ಕೌಶಲ್ಯಾಭಿವೃದ್ಧಿ ಹಗರಣದ ಹಿನ್ನಲೇ ಆಂಧ್ರದ ಮಾಜಿ ಸಿಎಂ ʼಚಂದ್ರಬಾಬು ನಾಯ್ಡುʼಗೆ 14 ದಿನಗಳ ನ್ಯಾಯಾಂಗ ಬಂಧನ

ಉಮೇಶ ಗೌರಿ (ಯರಡಾಲ)

ವಿಜಯವಾಡ (ಆಂಧ್ರಪ್ರದೇಶ): ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಆರೋಪಿಯಾಗಿ ಆಂಧ್ರಪ್ರದೇಶ ಸಿಐಡಿ ಪೊಲೀಸರ ಬಂಧನದಲ್ಲಿರುವ ಮಾಜಿ ಸಿಎಂ, ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರಿಗೆ ಎಸಿಬಿ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಅವರನ್ನು ರಾಜಮಂಡ್ರಿಯ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗುವುದು ಎಂದು ವರದಿಯಾಗಿದೆ.

ಆಂಧ್ರಪ್ರದೇಶದ ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರ ಪೊಲೀಸರು ಶನಿವಾರ ವಿಜಯವಾಡದ ಎಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೌಶಲ್ಯಾಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯ್ದುರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಶನಿವಾರ ನಂದ್ಯಾಲದಲ್ಲಿ ಬಂಧಿಸಿತ್ತು. ಬಳಿಕ ಕುಂಚನಪಲ್ಲಿಯಲ್ಲಿರುವ ಸಿಐಡಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಕಚೇರಿಯಲ್ಲಿ 10 ಗಂಟೆಗಳ ಸುದೀರ್ಘ ವಿಚಾರಣೆ ನಡೆಸಿತ್ತು.

ನಂತರ ವೈದ್ಯಕೀಯ ಪರೀಕ್ಷೆಗೆ ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯಕೀಯ ಪರೀಕ್ಷೆಗಳ ನಂತರ ಭ್ರಷ್ಟಾಚಾರ ನಿಗ್ರಹ ದಳದ ನ್ಯಾಯಾಲಯಕ್ಕೆ ಬಿಗಿ ಭದ್ರತೆಯ ನಡುವೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಲು ಪೊಲೀಸರ ಮನವಿ ಮೇರೆಗೆ ಸೆಪ್ಟೆಂಬರ್​ 22 ರ ವರೆಗೆ ನಾಯ್ಡು ಅವರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ನಂದ್ಯಾಲದ ಜ್ಞಾನಪುರಂನಲ್ಲಿ ಬೆಳಗಿನ ಜಾವ ಪೊಲೀಸರು ನಾಯ್ಡು ಅವರನ್ನು ಬಂಧಿಸಿದ್ದರು. ಬೆಳಗ್ಗೆ 6 ಗಂಟೆ ಸುಮಾರಿಗೆ ಅವರ ಕಾರು ನಿಲ್ಲಿಸಿ ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ನಾಯ್ಡು ಅವರು ಸಿಎಂ ಆಗಿದ್ದಾಗ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದಿಂದ ರಾಜ್ಯದ ಬೊಕ್ಕಸಕ್ಕೆ 300 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಟಿಡಿಪಿ ಮುಖ್ಯಸ್ಥರನ್ನು ‘ಪ್ರಮುಖ ಆರೋಪಿ’ ಎಂದು ಹೆಸರಿಸಲಾಗಿದೆ. ನಾಯ್ಡು ಅವರ ಬಂಧನವನ್ನು ವಿರೋಧಿಸಿ ಭಾನುವಾರ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಟಿಡಿಪಿ ತನ್ನ ಕಾರ್ಯಕರ್ತರು, ಬೆಂಬಲಿಗರಿಗೆ ಕರೆ ನೀಡಿದೆ.

ಪ್ರಕರಣವೇನು?: 2015ರಲ್ಲಿ ಆಂಧ್ರಪ್ರದೇಶ ಸರ್ಕಾರ ಯುವಕರಿಗೆ ಕೌಶಲ್ಯ ತರಬೇತಿ ನೀಡುವ 3,350 ಕೋಟಿ ರೂಪಾಯಿ ವೆಚ್ಚದ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿತ್ತು. ಜರ್ಮನ್ ಕಂಪನಿಯ ಮೂಲಕ ಯುವಕರಿಗೆ ತರಬೇತಿ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಈ ಯೋಜನೆಯಲ್ಲಿ 240 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.

 

 

 

 

 

 

ಕೃಪೆ:ಈಟಿವಿ

Share This Article
";