ರಾಜ್ಯ ಕಾಂಗ್ರೆಸ್‌ ಸರ್ಕಾರ ಕಾಂಗ್ರೆಸ್ಸಿಗರಿಂದಲೇ ಪತನ: ಶಾಸಕ ಯತ್ನಾಳ.

ಉಮೇಶ ಗೌರಿ (ಯರಡಾಲ)

ಹುಬ್ಬಳ್ಳಿ : ಜನವರಿಯಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಸ್ವಪಕ್ಷದವರೇ ರಾಜ್ಯ ಸರ್ಕಾರವನ್ನು ಪತನಗೊಳಿಸಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರೇ ರಾಜ್ಯ ಸರ್ಕಾರವನ್ನು ಪತನಗೊಳಿಸಲಿದ್ದಾರೆ. ಹೀಗಾಗಿಯೇ ನಾವೇ ನೇರವಾಗಿ ಸಿಎಂ ಆಗಬಹುದು ಎಂದು ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ. ನೇರವಾಗಿ ನಮ್ಮ ಪಕ್ಷದವರೇ ಏಕೆ ಮುಖ್ಯಮಂತ್ರಿಯಾಗಬಾರದು? ಎಂದು ಪ್ರಶ್ನಿಸಿದರು.

ಬಿ.ಕೆ. ಹರಿಪ್ರಸಾದ ಅವರು ಕಾಂಗ್ರೆಸ್‌ನ ಹಿರಿಯ ನಾಯಕರು. ಹೀಗಾಗಿ, ಅವರಿಗೆ ನೋವು ಉಂಟಾಗಿದ್ದು, ಬಹಿರಂಗವಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ವೇಟಿಂಗ್ ಸಿಎಂ ಅವರ ಕುಮ್ಮಕ್ಕಿನಿಂದಾಗಿಯೇ ಬಿ.ಕೆ. ಹರಿಪ್ರಸಾದ ಅವರ ಮೂಲಕ ಅಸಮಾಧಾನ ಹಾಕುತ್ತಿದ್ದು, ಅವರನ್ನು ಕೇವಲ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿರುದ್ಧ ಕುಟುಕಿದರು.

ಬಿಜೆಪಿ ಬಿಟ್ಟರೆ ತಾವೇ ಮರಣ ಶಾಸನ ಬರೆದುಕೊಂಡಂತೆ:

ಕಾಂಗ್ರೆಸ್‌ನಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಯಾವಾಗ ಸ್ಫೋಟವಾಗುತ್ತದೆಯೋ ಗೊತ್ತಿಲ್ಲ. ಈ ಮಧ್ಯೆ ನಮ್ಮವರನ್ನು ಸೆಳೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದ್ದು, ಬಿಜೆಪಿಯವರನ್ನು ತೆಗೆದುಕೊಂಡು ಏನು ಮಾಡುತ್ತಾರೆ? ಯಾರಾದರೂ ಬಿಜೆಪಿ ಬಿಟ್ಟು ಹೋದರೆ ತಾವಾಗೇ ಮರಣ ಶಾಸನ ಬರೆದುಕೊಂಡಂತೆ ಎಂದರು. ನಾನು ಕೇಂದ್ರ ಸಚಿವನಿದ್ದಾಗ ಹಾಗೂ ಈಗಿನ ರಾಜಕೀಯ ಸ್ಥಿತಿಗೂ ವ್ಯತ್ಯಾಸವಿದೆ. ಈಗ ನಮ್ಮನ್ನು ದೆಹಲಿಯಲ್ಲಿ ಯಾರೂ ಗುರುತು ಹಿಡಿಯಲಾರದ ಸ್ಥಿತಿ ಇದೆ. ನಾನು ಸಚಿವನಿದ್ದಾಗ ನರೇಂದ್ರ ಮೋದಿ ಅವರು ಗುಜರಾತ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅಮಿತ್ ಶಾ ರಾಜ್ಯ ಮಂತ್ರಿಯಾಗಿದ್ದರು. ಈಗ ನಾವು ಕೆಳಗೆ ಬಂದಿದ್ದು, ಅವರು ಮೇಲೆ ಹೋಗಿದ್ದಾರೆ ಎಂದು ಸೂಚ್ಯವಾಗಿ ನುಡಿದರು.

ಬಿಜೆಪಿಗೆ ಶೆಟ್ಟರಿಂದ ಏನೂ ಲಾಭವಾಗಿಲ್ಲ: ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ್‌ಗೆ ಬಿಜೆಪಿ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ. ಶೆಟ್ಟರ್‌ ಏನೇ ಆಗಿದ್ದರೂ ಅದು ಬಿಜೆಪಿಯಿಂದ ಎಂಬುದನ್ನು ಅರಿತುಕೊಳ್ಳಲಿ. ಆದರೆ, ಬಿಜೆಪಿಗೆ ಅವರಿಂದ ಯಾವುದೇ ಲಾಭವಾಗಿಲ್ಲ. ಶೆಟ್ಟರ್‌ ಪಕ್ಷಕ್ಕಾಗಿ ದುಡಿದವರೂ ಅಲ್ಲ, ದುಃಖಪಟ್ಟವರೂ ಅಲ್ಲ. ಅನಿವಾರ್ಯ ಕಾರಣದಿಂದ ಮುಖ್ಯಮಂತ್ರಿ, ಸಚಿವ ಸ್ಥಾನ ಅನುಭವಿಸಿದರು. ಮುಖ್ಯಮಂತ್ರಿಯಾದ ಬಳಿಕವೂ ಮಂತ್ರಿ ಆಗಿದ್ದು ದುರ್ದೈವ. ಸದ್ಯ ಶೆಟ್ಟರ್‌ ಅವರು ಲಿಂಗಾಯತ ಬೊಂಬೆ ಬಿಡುತ್ತಿದ್ದು, ಯಾವ ಲಿಂಗಾಯತರು ಅವರ ಜತೆ ಇಲ್ಲ. ಲಿಂಗಾಯತರಿಗೆ ಶೆಟ್ಟರ್‌ ಏನು ಮಾಡಿದ್ದಾರೆ? ಅವರು ಮಾಡಿದ ಹಗರಣಗಳು ಒಂದಲ್ಲ, ಬಹಳಷ್ಟಿವೆ. ತನಿಖೆ ಮಾಡಿಯೇ ಮಾಡುತ್ತೇವೆ ಎಂದು ಯತ್ನಾಳ ಗುಡುಗಿದರು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";