ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಹಾಗೂ ಕೆಲವು ಕಾನೂನು ತೊಡಕನ್ನು ಸರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಂಚಮಸಾಲಿ ಸಮಾಜದಿಂದ ಮನವಿ ಮಾಡಲಾಗಿತ್ತು. ಅಧಿವೇಶನ ಮುಗಿದ ಬಳಿಕ ಕಾನೂನು ತಜ್ಞರ ಜೊತೆ ಸಭೆ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು. ಆದರೆ ಇಂದು ಆ ಭರವಸೆ ಹುಸಿಯಾಗಿದೆ. ಇದರಿಂದಾಗಿ ಶ್ರೀಗಳು ನಿಪ್ಪಾಣಿಯಿಂದ ಹೋರಾಟ ಪ್ರಾರಂಭ ಮಾಡಿದ್ದಾರೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಆರನೇ ಹಂತದ ಹೋರಾಟದ ಸಮಾವೇಶದಲ್ಲಿ ಭಾಗಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತು ನಿಪ್ಪಾಣಿಯಿಂದ ಪರಮಪೂಜ್ಯರು ಮೀಸಲಾತಿಗೋಸ್ಕರ ಮತ್ತೆ ಹೋರಾಟ ಪ್ರಾರಂಭ ಮಾಡಿದ್ದಾರೆ. ಶ್ರೀಗಳು ಹಿಡಿದ ಕೆಲಸವನ್ನು ಯಾವತ್ತೂ ಬಿಟ್ಟಿಲ್ಲ. ಇದರಿಂದ ಆದಷ್ಟು ಬೇಗನೆ ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಹೊಂದಿದ್ದೇನೆ ಎಂದು ತಿಳಿಸಿದರು.
ಹಲವಾರು ನಮ್ಮ ಶಾಸಕರು ಈ ಸಮಾಜದ ಲಾಭ ಪಡೆದಿದ್ದಾರೆ. ಸಮಾಜ ಕಷ್ಟದಲ್ಲಿದ್ದಾಗ ಎಲ್ಲಾ ಶಾಸಕರು ಹೋರಾಟದಲ್ಲಿ ಬಂದು ನಿಲ್ಲಬೇಕು. ಸಮಾಜದ ವೋಟ್ ಪಡೆಯುತ್ತೀರಿ. ವೋಟ್ ಹಾಕಿಸಿಕೊಳ್ಳುವ ಮುನ್ನ ಈ ವೇದಿಕೆ ಲೈನ್ ಸಾಲುತ್ತಿರಲಿಲ್ಲ. ಆದ್ರೆ ಇವತ್ತು ಎಲ್ಲರೂ ಎಲ್ಲಿದ್ದಾರೆ? ಇವತ್ತು ಎಲ್ಲರೂ ಏಕೆ ಬಂದಿಲ್ಲ? ನೋಡಿದ್ರೆ ತುಂಬಾ ನೋವು ಅನಿಸುತ್ತೆ. ಸಮಾಜದ ಬಗ್ಗೆ ಸ್ವಲ್ಪ ಕಳಕಳಿ ಇಟ್ಟುಕೊಳ್ಳಿ ಎಂದು ಇತರ ನಾಯಕರಲ್ಲಿ ಮನವಿ ಮಾಡಿದರು.
ಇವತ್ತು ನಾನು ನನ್ನ ಸಮಾಜ ಅಂತ ಬಂದಿಲ್ಲ. ನನ್ನನ್ನು ಶಾಸಕನನ್ನಾಗಿ ಸುಮ್ಮನೆ ಮಾಡಿಲ್ಲ. ಕಷ್ಟದಲ್ಲಿ ಇದ್ದವರ ಜೊತೆ ನಿಲ್ಲಲು ಶಾಸಕನಾಗಿದ್ದೇನೆ. ನಾನು ನನ್ನ ಮನೆಯ ಸಲುವಾಗಿ ಹೆಂಡತಿ ಮಕ್ಕಳ ಸಲುವಾಗಿ ಶಾಸಕನಲ್ಲ. ಯಾವುದೇ ಸಮಾಜ ಕಷ್ಟದಲ್ಲಿ ಇದ್ದರೂ ಹೋಗಿ ನಿಲ್ಲೋದು ನಮ್ಮ ಧರ್ಮ ಎಂದರು.
