ಬೆಂಗಳೂರು : ಮತದಾರರಿಗೆ ಅಮಿಷವೊಡ್ಡಿ, ಕೂಪನ್ ಮತ್ತು ಗ್ಯಾರಂಟಿ ಕಾರ್ಡ್ಗಳನ್ನು ಹಂಚಿ ಅಕ್ರಮ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷವು ಮತದಾರರಿಗೆ ಆಮಿಷವೊಡ್ಡಿ ಅಧಿಕಾರಕ್ಕೆ ಬಂದಿದೆ ಎಂಬುದಾಗಿ ಪದೇ ಪದೇ ಹೇಳುತ್ತಿದ್ದೆ. ಕಾಂಗ್ರೆಸ್ನ ಅಸಲಿ ಹಸ್ತದ ಹಕೀಕತ್ತನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪುತ್ರನೇ ರಾಜ್ಯಕ್ಕೆ ಸತ್ಯದ ಸಾಕ್ಷಾತಾರ ಮಾಡಿದ್ದಾರೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿಯೇ ಕುಕ್ಕರ್, ಇಸ್ತ್ರಿಪೆಟ್ಟಿಗೆಗಳ ಭರ್ಜರಿ ಸಮಾರಾಧನೆ ನಡೆದಿದೆ ಎಂದು ಕಿಡಿಕಾರಿದ್ದಾರೆ.
ಶಾಸಕರನ್ನು ಅನರ್ಹ ಮಾಡಿ: ಅಪ್ರಜಾಸತ್ತಾತ್ಮಕವಾಗಿ ಗೆದ್ದಿರುವ ಆ ಪಕ್ಷದ ಎಲ್ಲಾ 135 ಶಾಸಕರನ್ನೂ ಅನರ್ಹಗೊಳಿಸಬೇಕು. ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಕೇಂದ್ರ ಸರ್ಕಾರವು ವಿಸ್ತೃತ ತನಿಖೆ ನಡೆಸಬೇಕು ಮತ್ತು ಕೇಂದ್ರ ಚುನಾವಣಾ ಆಯೋಗವು ಚುನಾವಣಾ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಬೇಕು. ಸಮರ್ಪಕ ತನಿಖೆ ನಡೆಸಿ ಕಾಂಗ್ರೆಸ್ ನ ಎಲ್ಲ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಹೊರ ಹಾಕಲೇಬೇಕು ಎಂದು ಒತ್ತಾಯಿಸಿದ್ದಾರೆ. ಸಮಾಜವಾದಿ ಮುಖ್ಯಮಂತ್ರಿ ಮಹೋದಯರ ಹಾದಿಯಲ್ಲೇ ನಡೆದಿರುವ ರಾಜ್ಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು, ಅದೇ ವಾಮಮಾರ್ಗದಲ್ಲಿ ಹೆಜ್ಜೆಯನ್ನಿಟ್ಟಿದ್ದಾರೆ.
ಈ ಮೂಲಕ ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ಕನ್ನಡಿಗರ ಪ್ರಜಾಸತ್ತೆಯ ಮಹಾದೇಗುಲ ವಿಧಾನಸೌಧದ ಪಾವಿತ್ರ್ಯವನ್ನೇ ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಮನಗರ, ಮಾಗಡಿ ಸೇರಿ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗಿಫ್ಟ್ ಕೂಪನ್, ಗ್ಯಾರಂಟಿ ಕೂಪನ್ ಹಂಚಿಯೇ ಗೆದ್ದಿದ್ದಾರೆ. ಪಕ್ಷದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರೇ ಸಹಿ ಹಾಕಿದ ಅಧಿಕೃತ ಅಮಿಷಗಳ 5 ಗ್ಯಾರಂಟಿ ಕೂಪನ್ ಗಳನ್ನು ಮನೆಮನೆಗೂ ಹಂಚಿ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ. ಇದು ಸ್ವಾತಂತ್ರ್ಯ ಭಾರತ ಕಂಡ ಅತಿದೊಡ್ಡ ಚುನಾವಣಾ ಅಕ್ರಮ ಎಂದು ವಾಗ್ದಾಳಿ ನಡೆಸಿದ್ದಾರೆ.