ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಾಂವಿಧಾನಿಕ ಪ್ರಾತಿನಿಧ್ಯ ಸಿಗುವಲ್ಲಿ ಪ್ರಸ್ತುತ ಲಿಂಗಾಯತ ಒಳಪಂಗಡಗಳ ಒಗ್ಗಟ್ಟು ಅತೀ ಅವಶ್ಯವಾಗಿದೆ ಎಂದು ಜಗದ್ಗುರು ತೋಂಟದ ಸಿದ್ದರಾಮ ಶ್ರೀಗಳು ಹೇಳಿದರು.
ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಲಿಂಗಾಯತ ಒಳಪಂಗಡಗಳ ಏಕತಾ ಸಮಿತಿಯ ದಶಮಾನೋತ್ಸವ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು ಲಿಂಗಾಯತ ಸ್ವತಂತ್ರ ಧರ್ಮವಾಗಿದ್ದು ಪ್ರಸ್ತುತ ಸಾಂವಿಧಾನಿಕ ಮಾನ್ಯತೆಗಾಗಿ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ.
ವೀರಶೈವ ಪದ ಲಿಂಗಾಯತ ಪದಕ್ಕೆ ಸರಿಸಮನಾದ ಪದವಲ್ಲ. ಲಿಂಗಾಯತ ಪದ ಧರ್ಮದ ಕುರಿತು ಹೇಳುವದು, ಲಿಂಗಾಯತ ಸಮಾಜದಲ್ಲಿ ಇತರೆ ಉಪ ಪಂಗಡಗಳು ಇರುವಂತೆ ವೀರಶೈವವೂ ಒಂದು ಉಪ ಪಂಗಡ. ಹಾಗಾಗಿ ವೀರಶೈವ ಯಾವತ್ತಿಗೂ ಲಿಂಗಾಯತ ಪದಕ್ಕೆ ಸರಿಸಮವಾಗದು. ಅಖಿಲ ಭಾರತ ವೀರಶೈವ ಮಹಾಸಭಾ ಬಾಂಧವರಿಗೆ ಇತ್ತೀಚಿಗೆ ಬುದ್ಧಿ ಬರುತ್ತಿದೆ ಅದಕ್ಕೆ ಉದಾಹರಣೆ ಎಂಬಂತೆ ಅಖಿಲ ಭಾರತ ವೀರಶೈವ ಮಹಾಸಭಾ ವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಂದು ಬದಲಾವಣೆ ಮಾಡಿದ್ದಾರೆ, ಅರ್ಧ ಹಾದಿಗೆ ಬಂದಿದ್ದಾರೆ ಇನ್ನೂ ಅರ್ಧ ಹಾದಿಗೆ ಬರಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಲಿಂಗಾಯತ ಏಕತಾ ಸಮಿತಿ ರಾಜ್ಯಾದ್ಯಕ್ಷ ಜಿ.ವಿ. ಕೊಂಗವಾಡ, ಮಾತನಾಡಿ ಲಿಂಗಾಯತರು ಹಿಂದುಗಳಲ್ಲ, ನಮಗೆ ನಮ್ಮದೆಯಾದ ಸ್ವತಂತ್ರ ಧರ್ಮವಿದೆ ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗುವವರೆಗೆ ಪಂಚಪೀಠದ ಮಹಾಸ್ವಾಮಿಗಳು ಬಾಯಿ ಮುಚ್ಚಿಕೊಂಡು ಸುಮ್ಮನೆ ಇರಬೇಕು ಸುಮ್ಮನಿದ್ದರೆ ಅದುವೇ ಸಮಾಜಕ್ಕೆ ಮಾಡುವ ದೊಡ್ಡ ಉಪಕಾರ ಎಂದು ಹೇಳಿದರು.
ಕೆಪಿಸಿಸ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ ನಮ್ಮಲ್ಲಿ ಒಗ್ಗಟ್ಟು ಇಲ್ಲದ ಕಾರಣ ಲಿಂಗಾಯತರು ಸಂಘಟಿತರಾಗುತ್ತಿಲ್ಲಾ. ನಾವು ಮಾಡುವ ಕಾರ್ಯಗಳಿಗೆ ಅನುಗುಣವಾಗಿ ಲಿಂಗಾಯತರು ಒಡೆದು ಹೋಗಿದ್ದು ಈ ಸಂಘಟನೆ ಮೂಲಕ ಮತ್ತೆ ನಾವೆಲ್ಲರು ಒಂದಾಗಬೇಕು ಎಂದರು.
ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ನಿಚ್ಚಣಕಿಯ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡ್ರ, ಸವಿತಾ ಅಮರಶೆಟ್ಟಿ, ಎಸ್. ಕೆ. ಕುಂದರಗಿ, ಆಯ್. ಎಸ್. ಹುಣಶ್ಯಾಳ, ಡಿ. ಆರ್. ಪಾಟೀಲ, ಎನ್. ಬಿ. ಗಣಮುಖಿ, ಉಮಾದೇವಿ ಬಿಕ್ಕಣ್ಣವರ, ಮಹಾದೇವಿ ಕುಪ್ಪಸಗೌಡರ ಸೇರಿದಂತೆ ಇತರರು ಇದ್ದರು.