ರಾಜ್ಯದಲ್ಲೇ ಮೊದಲ ಬಾರಿಗೆ ಹೆಲ್ತ್ ಎಟಿಎಂ ಪ್ರಾರಂಭ: ಹತ್ತು ನಿಮಿಷದಲ್ಲೇ ಕೈಯಲ್ಲಿ ಹೆಲ್ತ್ ರಿಪೋರ್ಟ್.

ಉಮೇಶ ಗೌರಿ (ಯರಡಾಲ)

ಕಲಬುರಗಿ: ಇಲ್ಲಿವರೆಗೆ ಜನರು ಎಟಿಎಂ ಅಂದ್ರೆ ಕೇವಲ ಹಣ ತೆಗೆಯಲು ಬಳಸುವ ಮಷಿನ್ ಎಂದೇ ನಂಬಿದ್ದರು. ಆದರೆ ಇಲ್ಲಿ ಕೇಳಿ ಇನ್ಮುಂದೆ ಎಟಿಎಂನಿಂದ ಹಣವಷ್ಟೇ ಅಲ್ಲ, ಹೆಲ್ತ್ ರಿಪೋರ್ಟ್ ಕೂಡ ಪಡೆಯಬಹುದಾಗಿದೆ. ರಾಜ್ಯ ಸರ್ಕಾರದ ಹೆಲ್ತ್ ಡಿಪಾರ್ಟ್‌ಮೆಂಟ್‌ನಿಂದ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಯಲ್ಲಿ ಇಂಥದ್ದೊಂದು ಹೆಲ್ತ್ ಎಟಿಎಂ ಪ್ರಾರಂಭೀಸಿದೆ.. ಕೇವಲ ಹತ್ತು ನಿಮಿಷದಲ್ಲೇ ಸಾರ್ವಜನಿಕರು ಹೆಲ್ತ್ ರಿಪೋರ್ಟ್ ಪಡೆಯಬಹುದಾಗಿದೆ.

ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿನೂತನ ತಂತ್ರಜ್ಞಾನದ ಹೆಲ್ತ್ ಎಟಿಎಂಗಳನ್ನು ಕಲಬುರಗಿಯಲ್ಲಿ ಆರಂಭಿಸಲಾಗಿದೆ. ಡೈಗ್ನೋಸ್ಟಿಕ್ ಕೇಂದ್ರಗಳಿಗೆ ಹೋಗಿ, ಅಲ್ಲಿ ದಿನಗಟ್ಟಲೆ ಕಾಯಬೇಕಾದ ಸ್ಥಿತಿಗೆ ಮುಕ್ತಿ ಹಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಸೆಪ್ಟೆಂಬರ್ 17 ರಂದು ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನ, ಸಿಎಂ ಸಿದ್ದರಾಮಯ್ಯ ಹೆಲ್ತ್ ಎಟಿಎಂಗೆ ಚಾಲನೆ ನೀಡಿದ್ದರು. ಇದೀಗ ಅವುಗಳು ಕಾರ್ಯಾಚರಣೆ ಆರಂಭಿಸಿವೆ.

ಕಲಬುರಗಿ ಜಿಲ್ಲೆಯಲ್ಲಿ 25 ಸ್ಥಳಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ಹತ್ತೇ ನಿಮಿಷದಲ್ಲಿ ವ್ಯಕ್ತಿಯ ಬಿಪಿ, ಶುಗರ್, ಹಿಮೋಗ್ಲೋಬಿನ್, ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯ ಜ್ವರದ ರಿಪೋರ್ಟ್, ಹೈಟ್, ವೇಟ್, ಆಕ್ಸಿಜನ್ ಪ್ರಮಾಣ, ಸೇರಿದಂತೆ 50ಕ್ಕೂ ಹೆಚ್ಚು ಪರೀಕ್ಷೆಗಳ ರಿಪೋರ್ಟ್ ಅನ್ನು ನೀಡುತ್ತದೆ. ಮಷಿನ್‌ನಲ್ಲಿ ಇಸಿಜಿ ಸೌಲಭ್ಯ ಕೂಡಾ ಇದೆ.

ಖಾಸಗಿ ಕಂಪನಿಯೊಂದು ತನ್ನ ಸಿಎಸ್‌ಆರ್ ಅನುದಾನದಲ್ಲಿ, 5 ಕೋಟಿ ರೂ. ವೆಚ್ಚದಲ್ಲಿ 25 ಹೆಲ್ತ್ ಎಟಿಎಂಗಳನ್ನು ಖರೀದಿಸಿ, ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಿದೆ. ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆ ಈ ಮಷಿನ್‌ಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಜನಸಂದಣಿ ಇರೋ ಪ್ರದೇಶದಲ್ಲಿ ಅಳವಡಿಸುತ್ತಿದೆ. ಮಷಿನ್‌ಗಳ ನಿಯಂತ್ರಣಕ್ಕಾಗಿ ಲ್ಯಾಬ್ ಟೆಕ್ನಿಷಿಯನ್‌ಗಳನ್ನು ಕೂಡಾ ನೇಮಿಸಿದೆ.

ಹೆಲ್ತ್ ಎಟಿಎಂ ಸೇವೆ ಉಚಿತವಾಗಿ ಇರಲಿದ್ದು, ಯಾರು ಬೇಕಾದರು ಕೂಡಾ ತಪಾಸಣೆ ಮಾಡಿಸಿಕೊಳ್ಳಬಹುದು. ಹೆಲ್ತ್ ಎಟಿಎಂಗಳ ಎಲ್ಲಾ ಪರೀಕ್ಷೆಗಳನ್ನು ನಾವೇ ಮಾಡಿಕೊಳ್ಳಲು ಬರೋದಿಲ್ಲಾ. ಶುಗರ್ ಟೆಸ್ಟ್‌ಗೆ ರಕ್ತ ಸಂಗ್ರಹ, ಬಿಪಿ ತಪಾಸಣೆಯನ್ನು ಲ್ಯಾಬ್ ಟೆಕ್ನಿಷಿಯನ್‌ಗಳು ಮಾಡುತ್ತಾರೆ. ಉಳಿದಂತೆ ಆಕ್ಸಿಜನ್ ಲೆವೆಲ್, ಹೈಟ್, ವೇಟ್ ಸೇರಿದಂತೆ ಕೆಲ ಪರೀಕ್ಷೆಗಳನ್ನು ನಾವೇ ಮಾಡಿಕೊಳ್ಳಬಹುದಾಗಿದೆ. ಎಲ್ಲಾ ಟೆಸ್ಟ್ಗಳನ್ನು ಮಾಡಿಸಿಕೊಂಡ ನಂತರ ರಿಪೋರ್ಟ್ ವ್ಯಕ್ತಿಯ ವಾಟ್ಸಪ್‌ಗೆ ರವಾನೆ ಆಗುತ್ತದೆ. ಇದು ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗುತ್ತಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";