ವರದಿ: ಬಸವರಾಜ ಚಿನಗುಡಿ
ಚನ್ನಮ್ಮನ ಕಿತ್ತೂರು: “ಇಡಿಯಾದರೆ ಬದುಕುವೆವು , ಬಿಡಿಯಾದರೆ ಸಾಯುವೆವು ” ಎಂಬ ಒಗ್ಗಟ್ಟಿನ ಮಂತ್ರ ಘೋಷಿಸಿ ನಾಡು-ನುಡಿಯ ಉಳವಿಗಾಗಿ “ಕಪ್ಪ ಕೊಡಬೇಕಾ ಕಪ್ಪ ನಿಮಗೇಕೆ ಕೊಡಬೇಕು ಕಪ್ಪ” ಎಂದು ಕೆಂಪು ಮೋತಿಯ ಬ್ರಿಟಿಷರ ವಿರುದ್ಧ ಗುಡುಗಿದ ಗಟ್ಟಿಗಿತ್ತಿ ಕನ್ನಡತಿಯ ಐತಿಹಾಸಿಕ ‘ಚನ್ನಮ್ಮನ ಕಿತ್ತೂರು ಉತ್ಸವ’ ಆಚರಣೆ ಈ ಬಾರಿ ಅನುಮಾನ!
ಪ್ರತಿವರ್ಷವೂ ಈ ಹೊತ್ತಿಗಾಗಲೇ ಕನಿಷ್ಠ ಒಂದೆರಡಾದರೂ ಪೂರ್ವ ಭಾವಿ ಸಭೆಗಳು ಜರುಗಿ, ಉತ್ಸವದ ಆಚರಣೆಗೆ ಅಗತ್ಯವಿರುವ ಸಿದ್ಧತೆಗಳು ಚಾಲ್ತಿಯಲ್ಲಿರುತ್ತಿದ್ದವು. ಆದರೆ ನಿಗದಿತ ಉತ್ಸವ ದಿನಾಂಕ ಕೆಲವೇ ದಿನಗಳ ಅಂತರದಲ್ಲಿದ್ದರೂ ಉತ್ಸವದ ಬಗ್ಗೆ ಅಧಿಕಾರಿಗಳು, ಶಾಸಕರು, ಉತ್ಸಾಹವನ್ನೇ ತೋರಿಸುತ್ತಿಲ್ಲ. ಒಂದೂ ಸಭೆ ನಡೆದಿಲ್ಲ, ಪೂರ್ವ ಸಿದ್ಧತೆಯೂ ಚುರುಕಾಗಿಲ್ಲ. ಹೀಗಾಗಿ ‘ಉತ್ತರ ಕರ್ನಾಟಕದ ದಸರಾ’ ಎಂದೇ ಹೆಸರಾಗಿರುವ ಕಿತ್ತೂರು ಉತ್ಸವದ ಆಚರಣೆ ಈ ಬಾರಿ ಅನುಮಾನವೇ ಅನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ‘ರಾಜ್ಯ ಮಟ್ಟದ ಕಿತ್ತೂರು ಉತ್ಸವ’ ಆಚರಣೆಗೆ ಅಸ್ತು ಎಂದಿತ್ತು! ಮಾಜಿ ಶಾಸಕ ಮಹಾಂತೇಶ ದೊಡಗೌಡರ, ನಿಕಟಪೂರ್ವ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ, ಸ್ಥಳೀಯ ಮಠಾಧೀಶರು, ರಾಣಿ ಚನ್ನಮ್ಮನವರ ಅಭಿಮಾನಿಗಳು, ಒಟ್ಟುಗೂಡಿ ರಾಜ್ಯ ಮಟ್ಟದ ಉತ್ಸವ ಆಚರಣೆಗೆ ಶ್ರಮಿಸಿದ್ದರು. ಕೋಟ್ಯಂತರ ಅನುದಾನ ಬಳಸಿ ಮುಖ್ಯ ವೇದಿಕೆಯೊಂದಿಗೆ ಸಮಾನಾಂತರ ಮೂರು ಭವ್ಯ ವೇದಿಕೆಗಳನ್ನು ನಿರ್ಮಿಸಿ ‘ಸ್ವಾತಂತ್ರ್ಯದ ಬೆಳ್ಳಿಚುಕ್ಕಿ’ಯ ಸಾಹಸಗಾಥೆಯನ್ನು ಸ್ಮರಿಸಿಕೊಳ್ಳಲಾಗಿತ್ತು! ಆದರೆ ಈ ಬಾರಿ ಬರದ ಬರೆ ಹಿನ್ನೆಲೆಯಲ್ಲಿ ಮುಖ್ಯ ವೇದಿಕೆಯ ಸರಳ ಉತ್ಸವ ಆಗುವುದೂ ಅನುಮಾನವೇ ಎಂಬ ಆತಂಕ ಮನೆ ಮಾಡಿದೆ!
