರೆ. ಇದು ಬೃಹತ್ ವೈವಿಧ್ಯಮಯ ದೇಶ. ಹಾಗೆ ನಿರ್ದಿಷ್ಟವಾಗಿ ಹೇಳುವುದು ಸಾಧ್ಯವಿಲ್ಲ ಎಂಬ ವಾದಗಳಿಗಿಂತ ಕಳೆದ ಸುಮಾರು 30 ವರ್ಷಗಳ ಕೇಂದ್ರ ಮತ್ತು ರಾಜ್ಯಗಳ ಚುನಾವಣಾ ಫಲಿತಾಂಶಗಳು, ಆಯ್ಕೆಯಾದ ಪಕ್ಷಗಳು, ಅಭ್ಯರ್ಥಿಗಳು, ಅವರ ಹಿನ್ನೆಲೆ, ಅವರು ಚುನಾವಣೆ ಗೆಲ್ಲಲು ಅನುಸರಿಸಿದ ಮಾರ್ಗಗಳು ಎಲ್ಲವನ್ನೂ  ವಿಮರ್ಶಿಸಿದಾಗ, 

ರಾಜಕೀಯ ಪಕ್ಷಗಳ ನಾಯಕರು, ಪತ್ರಕರ್ತರು, ಸಿನೆಮಾ ನಟ ನಟಿಯರು, ಬಹುತೇಕ ಜನಪ್ರಿಯ ವ್ಯಕ್ತಿಗಳು ಮತದಾರರನ್ನು ಬುದ್ದಿವಂತರು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರ ಪರವಾಗಿ ಮಾತನಾಡುತ್ತಾರೆ,…

ಸಾಮಾಜಿಕ ಹೋರಾಟಗಾರರು, ಶೋಷಿತ ಸಮುದಾಯಗಳ ನಾಯಕರು, ಕೆಲವು ಚಿಂತಕರು,
ಜನ ತುಂಬಾ ದಡ್ಡರು ಮತ್ತು ಸ್ವಾರ್ಥಿಗಳು. ಅನೇಕ ರೀತಿಯ ಆಮಿಷಗಳಿಗೆ ಒಳಗಾಗಿ ಆ ತಕ್ಷಣದ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ತಪ್ಪಾಗಿ ಮತ ಹಾಕುತ್ತಾರೆ ಎಂಬ ಅಭಿಪ್ರಾಯ ಪಡುತ್ತಾರೆ,…

ಮುಖ್ಯವಾಗಿ, ಕೆಲ ರಾಜ್ಯಗಳಲ್ಲಿ ಅತಿಹೆಚ್ಚು ಕೊಲೆಗಡುಕರು, ಅತ್ಯಾಚಾರಿಗಳು, ಹಪ್ತಾ ವಸೂಲಿಗಾರರು, ವೃತ್ತಿ ನಿರತ ದರೋಡೆಕೋರರು ಪ್ರಜಾಪ್ರಭುತ್ವದ ಮಾದರಿಯ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸಿ ಗೆದ್ದು ಬರುತ್ತಾರೆ.ಕರ್ನಾಟಕದಂತ ರಾಜ್ಯದಲ್ಲಿ ಸಹ ಕೆಲವು ಕ್ಷೇತ್ರಗಳಲ್ಲಿ ಎಲ್ಲಿಂದಲೋ ರಿಯಲ್ ಎಸ್ಟೇಟ್ ದಂಧೆಯಲ್ಲಿ ಮಾಡಿದ ಹಣವನ್ನು ತಂದು ಚುನಾವಣೆಯಲ್ಲಿ ಗೆಲ್ಲುವುದು, ಅಕ್ರಮವಾಗಿ ಭೂಮಿ ಅಗೆದು ಹಣ ಮಾಡಿ ಚುನಾವಣೆ ಗೆದ್ದವರು, ಜನರ ಧಾರ್ಮಿಕ ನಂಬಿಕೆಗಳನ್ನು ಮೋಸದಿಂದ ಶೋಷಣೆ ಮಾಡಿ ಆಯ್ಕೆಯಾದವರು, ಗೆದ್ದ ನಂತರ ತಮ್ಮನ್ನೇ ಹಣಕ್ಕಾಗಿ ಮಾರಿಕೊಂಡ ಪಕ್ಷಾಂತರಿಗಳನ್ನು ಗೆಲ್ಲಿಸುತ್ತಲೇ ಇದ್ದಾರೆ. ಅಪರೂಪದ ಕೆಲವು ಉದಾಹರಣೆ ಹೊರತುಪಡಿಸಿದರೆ ಬಹುತೇಕ ಭ್ರಷ್ಟರು, ದುಷ್ಟರೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ. ಬಹುತೇಕ ಮತದಾರರಿಗೆ ತಾವು ಶೋಷಣೆಗೆ ಒಳಗಾಗುತ್ತಿದ್ದೇವೆ ಎಂಬ ಅರಿವೇ ಇಲ್ಲ. ನಮ್ಮ ಕ್ಷೇತ್ರದ ಸಂಪನ್ಮೂಲಗಳ ನಿರ್ವಹಣೆಯಲ್ಲಿ ನಮ್ಮ ಪಾಲು ಇದೆ ಎಂಬ ಜ್ಞಾನವೇ ಇಲ್ಲ.

