ಐಕ್ಯತೆಯ ಸಂಕೇತ, ಗಣೇಶ ಹಬ್ಬ ಸಂಭ್ರಮದ ಉತ್ಸವವಾಗಲಿ.! ಕೋಮುವಾದಿಗಳ ಮನಸ್ಥಿತಿ ಆಗದಿರಲಿ

ಉಮೇಶ ಗೌರಿ (ಯರಡಾಲ)

ಲೇಖಕರು:ಉಮೇಶ ಗೌರಿ(ಯರಡಾಲ)

ಗಣಪತಿ ಹಬ್ಬ ಎಲ್ಲಾ ಹಬ್ಬಗಳಲ್ಲಿ ಅತ್ಯಂತ ಅದ್ದೂರಿ ಹಾಗೂ ಕಲರ್ ಪುಲ್ ಹಬ್ಬ. ಗಣಪನ ಹುಟ್ಟು ಎಲ್ಲರಿಗೂ ಗೊತ್ತಿರುವುದೇ. ಪುರಾಣಗಳ ಉಲ್ಲೇಖದ ಪ್ರಕಾರ ಗಣೇಶನ ಹುಟ್ಟೇ ರೋಚಕ. ಆತ ನಡೆದು ಬಂದ ಹಾದಿ ಅದ್ಭುತ. ಆತನ ವಿಶೇಷತೆ, ಬುದ್ಧಿ ಚಾತುರ್ಯತೆ ಬಗ್ಗೆ ಇರುವ ಉಪಕಥೆಗಳು ಸಾವಿರ. ಅಗ್ರಪೂಜೆಗೆ ಅಧಿಪತಿ, ವಿಘ್ನ ನಿವಾರಕ, ಸಂಕಷ್ಟ ಹರ, ಹೀಗೆ ಒಂದಾ ಎರಡಾ ಸಾಕಷ್ಟು ನಾಮಧೇಯಗಳ ಒಡೆಯ ಗಣಪ. ಗಣೇಶ ಹಬ್ಬ ಜಾತ್ಯಾತೀತವಾಗಿ, ಪಕ್ಷತೀತಾವಾಗಿ, ಧರ್ಮಾತೀಥವಾಗಿ ಆಚರಿಸುವ ಉತ್ಸವ.

ಆದರೆ ಗಣೇಶ ಹಬ್ಬ, ಅದು ಉತ್ಸವದ ಆಚರಣೆಯಾಗಿ ಆರಂಭವಾಗಿದ್ದು ಹೇಗೆ ? ಅದರ ಉದ್ದೇಶ ಏನು ? ಯಾವಾಗ ಆರಂಭವಾಯ್ತು ? ಎನ್ನುವುದು ಅನೇಕರಿಗೆ ಗೊತ್ತೇ ಇಲ್ಲ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಗಣೇಶ ಹಬ್ಬ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ.

ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು 1893ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನೂ ಒಗ್ಗೂಡಿಸಲು ಗಣೇಶ ಹಬ್ಬ ಆಚರಣೆಗೆ ತಂದರು. ಅಷ್ಟೇ ಅಲ್ಲ ಗಣೇಶ ಉತ್ಸವವನ್ನು ಪ್ರತಿ ವರ್ಷ ಅತ್ಯಂತ ವ್ಯವಸ್ಥಿತವಾಗಿ ಆಚರಣೆ ಮಾಡುವ ಎಲ್ಲಾ ವ್ಯವಸ್ಥೆಗಳನ್ನು ತಿಲಕರು ಮಾಡಿದರು.

ಸ್ವಾತಂತ್ರ ಹೋರಾಟಕ್ಕೆ ಮುನ್ನುಡಿ ಬರೆದ ಗಣೇಶೋತ್ಸವ: ತಿಲಕರು ಗಣೇಶ ಉತ್ಸವಕ್ಕೆ ಅಷ್ಟೊಂದು ಮಹತ್ವ ನೀಡಲು ಕಾರಣ ಸಹಾ ಇತ್ತು. ಆ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದರಿಂದ ಬ್ರಿಟಿಷರು ಅದನ್ನು ಹತ್ತಿಕ್ಕಲು ಸಾಕಷ್ಟು ಕಾನೂನುಗಳನ್ನು ಜಾರಿಗೊಳಿಸಿದ್ದರು. ಸಾಮಾಜಿಕ ಹಾಗೂ ರಾಜಕೀಯ ಕಾರಣಗಳಿಗೆ ಸಭೆ ಗುಂಪು ಸೇರುವುದನ್ನು ನಿಷೇಧಿಸಿದ್ದರು. ಆದರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಇದು ಅನ್ವಯವಾಗುತ್ತಿರಲಿಲ್ಲ. ಬ್ರಿಟಿಷರು ಸ್ವಾತಂತ್ರ್ಯ ಹೋರಾಟ ಹತ್ತಿಕ್ಕಲು ಚಾಪೆ ಕೆಳಗೆ ನುಸುಳಿದರೆ ತಿಲಕರು ಗಣೇಶ ಹಬ್ಬದ ಹೆಸರಿನಲ್ಲಿ ರಂಗೋಲಿ ಕೆಳಗೆ ನುಸುಳಿ ಆ ಹೋರಾಟಕ್ಕೆ ಮತ್ತೊಂದು ರೂಪಕೊಟ್ಟು ಜೀವಂತವಾಗಿರಿಸಿದರು. ಅಷ್ಟೇ ಅಲ್ಲ ಮುಂಬಯಿ ಬ್ರಿಟಿಷ್ ಆಡಳಿತದಲ್ಲಿ ಪ್ರಪ್ರಥಮ ಬಾರಿಗೆ ಬೀದಿಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಜನರ ಮನಸಿನಲ್ಲಿ ಗಣೇಶನನ್ನು ಉಳಿಸುವಲ್ಲಿ ಯಶಸ್ವಿಯಾದರೂ. ಇನ್ನು ಆ ಕಾಲದಲ್ಲೇ ಗಣಪ ಜಾತಿ ಧರ್ಮಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದ ಎನ್ನುವುದು ಗಮನಾರ್ಹ.

