Wednesday, September 18, 2024

ಒಂಬತ್ತು ದರೋಡೆಕೋರರನ್ನು ಬಂಧಿಸಿದ ಗೊಕಾಕ ಪೊಲೀಸರು.

ಬೆಳಗಾವಿ: ಗೋಕಾಕದಿಂದ ಕನಸಗೇರಿಗೆ ತೆರಳುವಾಗ ಮಹಿಳೆಯನ್ನು ಅಡ್ಡಗಟ್ಟಿ, ಚಿನ್ನದ ಸರ, ಉಂಗುರ ಕದ್ದು ಪರಾರಿಯಾಗಿದ್ದ 9 ಆರೋಪಿಗಳನ್ನು ಗೋಕಾಕ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಗೋಕಾಕ ತಾಲ್ಲೂಕಿನ ಬೆಣಚಿನಮರಡಿಯ ದುರ್ಗಪ್ಪ ವಡ್ಡರ, ನಾಗಪ್ಪ ಮಾದರ, ಯಲ್ಲಪ್ಪ ಗೀಸನಿಂಗವ್ವಗೋಳ, ಕೃಷ್ಣಾ ಪೂಜೇರಿ, ರಾಮಸಿದ್ಧ ತಪಸಿ, ಬೀರಸಿದ್ಧ ಗುಂಡಿ, ಉದ್ದಪ್ಪ ಖಿಲಾರಿ, ಗೋಕಾಕದ ಪರಶುರಾಮ ಗೊಂಧಳಿ, ಆಕಾಶ ತಳವಾರ ಬಂಧಿತರು.ವಿವಿಧ ಪ್ರಕರಣಗಳಲ್ಲಿ ಕದ್ದಿದ್ದ ₹10,200 ನಗದು, 9 ಮೊಬೈಲ್‌, 15 ಗ್ರಾಂ ಚಿನ್ನಾಭರಣ, 6 ಬೈಕ್‌, 1 ವಾಹನ ಸೇರಿದಂತೆ ₹7.89 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೆಪ್ಟೆಂಬರ್‌ 14ರಂದು ನಡೆದ ಡಕಾಯಿತಿ ಕುರಿತು ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಗೋಕಾಕ ನಗರ, ಗ್ರಾಮೀಣ, ಅಂಕಲಗಿ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ದರೋಡೆ, ಸುಲಿಗೆ, ದ್ವಿಚಕ್ರ ವಾಹನ ಮತ್ತು ಜಾನುವಾರು ಕಳ್ಳತನಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದವು. ಇವುಗಳ ತನಿಖೆಗಾಗಿ ಗೋಕಾಕ ಸಿಪಿಐ ಗೋಪಾಲ ರಾಠೋಡ ನೇತೃತ್ವದ ತಂಡ ರಚಿಸಲಾಗಿತ್ತು. ಇದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

‘ಈ ಪ್ರಕರಣದಲ್ಲಿ ಸಿಕ್ಕಿಬಿದ್ದ 9 ಆರೋಪಿಗಳು ಬೆಣಚಿನಮರಡಿಯ ಖಿಲಾರಿ ಗ್ಯಾಂಗ್ ಮತ್ತು ಗೋಕಾಕದ ಎಸ್‌ಪಿ ಸರ್ಕಾರ ಗ್ಯಾಂಗ್‌ ರಚಿಸಿಕೊಂಡಿದ್ದರು. ದರೋಡೆ, ಡಕಾಯಿತಿ, ಸುಲಿಗೆ ಮಾಡುತ್ತಿದ್ದರು. ಇದಕ್ಕಾಗಿ ವಾಟ್ಸ್‌ಆಯಪ್‌ ಗ್ರೂಪ್‌ ರಚಿಸಿಕೊಂಡು, ವ್ಯವಸ್ಥಿತವಾಗಿ ದರೋಡೆ ಮಾಡಲು ಸಂಚು ರೂಪಿಸುತ್ತಿದ್ದರು. ಡಿವೈಎಸ್‌ಪಿ ಡಿ.ಎಚ್‌.ಮುಲ್ಲಾ ಮಾರ್ಗದರ್ಶನದಲ್ಲಿ ಗೋಕಾಕ ಪೊಲೀಸರ ತಂಡ ಈ ಪ್ರಕರಣ ಭೇದಿಸಿದೆ’ ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ಇಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.’ಈ ಆರೋಪಿಗಳು ಇನ್ನಷ್ಟು ಪ್ರಕರಣಗಳಲ್ಲಿ ಭಾಗಿಯಾರುವ ಸಾಧ್ಯತೆಯಿದೆ. ಆ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದೇವೆ’ ಎಂದರು.

ಜಿಲ್ಲೆ

ರಾಜ್ಯ

error: Content is protected !!