ಬೈಲಹೊಂಗಲ ಉಪ ವಿಭಾಗಾಧಿಕಾರಿ ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಪ್ರಭಾವತಿ ಫಕೀರಪುರ ಅವರು ಸರ್ಕಾರ ಬರ ಘೋಷಣೆ ಮಾಡಿದ ಕಾರಣ ಹಂಪಿ ಉತ್ಸವವನ್ನು ತಡೆ ಹಿಡಿಯಲಾಗಿದೆ. ಸದ್ಯಕ್ಕೆ ಕಿತ್ತೂರಿನಲ್ಲಿ ಉತ್ಸವದ ಪೂರ್ವಭಾವಿ ಸಭೆಗಳು ನಡೆದಿಲ್ಲಾ. ಇನ್ನೀತರ ಸಿಧ್ಧತೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಯಾವುದೇ ಮುನ್ಸೂಚನೆಯು ಸಹ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಆದರೂ ಕೋಟೆ ಆವರಣದಲ್ಲಿ ಸಹಜ ಸ್ವಚ್ಛತೆ ಕಾರ್ಯಗಳು ನಡೆಯುತ್ತಿವೆ ಎಂದಿದ್ದಾರೆ.
ಸ್ಥಳೀಯ ಶಾಸಕರು, ಮಠಾಧೀಶರು, ಜಿಲ್ಲಾಧಿಕಾರಿಗಳು ಹಾಗೂ ರಾಣಿ ಚನ್ನಮ್ಮನ ಅಭಿಮಾನಿಗಳು ಶೀಘ್ರವೇ ನಾಡ ಉತ್ಸವಕ್ಕಾಗಿ ಪೂರ್ವಭಾವಿ ಸಭೆ ನಡೆಸಬೇಕಾಗಿದೆ. ಕಳೆದ ಬಾರಿಯಂತೆ ಅಕ್ಟೋಬರ್ 23,24 ಹಾಗೂ 25 ರಂದು ರಾಜ್ಯ ಮಟ್ಟದ ಉತ್ಸವ ಅಥವ ಜಿಲ್ಲಾ ಮಟ್ಟದ ಉತ್ಸವ ಆಚರಣೆ ಘೋಷಣೆ ಮಾಡುತ್ತಾರೆಯೇ ಅನ್ನುವುದು ಕುತೂಹಲ ಮೂಡಿಸಿದೆ. ಆದರೆ ಈ ವರ್ಷ ಸೂಕ್ತ ಪ್ರಮಾಣದಲ್ಲಿ ವರ್ಷಧಾರೆ ಕೊರತೆಯ ಪರಿಣಾಮ ಉತ್ಸವ ಕುರಿತು ಶಾಸಕರು, ಅಧಿಕಾರಿಗಳ ನಿರುತ್ಸಾಹ ಸರಳ ಉತ್ಸವ ಆಚರಣೆಯೂ ಅನುಮಾನವೇ ಅನ್ನುವ ವಾತಾವರಣ ಸೃಷ್ಟಿಸಿದೆ!
ಸೆ 26 ರಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಯಾವ ತಿರ್ಮಾಣಕ್ಕೆ ಬರುತ್ತಾರೆ ಎಂದು ಈ ಭಾಗದ ಸಾರ್ವಜನಿಕರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೆ 26 ರಂದು ಜನಪ್ರತಿನಿಧಿಗಳನ್ನ ಮತ್ತು ಅಧಿಕಾರಿಗಳನ್ನ ಕಿತ್ತೂರು ಉತ್ಸವ ಆಚರಣೆ ಕುರಿತು ಮಾತನಾಡಲು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಉತ್ಸವದ ಆಚರಣೆ ಕುರಿತು ಯಾವಾಗ ಪೂರ್ವಭಾವಿ ಸಭೆ ಕರೆಯಬೇಕು ಮತ್ತು ಎಲ್ಲಿ ಕರೆಯಬೇಕು ಎಂಬುದರ ಕುರಿತು ಚರ್ಚೆಗಳಾಗುತ್ತೆವೆ.
ಪ್ರಭಾವತಿ ಫಕೀರಪುರ. ಉಪ ವಿಭಾಗಾಧಿಕಾರಿ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ |