ಮರಾಠಾ ಮೀಸಲಾತಿಗಾಗಿ, ಕರ್ನಾಟಕದ 2 ಬಸ್ ಸೇರಿ 6 ಬಸ್​ಗಳಿಗೆ ಬೆಂಕಿ, 85 ಮಂದಿಗೆ ಗಾಯ

ಉಮೇಶ ಗೌರಿ (ಯರಡಾಲ)

ಬೆಳಗಾವಿ: ‘ಮರಾಠಾ ಮೀಸಲಾತಿಗೆ ಆಗ್ರಹಿಸಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಶುಕ್ರವಾರ ಹಿಂಸಾಚಾರ ರೂಪ ಪಡೆದುಕೊಂಡಿದ್ದು, ಆರು ಬಸ್​​ಗಳಿಗೆ ಬೆಂಕಿ ಹಚ್ಚಲಾಗಿದೆ.ಇದರಲ್ಲಿ ಕರ್ನಾಟಕದ ಎರಡು ಬಸ್​​​​​ಗಳಿಗೂ ಬೆಂಕಿ ತಗುಲಿದ್ದು, ಸುಮಾರು 85ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ವಿವಿಧೆಡೆ ಮರಾಠಾ ಮೀಸಲಾತಿಗೆ ಒತ್ತಾಯಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿವೆ. ಜಾಲನಾ ಜಿಲ್ಲೆಯ ಶಹಘಡ ಬಳಿ ನಡೆದ ಹೋರಾಟದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಉದ್ರಿಕ್ತರ ಗುಂಪು ಧುಳೆ – ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾದರು. ತಡೆಯಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹೋರಾಟಗಾರರು ಹೆದ್ದಾರಿಯಲ್ಲಿ ಸಿಕ್ಕ ಸಿಕ್ಕ ಬಸ್​​ಗಳ ಮೇಲೆ ಕಲ್ಲು ತೂರಿದ್ದಾರೆ. ಪ್ರಯಾಣಿಕರು ಬಸ್​​ನಲ್ಲಿ ಇದ್ದಾಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ನೋಡ ನೋಡುತ್ತಿದ್ದಂತೆ ಆರು ಬಸ್ಸುಗಳು ಧಗಧಗನೇ ಹೊತ್ತಿ ಉರಿದಿವೆ.

ಔರಾಂಗಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕೆಎಸ್‌ಆರ್​ಟಿಸಿ ಬಸ್‌ನಲ್ಲಿ 45 ಪ್ರಯಾಣಿಕರಿದ್ದರು. ಈ ಬಸ್ಸಿಗೂ ಬೆಂಕಿ ಹಚ್ಚಲಾಗಿದೆ ಎಂದು ಚಾಲಕ, ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ ಎಲ್.ಎಲ್. ಲಮಾಣಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಕರ್ನಾಟಕದ ಮತ್ತೊಂದು ಬಸ್​​ಗೂ ಬೆಂಕಿ ಹಚ್ಚಲಾಗಿದೆ. ಘಟನೆಯಿಂದ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿಂದೆ ಮರಾಠಾ ಸಮುದಾಯಕ್ಕೆ ರಾಜ್ಯ ಸರ್ಕಾರ ನೀಡಿದ್ದ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಈ ಹಿನ್ನೆಲೆ​ ಹೋರಾಟಗಾರರು ಜಾಲನಾ ಜಿಲ್ಲೆಯ ಶಹಘಡ ಬಳಿ ಹೆದ್ದಾರಿ ತಡೆದು ಹಿಂಸೆಗೆ ಮುಂದಾಗಿದ್ದರು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";