Wednesday, July 3, 2024

ಡಿ 11 ರಂದು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಯ ವತಿಯಿಂದ ಬೃಹತ್ ಪ್ರತಿಭಟನಾ ಧರಣಿ; ಮೃತ್ಯುಂಜಯ ಕಲ್ಮಠ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ಬೆಳಗಾವಿಯ ಸುವರ್ಣ ಸೌಧ ಮುಂಭಾಗದಲ್ಲಿ ಡಿ.11 ರಂದು ಸೋಮವಾರ  ರಾಜ್ಯಮಟ್ಟದ  ಅನುದಾನ ರಹಿತ ಹಾಗೂ ಅನುದಾನಿತ ಶಾಲಾ ಶಿಕ್ಷಕರ, ಸಿಬ್ಬಂದಿಗಳ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕಿತ್ತೂರು ಕರ್ನಾಟಕ ವಿಭಾಗದ ಅಧ್ಯಕ್ಷ ಮೃತ್ಯುಂಜಯ ಕಲ್ಮಠ  ಇಲ್ಲಿಯ ಪ್ರಾವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. 

ಅನುದಾನ ರಹಿತ ಹಾಗೂ ಅನುದಾನಿತ ಶಾಲೆಗಳು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದು ಖಾಸಗಿ ಶಾಲೆಗಳಲ್ಲಿ ಆರ್.ಟಿ.ಇ (ಶಿಕ್ಷಣ ಹಕ್ಕು ಕಾಯ್ದೆ) ಅಡಿಯಲ್ಲಿ ಮಕ್ಕಳ ದಾಖಲಾತಿ ಮರು ಅನುಷ್ಠಾನ ಮಾಡಬೇಕು. ಶಾಲಾ ಮಾನ್ಯತೆ ನೋಂದಣಿ, ಅನುದಾನ ಸೇರಿದಂತೆ ಹಲವು ವಿಷಯಗಳಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣವನ್ನು ಹೈಕೋರ್ಟ್ ಆದೇಶದಂತೆ ಕನಿಷ್ಠ 10 ವರ್ಷ ನೀಡಬೇಕು. ಆದರೆ ಪ್ರಸ್ತುತ 1 ವರ್ಷ ಹಾಗೂ ಅಗ್ನಿ ಸುರಕ್ಷತೆ, ಕಟ್ಟಡ ಸುರಕ್ಷತೆ ನೀಡಿದಾಗ 5 ವರ್ಷ ನೋಂದಣಿ ಮಾಡಿಕೊಡುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. 

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಖಾಸಗಿ ಶಾಲೆಗಳಲ್ಲಿ ಪ್ರತಿಶತ 25 ರಷ್ಟು ಮಕ್ಕಳನ್ನು ಆರ್.ಟಿ.ಇ ಅಡಿಯಲ್ಲಿ ದಾಖಲಾತಿಯನ್ನು  ಮಾಡಿಕೊಳ್ಳುತ್ತಿದ್ದು  ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಮೇಲೆ ಅದನ್ನು ಸ್ಥಗಿತಗೊಳಿಸಿದ್ದರು ಈಗ ಮತ್ತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ ಈಗ ಅದನ್ನು ಪುನಃ ಪ್ರಾರಂಭ ಮಾಡಬೇಕು. ಹಾಗೂ ಪ್ರಸ್ತುತ ನೀಡುತ್ತಿರುವ ವೆಚ್ಚವನ್ನು ರೂ 16 ಸಾವಿರದಿಂದ ರೂ 35 ಸಾವಿರಕ್ಕೆ ಏರಿಕೆ  ಮಾಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ನಿ ಸುರಕ್ಷತೆ, ಕಟ್ಟಡ  ಸುರಕ್ಷತೆಯಲ್ಲಿ  ನ್ಯಾಯಾಲಯದ  ಆದೇಶದಂತೆ ವಿನಾಯಿತಿ ನೀಡಬೇಕು. 2018 ರ ಮುಂಚೆ ಆರಂಭಿಸಿದ ಶಾಲೆಗಳಲ್ಲಿ ಈ ಎರಡು ನಿಯಮ ಅನ್ವಿಸುವುದಿಲ್ಲ ಎಂದು ಹೈಕೋರ್ಟ್ ಆದೇಶ ಮಾಡಿದೆ. ಆದರು ನಮಗೆ ಅಗ್ನಿ ಸುರಕ್ಷತೆ, ಕಟ್ಟಡ ಸುರಕ್ಷತೆ  ಪ್ರಮಾಣ  ಪತ್ರವನ್ನು  ಲಗತ್ತಿಸಬೇಕು ಎಂದು ಕಡ್ಡಾಯ ಮಾಡಿದ್ದಾರೆ ಎಂದು ಸರ್ಕಾರಗಳ ವಿರುದ್ಧ ಹರಿಹಾಯ್ದರು.

ರಾಜಕೀಯ ದುರುದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇಂದಿನ ರಾಜ್ಯ ಸರ್ಕಾರ ಕೈಬಿಟ್ಟಿದೆ. ಹಿಂದಿನ ಸರ್ಕಾರ ದೇಶಾದ್ಯಂತ ಏಕರೂಪದ ಶಿಕ್ಷಣ ನೀತಿ ಜಾರಿಗೆ ತಂದಿದೆ. ಸಿ.ಬಿ.ಎಸ್.ಸಿ ಶಾಲಾ ವಿದ್ಯಾರ್ಥಿಗಳು ಕಲಿಯುವ ಪಠ್ಯವನ್ನೇ ಎಲ್ಲ ಮಕ್ಕಳು ಕಲಿಯಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಮಾಡಲಾಗಿದ್ದು ಕಾರಣ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಡ್ಡಾಯವಾಗಿ ಜಾರಿ ಮಾಡಬೇಕು. 1995 ರಿಂದ 2020ರ ವರೆಗೆ ಆರಂಭವಾದ ಖಾಸಗಿ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧದ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ತಿಳಿಸಿದ  ಅವರು  ರಾಜ್ಯದ ಎಲ್ಲ ಅನುದಾನ ರಹಿತ ಹಾಗೂ ಅನುದಾನಿತ ಶಾಲಾ ಶಿಕ್ಷಕರ, ಸಿಬ್ಬಂದಿಗಳು ಹಾಗೂ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ  ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ರಾಜ್ಯ ನಿರ್ದೇಶಕ ಅರ್ಜುನ ಕುರಿ, ಸದಸ್ಯರಾದ ಬಿ.ಬಿ. ಪಾಟೀಲ ಹಾಗೂ ಎಸ್.ಬಿ. ಭಜಂತ್ರಿ ಇದ್ದರು.

ಜಿಲ್ಲೆ

ರಾಜ್ಯ

error: Content is protected !!