ವಾಸ್ತವವಾಗಿ ಮತದಾರರ ಗುಣಮಟ್ಟವೇ ಉತ್ತಮವಾಗಿಲ್ಲ. ಅವರನ್ನು ಸುಲಭವಾಗಿ ವಂಚಿಸಬಹುದು ಹಾಗೆಯೇ ಬಹಳಷ್ಟು ಮತದಾರರು ವಂಚಕರೇ ಆಗಿರುತ್ತಾರೆ.ಬಹುತೇಕ ಮತದಾರರು ಜಾತಿ ಧರ್ಮ ಹಣ ಸಂಬಂಧಗಳು ವೈಯಕ್ತಿಕ ಹಿತಾಸಕ್ತಿಯನ್ನೇ ತಮ್ಮ ಮತದಾನದ ಹಕ್ಕಿನ ಮೂಲ ಮಾನದಂಡಗಳಾಗಿ ಪರಿಗಣಿಸುತ್ತಾರೆ. ಸಮಾಜದ, ದೇಶದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಅವರ ಚಿಂತನೆ ಇರುವುದಿಲ್ಲ.

ಅದರ ಪರಿಣಾಮವೇ ಇಂದು ಪ್ರಜಾಪ್ರಭುತ್ವ ಚುನಾವಣಾ ಜನಪ್ರಿಯತೆಯ ಆಧಾರವೇ ಪ್ರಮುಖವಾಗಿ ಜನರ ಕಲ್ಯಾಣ ಹಿನ್ನೆಲೆಗೆ ಸರಿದಿದೆ. ಸಾಮಾಜಿಕ ಸಾಮರಸ್ಯ ಹಾಳಾದರು, ಟೋಲ್ ಸಂಗ್ರಹ ಕಿಲೋಮೀಟರ್ ಗಳಲ್ಲಿ ಹೆಚ್ಚಾದರು, ಬೆಲೆ ಏರಿಕೆ ಗಗನಕ್ಕೆ ತಲುಪಿದರು, ಶಿಕ್ಷಣ ಆರೋಗ್ಯ ದುಬಾರಿಯಾದರು, ಜೀವನ ನಿರ್ವಹಣೆ ಕಷ್ಟವಾದರು ಜನ ಮಾತ್ರ ವಿವೇಚನೆ ಇಲ್ಲದೆ ಹಣ-ಹೆಂಡ,ಸೀರೆ-ಸರಾಯಿ,ನಿಕ್ಕರ-ಕುಕ್ಕರ್,ಬಾಡೂಟ ಇತ್ಯಾದಿಗಳಿಗೆ ತಮ್ಮನ್ನು ಮಾರಿ ಕೊಳ್ಳುತ್ತಾರೆ.

ಆದ್ದರಿಂದ ನಮ್ಮ ದೇಶದ ಮತದಾರ ಇನ್ನೂ ನಿಜವಾದ ಪ್ರಜಾಪ್ರಭುತ್ವ ನಿರೀಕ್ಷಿಸುವ ಪ್ರಬುದ್ದತೆಯ ಮಟ್ಟ ತಲುಪಿಲ್ಲ ಎಂದೆನಿಸುತ್ತದೆ. ನಿಮ್ಮ ಅಭಿಪ್ರಾಯ ಇದಕ್ಕಿಂತ ಭಿನ್ನವಾಗಿದ್ದರೆ ಅದನ್ನೂ ಸ್ವಾಗತಿಸುತ್ತೇವೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";