ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: 2019 ರ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರೀ ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್ ಈಗಾಗಲೇ ಕರ್ನಾಟಕದಲ್ಲಿರುವ ತನ್ನ ಹಾಲಿ ಸಂಸದರಲ್ಲಿ ಕೆಲವರಿಗೆ ಟಿಕೆಟ್ ನೀಡದೇ ಹೊಸ ಮುಖಗಳಿಗೆ ಗಾಳ ಹಾಕುವ ಲೆಕ್ಕಾಚಾರವನ್ನ ಹಾಕಿಕೊಂಡಿದೆ.
ವಿಧಾನಸಭಾ ಚುನಾವಣೆಯ ಟಿಕೆಟ್ ನೀಡಿದ ಮಾದರಿಯಲ್ಲೇ ವಯೋಮಿತಿಯ ಆಧಾರದ ಮೇಲೆ ಹಾಗೂ ಮುಂದಿನ ತಲೆಮಾರಿನ ನಾಯಕರನ್ನು ಬೆಳೆಸುವ ಅನಿವಾರ್ಯತೆ ದೃಷ್ಟಿಯಿಂದ ಕೆಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಿದೆ ಎನ್ನಲಾಗಿದೆ. ಇತ್ತ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಹಿಂದೂ ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗಡೆ ಅವರಿಗೆ ಈ ಬಾರೀ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ
ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆಗಳು ಕಮಲ ಪಾಳಯದಲ್ಲಿ ಹುಟ್ಟಿಕೊಂಡಿದೆ. ಇದರ ಮಧ್ಯೆ ಇಷ್ಟು ದಿನ ತೆರೆಮರೆಯಲ್ಲಿದ್ದ ಅನಂತ್ ಕುಮಾರ್ ಹೆಗಡೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪ್ರತ್ಯಕ್ಷರಾಗಿದ್ದಾರೆ. ಈ ಮೂಲಕ ಅನಂತ್ ಕುಮಾರ್ ಹೆಗಡೆ ಮತ್ತೊಮ್ಮೆ ಲೋಕಸಭಾ ಚುನಾವಣೆ ಅಖಾಡಕ್ಕಿಳ್ಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಅನಾರೋಗ್ಯದ ಹಿನ್ನಲೆ ರಾಜಕೀಯದಲ್ಲಿ ಸೈಲೆಂಟ್ ಆಗಿರುವ ಅನಂತ್ ಕುಮಾರ್ ಹೆಗಡೆ ಅವರು ಹೈಕಮಾಂಡ್ ನಾಯಕರಿಂದಲೂ ಅಂತರವನ್ನ ಕಾಯ್ದುಕೊಂಡಿದ್ದಾರೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅನಂತ್ ಕುಮಾರ್ ಹೆಗಡೆ ಅವರಿಗೆ ಟಿಕೆಟ್ ಕೊಡಲ್ಲ ಎಂಬ ಮಾತುಗಳು ಕೇಳಿ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅನಂತ್ ಕುಮಾರ್ ಹೆಗಡೆ ಮಾತನಾಡಿ, ಇದು ರಾಜಕೀಯ ತೀರ್ಮಾನವಲ್ಲ, ಇದು ನನ್ನ ವಯಕ್ತಿಕ ತೀರ್ಮಾನ . ಈ ತೀರ್ಮಾನದ ಬಗ್ಗೆ ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಆದರೆ ಇವತ್ತು ಹೊಸ ತಿರುವು ಪಡೆದುಕೊಂಡು ಹೊರಟಿದೆ ಎಂದು ಹೇಳಿದ್ದಾರೆ.
ಆರು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಹಿಂದುತ್ವವಾದಿ, ಅನಂತ್ ಕುಮಾರ್ ಹೆಗಡೆ ಅವರು ಯಾವುದೇ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಚುನಾವಣಾ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಂತೆ ತೆರೆಮರೆಗೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನಂತ್ ಕುಮಾರ್ ಹೆಗಡೆಗೆ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಸುವ ಕುರಿತು ಇಂಗಿತ ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಚಾರದ ವೇಳೆ ಉತ್ತರ ಕನ್ನಡ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ರು ಸಹ ಅನಂತ್ ಕುಮಾರ್ ಹೆಗಡೆ ಅವರು ಅಂತರವನ್ನ ಕಾಯ್ದುಕೊಂಡಿದ್ರು. ಅಲ್ಲದೇ ಬಿಜೆಪಿಯಿಂದಲೂ ಯಾವುದೇ ಕಾರ್ಯಕ್ರಮಕ್ಕೆ ಅನಂತ್ ಕುಮಾರ್ ಹೆಗಡೆ ಅವರಿಗೆ ಆಹ್ವಾನ ನೀಡಿರಲಿಲ್ಲ ಎನ್ನಲಾಗಿತ್ತು. ಒಟ್ನಲಿ ಹೈಕಮಾಂಡ್ ಮತ್ತೊಮ್ಮೆ ಅನಂತ್ ಕುಮಾರ್ ಹೆಗಡೆ ಅವರಿಗೆ ಮಣೆ ಹಾಕುತ್ತಾ ಅಥವಾ ಹೊಸ ಮುಖಕ್ಕೆ ಟಿಕೆಟ್ ನೀಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