ನಿಪ್ಪಾಣಿ ಭಾಗದಲ್ಲಿ ನಮ್ಮ ಸಮಾಜದ ಸಂಘಟನೆ ಇರಲಿಲ್ಲ. ಈ ಭಾಗದ ಮುಖಂಡರಿಗೆ ನಾನು ಅಭಿನಂದನೆ ಸಲ್ಲಿಸುವೆ. ಕೇವಲ ಪಂಚಮಸಾಲಿ ಸಮುದಾಯ ಮೀಸಲಾತಿಗೆ ಹೋರಾಟವಲ್ಲ. ಉಳಿದ ಲಿಂಗಾಯತ ಚತುರ್ಥ, ಮಲೆಗೌಡ ಸೇರಿ ಉಳಿದ ಪಂಗಡಗಳ ಮೀಸಲಾತಿಗೆ ಹೋರಾಟ. ಶ್ರೀಗಳ ನೇತೃತ್ವದಲ್ಲಿ ನಿಜವಾದ ಹೋರಾಟ ಶುರುವಾಗಿದೆ. ಒಬ್ಬ ಶಾಸಕನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊಡಿಸಲು ಸಾಧ್ಯವಾಗಿರಲಿಲ್ಲ. ನೌಕರಿಯಲ್ಲಿಯೂ ಸಹ ನಮ್ಮ ಸಮಾಜದ ಯುವಕರಿಗೆ ತಾರತಮ್ಯ, ಲಿಂಗಾಯತ ಸಮುದಾಯದ 99 ಪಂಗಡಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಸಿಗಬೇಕಿದೆ ಎಂದು ಒತ್ತಾಯಿಸಿದರು.
ಸಿಎಂ ಗಮನ ಸೆಳೆದು ತಕ್ಷಣ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸಿಗೆ ಮನವಿ ಮಾಡಿದ್ದೇನೆ. ನಮ್ಮ ಸರ್ಕಾರ ಇದ್ದರೂ ಮುಖ್ಯಮಂತ್ರಿಗಳಿಗೆ ಒಬಿಸಿ ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸಿಗೆ ಮನವಿ ಮಾಡುತ್ತೇವೆ. ಮೊನ್ನೆ ಕಾಂಗ್ರೆಸ್ ಸಭೆಯಲ್ಲಿಯೂ ಸಹ ನಾನು ಹೇಳಿದ್ದೇನೆ. ನಮ್ಮ ಸರ್ಕಾರ ಇದೆ. ತಕ್ಷಣ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮನವಿ ಮಾಡಿದ್ದೇನೆ. ಪೂಜ್ಯ ಶ್ರೀಗಳು ಸತತ ಐದು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. 10 ರಿಂದ 20 ಲಕ್ಷ ಜನ ಸೇರಿಸಿ ಹೋರಾಟ ಮಾಡಿದ್ದು ಜನರಿಗೆ ಅರಿವು ಮೂಡಿದೆ. ಶ್ರೀಗಳು ಎಲ್ಲೇ ಹೋರಾಟ ಮಾಡಿದರೂ ನೀವು ಬೆಂಬಲ ನೀಡಬೇಕು. ಲಿಂಗಪೂಜೆ ಮಾಡಿ ಸರ್ಕಾರಕ್ಕೆ ಎಚ್ಚರಿಸುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ಸರ್ಕಾರ ಮಟ್ಟದಲ್ಲಿ ಹೋರಾಟ ಮಾಡಲು ನಾವು ಸಿದ್ಧ ಎಂದು ತಿಳಿಸಿದರು.
ಚುನಾವಣೆಯಲ್ಲಿ ಲಿಂಗಾಯತ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕೈಹಿಡಿದಿದೆ. ನಮ್ಮ ಸರ್ಕಾರ ಅರಿವಿನಲ್ಲಿಟ್ಟುಕೊಂಡು ಸೆಂಟ್ರಲ್ ಒಬಿಸಿಗೆ ಪ್ರಸ್ತಾಪ ಕಳುಹಿಸಬೇಕು ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಇಲ್ಲಿ 2A ಖಾಲಿಯಾದ್ರೆ ನಮ್ಮನ್ನು ಅಲ್ಲಿಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದೇನೆ. ನೂರಕ್ಕೆ 90ರಷ್ಟು ಜನ ಒಕ್ಕಲುತನ ಮಾಡಿಕೊಂಡು ಬದುಕುತ್ತಿದ್ದಾರೆ. ಕೋಟಿ ಕೋಟಿ ಕೊಟ್ಟು ವಿಧ್ಯಾಭ್ಯಾಸ ಮಾಡಲು ಬಡವರಿಗೆ ಆಗುತ್ತಿಲ್ಲ. ಹಾಗಾಗಿ ನಮ್ಮನ್ನು ಸೆಂಟ್ರಲ್ ಒಬಿಸಿಗೆ ಸೇರಿಸಬೇಕು ಎಂದು ಹೇಳಿದರು.