ನವಜಾತ ಗಂಡು ಮಗುವನ್ನು ಗಿಡಗಂಟಿಯಲ್ಲಿ ಎಸೆದು ಅಮಾನವೀಯತೆ.!ರಾತ್ರಿಯಿಡೀ ನರಳಿ ಪ್ರಾಣ ಬಿಟ್ಟ ಕಂದ

ಉಮೇಶ ಗೌರಿ (ಯರಡಾಲ)

ಬೆಳಗಾವಿ: ಇಲ್ಲಿನ ರಾಮತೀರ್ಥ ನಗರದ ಕಟ್ಟಡವೊಂದರ ಕಾಂಪೌಂಡ್‌ನಲ್ಲಿ ಬಿಸಾಕಿದ್ದ ನವಜಾತ ಗಂಡು ಶಿಶು ರಾತ್ರಿಯಿಡೀ ನರಳಾಡಿ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ನಡೆದಿದೆ.ಇದು ಯಾರ ಮಗು, ಎಸೆದವರು ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ತಾಯಿಯ ಮಡಿಲಲ್ಲಿ ಆರೈಕೆಯಾಗಬೇಕಿದ್ದ ಶಿಶುವನ್ನು ಗಿಡಗಂಟಿಯಲ್ಲಿ ಎಸೆದು ಅಮಾನವೀಯತೆ ತೋರಿದ್ದಾರೆ. ಪೋಷಕರೇ ಶಿಶುವನ್ನು ಬಿಸಾಕಿದ್ದಾರೆಯೇ ಅಥವಾ ಬೇರೆ ಯಾರಾದರೂ ಈ ಕೃತ್ಯ ಎಸಗಿದ್ದಾರಾ ಎಂಬುದು ಪತ್ತೆಯಾಗಬೇಕಿದೆ.

ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾತ್ರಿಯಿಡೀ ನರಳಿ ನರಳಿ ಪ್ರಾಣಬಿಟ್ಟ ಶಿಶುವಿನ ಮೃತದೇಹವನ್ನು ಮರಣೊತ್ತರ ಪರೀಕ್ಷೆಗಾಗಿ ಬಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ.

ಮಮ್ಮಲ ಮರುಗಿದ ಜನ: ಗಿಡಗಂಟಿಗಳ ಮಧ್ಯೆ ಇಂದು ಬೆಳಗ್ಗೆ ನವಜಾತ ಗಂಡು ಶಿಶುವನ್ನು ನೋಡಿದ ಸ್ಥಳೀಯರು ತಕ್ಷಣವೇ ರಕ್ಷಣೆಗೆ ಧಾವಿಸಿದ್ದರು. ಆದ್ರೆ ಅದಾಗಲೇ ಶಿಶು ಮೃತಪಟ್ಟಿತ್ತು. ಆಗ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಆಗಮಿಸಿ, ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಕಂದಮ್ಮ ಕಣ್ಣು ಬಿಡುವ ಮುನ್ನವೇ ಮೃತಪಟ್ಟಿರುವುದನ್ನು ನೋಡಿ ಸ್ಥಳೀಯರು ಮಮ್ಮಲ ಮರುಗಿ, ಮಗು ಬಿಸಾಕಿ ಹೋದವರಿಗೆ ಹಿಡಿಶಾಪ ಹಾಕಿದರು.

Share This Article
";