ಆದರೆ ದುರಂತ ಅಂದರೆ ಒಗ್ಗಟ್ಟಿಗಾಗಿ ಆರಂಭವಾದ ಗಣೇಶ ಉತ್ಸವ ಇವತ್ತು ಸ್ವ ಪ್ರತಿಷ್ಠೆ, ತೋರಿಕೆ, ಸ್ವಾರ್ಥ, ಗುಂಪುಗಾರಿಕೆಗೆ ಸಿಲುಕಿ ತನ್ನ ಮೂಲ ಮಹತ್ವವನ್ನೇ ಕಳೆದುಕೊಳ್ಳುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವ ವಿಚಾರ ಗಲಾಟೆಗಳಿಗೆ ಕಾರಣವಾಗುತ್ತಿದೆ. ಗಣೇಶ ಹಬ್ಬ ಅಂದರೆ ಮೋಜು, ಮಸ್ತಿ ಅನ್ನೋ ರೀತಿಯಾಗಿದೆ.

ಗಣೇಶೋತ್ಸವ ಈ ಬಾರಿ ಸಾವರ್ಕರ್‌ ಉತ್ಸವ:

ಕಳೆದ ಎರಡು ವಾರಗಳಿಂದ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಬಗ್ಗೆ ಹಲವಾರು ಚರ್ಚೆಗಳು ಆರಂಭಗೊಂಡಿದ್ದು ಸಾವರ್ಕರ್ ಸ್ವಾತಂತ್ರ್ಯ ಹೋರಾಟ ಮತ್ತು ದೇಶಭಕ್ತಿಯ ಬಗ್ಗೆ ಪರ ವಿರೋಧದ ಚರ್ಚೆಗಳು ಶುರುವಾಗಿವೆ. ಇತ್ತೀಚೆಗೆ ಸಾವರ್ಕರ್ ಶೈಕ್ಷಣಿಕ ಪಠ್ಯದಲ್ಲೂ ಸ್ಥಾನ ಪಡೆದಿದ್ದು ಎಡಪಂಥಿಯರು ಹಾಗೂ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾದ ಬಿಜೆಪಿ ಸರ್ಕಾರ,

ಹಿಂದೆಂದೂ ಕಂಡರಿಯದ ಸ್ವಾತಂತ್ರ್ಯ ವೀರ ಸೇನಾನಿಗಳ ಪಟ್ಟಿಯಲ್ಲಿ ಬ್ರಿಟಿಷ್ ಅಧಿಕಾರಿಗಳ ಹಿಂಸೆ ತಾಳಲಾರದೇ ಕ್ಷಮಾಪಣಾ ಪತ್ರ ಬರೆದು ಪಿಂಚಣಿ ಗಿಟ್ಟಿಸಿಕೊಂಡ ಸಾವರ್ಕರ್ ಅದ್ಹೇಗೆ ಸ್ವಾತಂತ್ರ್ಯ ಹೋರಾಟಗಾರನಾಗಲು ಸಾಧ್ಯ ಅನ್ನೋ ಪ್ರಶ್ನೆ ಎತ್ತಿದ್ದಾರೆ.

ಇತಿಹಾಸದ ಪುಟದಲ್ಲಿ ಸಾವರ್ಕರ್ ಬಗ್ಗೆ ದಾಖಲಾದ ಸಂಗತಿಗಳ ಬಗ್ಗೆ ಹಲವಾರು ಹಿರಿಯ ಚಿಂತಕರು ಇತಿಹಾಸ ತಜ್ಞರು ಸಾವರ್ಕರ್ ಓರ್ವ ಬ್ರಿಟಿಷ್ ಗುಲಾಮ ಎಂದು ಜರಿದರೆ ಬಿಜೆಪಿ ನಾಯಕರು ಹಾಗೂ ವಕ್ತಾರರು ಸಾವರ್ಕರ್ ವೀರ ಸೇನಾನಿ ಆತ ದೇಶದ ಸ್ವಾತಂತ್ರ್ಯಕ್ಕಾಗಿ ಬಂಧನಕ್ಕೊಳಪಟ್ಟು ಅಂಡಮಾನಿನ ಜೈಲಲ್ಲಿ ಕರಿ ನೀರಿನ ಶಿಕ್ಷೆ ಅನುಭವಿಸಿದ ವೀರ ಸೇನಾನಿ ಎಂದು ಬಣ್ಣಿಸಿದ್ದಾರೆ.

