ಕೆಎಂಎಫ್ ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ತುಪ್ಪ ! ವ್ಯವಸ್ಥಿತ ಮಾರಾಟ ಜಾಲವೊಂದು ಪತ್ತೆ;

ಉಮೇಶ ಗೌರಿ (ಯರಡಾಲ)

ಮೈಸೂರು: ಜಿಲ್ಲೆಯ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಹೊಸಹುಂಡಿ ಗ್ರಾಮದಲ್ಲಿ ನಕಲಿ ನಂದಿನಿ ತುಪ್ಪದ ಗೋಡಾನ್ ಪತ್ತೆಯಾಗಿದೆ. ಸ್ಥಳೀಯರಿಗೆ ಮೊದಲು ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಸದಸ್ಯರಿಗೆ ಈ ಜಾಲದ ಬಗ್ಗೆ ಮಾಹಿತಿ ನೀಡಿದರು. ನಿನ್ನೆ (ಡಿಸೆಂಬರ್​ 16) ಸ್ಥಳಕ್ಕೆ ಸಮಿತಿ ಸದಸ್ಯರು ಹೋಗಿ ಪರಿಶೀಲಿಸಿದಾಗ ನಕಲಿ ಜಾಲ ಪತ್ತೆಯಾಗಿದೆ. ಇಲ್ಲಿ ನಂದಿನ ತುಪ್ಪದ ಕವರ್ ತಯಾರಿಸುವ ಕೆಲಸ, ಅಸಲಿ ನಂದಿನಿ ತುಪ್ಪಕ್ಕೆ ಕಲಬೆರಕೆ ಮಾಡುವ ಕೆಲಸ ಹಾಗೂ ಟಿನ್‌ಗಳಿಗೆ ತುಂಬುವ ಕೆಲಸ ಮಾಡಲಾಗುತಿತ್ತು.

ತಲಾ 15 ಕೆಜಿ ತೂಕದ ಸುಮಾರು 1000 ಟಿನ್‌ಗಳು ದೊರಕಿವೆ. ರಾಶಿಗಟ್ಟಲೆ ವನಸ್ಪತಿ, ಪಾಮ್ ಆಯಿಲ್, ಕಲರಿಂಗ್ ಕೆಮಿಕಲ್, ನಂದಿನಿ ಬ್ರ್ಯಾಂಡ್ ತುಪ್ಪದ ನಕಲಿ ಕವರ್, ಪ್ಯಾಕಿಂಗ್ ಯೂನಿಟ್ ಎಲ್ಲವನ್ನೂ ಕಂಡು ಸಮಿತಿ ಸದಸ್ಯರೂ ಅವಕ್ಕಾಗಿದ್ದಾರೆ. ಕೂಡಲೇ ಪೊಲೀಸರು, ಕರ್ನಾಟಕ ಹಾಲು ಉತ್ಪನ್ನಗಳ ಸಹಕಾರ ಒಕ್ಕೂಟ, ಫುಡ್ ಸೇಫ್ಟಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ಕೆಎಂಎಫ್ ಉತ್ಪನ್ನಗಳ ಬಗ್ಗೆಯೇ ಗ್ರಾಹಕರು ಅನುಮಾನಗೊಳ್ಳುವಂತಹ ಜಾಲವಾದ ಹಿನ್ನೆಲೆಯಲ್ಲಿ ಮೈಮುಲ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಇನ್ನು ಮೈಸೂರು ಜಿಲ್ಲೆಯಾದ್ಯಂತ ಈ ನಕಲಿ ತುಪ್ಪವನ್ನು ಸರಬರಾಜು ಮಾಡಲಾಗಿದೆ. ತಮಿಳುನಾಡು ಮೂಲದ ಆರೋಪಿ ಈ ಜಾಲದ ಕಿಂಗ್‌ಪಿನ್ ಅನ್ನುವ ಮಾಹಿತಿ ಸಹಾ ಗೊತ್ತಾಗಿದೆ. ಸದ್ಯ ಆರೋಪಿಗಳು ಪರಾರಿಯಾಗಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಸ್ಥಳೀಯ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ.  ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ತುಪ್ಪ ಆರೋಗ್ಯಕರ. ಆದರೆ ಡಾಲ್ಡಾ ದೇಹಕ್ಕೆ ಅಪಾಯಕಾರಿ. ಅದರಲ್ಲೂ ಯಾವ್ಯಾವುದೋ ಎಣ್ಣೆ, ರಾಸಾಯನಿಕ ಬಣ್ಣ ಬಳಸಿದ ನಕಲಿ ತುಪ್ಪ ದೇಹದಲ್ಲಿ ಕ್ಯಾನ್ಸರ್‌ನಂತಹ ಗಂಭೀರ ಸಮಸ್ಯೆ ಉಂಟು ಮಾಡಬಹುದು. ಹೀಗಾಗಿಯೇ ಆಹಾರ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ನಂತರ ಈ ನಕಲಿ ತುಪ್ಪ ಎಷ್ಟು ಅಪಾಯಕಾರಿ ಎನ್ನುವುದು ಗೊತ್ತಾಗಲಿದೆ. ಒಟ್ಟಾರೆ ಇದೆಲ್ಲಾ ಏನೇ ಇರಲಿ ಆರೋಗ್ಯದ ಜೊತೆ ಆಟವಾಡುವ ಇಂತವರಿಗೆ ತಕ್ಕ ಶಿಕ್ಷೆಯಾಗಬೇಕಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";