ಆರೋಪ ಪ್ರತ್ಯಾರೋಪಗಳು ಅತಿರೇಖಕ್ಕೆ ಮುಟ್ಟಿದ್ದು ಇದೀಗ ಗಣೇಶೋತ್ಸವದಲ್ಲಿ ವೀರ ಸಾವರ್ಕರ್ ಫೋಟೋ ಇಡುವುದಾಗಿ ಬಿಜೆಪಿ ನಾಯಕರು ಘೋಷಿಸಿದ್ದಾರೆ. ಈ ಘೋಷಣೆಯ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಇದಕ್ಕೆ ಪ್ರತಿಯಾಗಿ ಬುದ್ದ ಬಸವಣ್ಣ ಮತ್ತು ಅಂಬೇಡ್ಕರ್ ಪೋಟೋ ಇಡುವುದಾಗಿ ಪ್ರಕಟಿಸಿದ್ದಾರೆ. ಈ ಎರಡೂ ಪಕ್ಷಗಳ ನಡುವೆ ಇತ್ತೀಚೆಗೆ ಅಗಲಿದ ಚಿತ್ರನಟ ಪುನೀತ್ ಭಾವಚಿತ್ರ ಇಡುವ ಮೂಲಕ ಕನ್ನಡ ಪ್ರೇಮ ಮೆರೆಸುವುದಾಗಿ ಕೆಲ ಕನ್ನಡ ಪರ ಸಂಘಟನೆಗಳು ಘೋಷಿಸಿದ್ದು ಒಟ್ಟಾರೆ ಸಾವರ್ಕರ್ ಈ ಗಣೇಶೋತ್ಸವದಲ್ಲಿ ರಾರಾಜಿಸುವ ಬಗ್ಗೆ ತರಹೇವಾರಿ ಚರ್ಚೆಗಳು ನಡೆದಿವೆ.

ಬ್ರಿಟಿಷ್ ಅಧಿಕಾರಿಗಳ ವಿರುದ್ದ ಬಂಡೆದ್ದು ಹೋರಾಡಲು ಯುವ ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ತಿಲಕರು ಈ ಗಣೇಶೋತ್ಸವವನ್ನು ನೆಪವಾಗಿಸಿ ದೇಶಕ್ಕೆ ಸ್ವತಂತ್ರ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಗಣೇಶೋತ್ಸವ ಇದೀಗ ಪರಸ್ಪರ ಎರಡೂ ಪಕ್ಷಗಳ ಕೆಸರೆರಚಾಟಕ್ಕೆ ಕಾರಣವಾಗಿದ್ದು ದುರಂತ.

ಜನರ ಭಾವನಾತ್ಮಕ ವಿಷಯಗಳ ಮೇಲೆ ಚಲ್ಲಾಟವಾಡದೆ ಗಣೇಶ ಹಬ್ಬದ ಆಚರಣೆಯ ಪರಂಪರೆಯ ಮೂಲ ಆಶಯವನ್ನು ಉಳಿಸಿ ಬೆಳೆಸಬೇಕು ಅನ್ನೋದಷ್ಟೇ ಈ ಬರಹದ ಕಳಕಳಿ.

ಎಲ್ಲಾ ಗಣಪತಿ‌ ಭಕ್ತರು, ಪ್ರೇಮಿಗಳಲ್ಲಿ ಕಳಕಳಿಯ ಮನವಿ. ಈ ಬಾರಿಯಾದರೂ ಮಣ್ಣಿನ ಗಣಪನನ್ನೇ ತಂದು ಆರಾಧಿಸಿ, ಪೂಜಿಸಿ, ಸ್ತುತಿಸಿ. ವಿಘ್ನನಿವಾರಕನ ಹೆಸರಿನಲ್ಲಿ ವಿಘ್ನಗಳನ್ನು ಮಾಡದಿರಿ. ಎಲ್ಲರಿಗೂ ಗಣೇಶ ಚತುರ್ಥಿ ಒಳಿತು ಮಾಡಲಿ ನಾಡಿನಲ್ಲಿ ಶಾಂತಿ ನೆಲೆಸಲಿ ನಾಡು ಸುಭೀಕ್ಷವಾಗಿರಲಿ.

 

ಲೇಖಕರು: ಉಮೇಶ ಗೌರಿ (ಯರಡಾಲ)
ಮೊ.8867505678

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";