ವರದಿ♦:ಉಮೇಶ ಗೌರಿ(ಯರಡಾಲ)
ಪುಕ್ಸಟ್ಟೆ ಸಿಗುತ್ತದೆ ಎಂದರೆ ನನಗೂ ಇರಲಿ, ನಮ್ಮಪ್ಪನಿಗೂ ಇರಲಿ ಅನ್ನುವ ಗಾದೆ ಇದೆ. ಆದರೆ ಬೈಲಹೊಂಗಲ ತಾಲೂಕಿನ ಸೋಮೇಶ್ವರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆ ವಿಚಾರದಲ್ಲಿ ಇದು ಉಲ್ಟಾಪಲ್ಟಾ ಆಗಿದೆ. ಕಾರ್ಖಾನೆ ಎಂ.ಡಿ ಮಲ್ಲೂರ “ನನಗೂ ಇರಲಿ ನನ್ನ ಮಗನಿಗೂ ಇರಲಿ” ಅಂತ ಅಧಿಕಾರದ ಆಸೆಗೆ ಅಡ್ಡ ದಾರಿ ಹಿಡಿದಿದ್ದಾರೆ. ಹಣ, ಅಧಿಕಾರದ ಲಾಲಸೆಗಾಗಿ ರೈತರ ನೈತಿಕತೆಯ ನೆತ್ತಿ ಮೇಲೆ ಕುಳಿತು ವಿಕೃತವಾಗಿ ಥಕ ಥೈ.. ಥಕ ಥೈ.. ಅಂತ ಕುಣಿಯುತ್ತಿದ್ದಾರೆ. ಅಕ್ರಮದ ಹಾದಿ ಹಿಡಿದ ಮಲ್ಲೂರ ಇಡೀ ನಾಡಿಗೆ ಸಿಹಿ ಉಣಿಸುವ ರೈತರ ರಕ್ತ ಹೀರುತ್ತಿದ್ದಾರೆ ಅನಿಸುತ್ತಿದೆ.
ಮಲ್ಲೂರ ಎಂಥ ಕಿಲಾಡಿ ಎಂದರೆ ಇತ್ತ ಸರ್ಕಾರಿ ಹುದ್ದೆ, ಸೌಲಭ್ಯ ಗಾಡಿ ಗೋಡಾ ಎಲ್ಲವೂ ಬೇಕು, ಅತ್ತ ಕಾರ್ಖಾನೆ ಶೇರು, ಪುತ್ರನನ್ನೂ ರಾಜಕೀಯವಾಗಿ ಬೆಳೆಸಬೇಕು ಅಂತ ದುರಾಲೋಚಿಸುವ ಆಸಾಮಿ. ತನ್ನ ಹುದ್ದೆಯ ಅಧಿಕಾರದ ದುರುಪಯೋಗಪಡಿಸಿಕೊಂಡು ಅಡ್ಡ ದಾರಿ ಹಿಡಿದು, ಅಮಾಯಕ ರೈತರ ನೈತಿಕತೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದಾರೆ. ಸಹಕಾರಿ ಸಂಘಗಳ ಕಾನೂನು ಗಾಳಿಗೆ ತೂರಿ ತಾನು ಮಾಡಿದ್ದೇ ಸರಿ ಅನ್ನುವ ಹಿಟ್ಲರ್ ಚಟ ಮೈಗೂಡಿಸಿಕೊಂಡಿದ್ದಾರೆ ಎನ್ನಬಹುದು.
ಬೈಲಹೊಂಗಲ ಭಾಗದಲ್ಲಿ “ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮತ್ತು ಬಲವರ್ಧನೆ” ಮೂಲಕ ಸುಸ್ಥಿರ ಕೃಷಿ ಪದ್ಧತಿಗಳು ಹಾಗೂ ಉದ್ಯಮಶೀಲತೆಯ ಮೂಲಕ ಗ್ರಾಮೀಣ ಸಮುದಾಯಗಳ ಜೀವನೋಪಾಯವನ್ನು ಸುಧಾರಿಸುವ ದೃಷ್ಟಿಯಿಂದ, ಮಾಜಿ ಶಾಸಕ ದಿವಂಗತ ರಮೇಶ ಬಾಳೆಕುಂದರಗಿಯವರು ಹುಟ್ಟು ಹಾಕಿದ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ 2000 ನೇ ಸಾಲಿನಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿ, ಸಾಕಷ್ಟು ಏಳು-ಬೀಳುಗಳ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ಸಹಕಾರ ರಂಗದ ಉತ್ತಮ ಸಕ್ಕರೆ ಕಾರ್ಖಾನೆ ಎನ್ನಿಸಿಕೊಂಡಿದೆ. ಪ್ರಸ್ತುತ ಕಾರ್ಖಾನೆ ಸುಮಾರು 30000 ಕ್ಕೂ ಹೆಚ್ಚು ಶೇರು ಸದಸ್ಯರನ್ನು ಹೊಂದಿದೆ.
ಈ ಕಾರ್ಖಾನೆಯ 5 ವರ್ಷಗಳ ಅವಧಿಗಾಗಿ ಆಡಳಿತ ಮಂಡಳಿಗೆ ಚುನಾವಣೆ 2023ರ ಸೆ.10ರಂದು ಜರುಗಲಿದೆ. 17 ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಆ.27ರಿಂದ ಸೆ.2ರ ವರೆಗೆ ಕಾರ್ಖಾನೆ ಆಡಳಿತ ಕಚೇರಿಯಲ್ಲಿ ಅಭ್ಯರ್ಥಿಗಳಿಂದ ನಾಮ ಪತ್ರಗಳನ್ನು ಸಲ್ಲಿಸುವ ಕಾರ್ಯ ನಡೆದಿದೆ.
ಸಹಕಾರಿ ಇಲಾಖೆಯ ಅಪರ ನಿಬಂಧಕರಾಗಿಯೂ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಕೇಂದ್ರ ಸ್ಥಾನೀಕ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಎಂ.ಡಿ.ಮಲ್ಲೂರ ಅವರು ಬೈಲಹೊಂಗಲ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಳೆದ 4 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.ಅಲ್ಲದೇ ಈ ಕಾರ್ಖಾನೆಯ ಅಧಿಸೂಚಿತ ಪ್ರದೇಶದ ವ್ಯಾಪ್ತಿಯ ರಹವಾಸಿಗಳಾಗಿದ್ದು, ಈ ಸಂಸ್ಥೆಯ ಶೇರು ಈ ಕುಟುಂಬದವರು ಪಡೆದುಕೊಂಡಿದ್ದು ಕಬ್ಬು ಬೆಳೆಗಾರರು ಆಗಿರುವ ಇವರು
ಸಹಕಾರ ಕಾಯ್ದೆ ಪ್ರಕಾರ ಐದು ವರ್ಷಗಳಲ್ಲಿ ಸಂಘದ ಸದಸ್ಯರು ಕನಿಷ್ಠ ಎರಡು ವಾರ್ಷಿಕ ಸಭೆಗೆ ಹಾಜರಾಗಬೇಕು ಹಾಗೂ ಕನಿಷ್ಠ ವ್ಯವಹಾರ ನಡೆಸಿರಬೇಕು ಎಂಬ ನಿಯಮವನ್ನು ದುರುಪಯೋಗ ಪಡಿಸಿಕೊಂಡು ಸುಮಾರು 89 % ರಷ್ಟು ಶೇರು ಸದಸ್ಯರನ್ನು ಅನರ್ಹ ಮಾಡಿ ತಾತ್ಕಾಲಿಕ ಮತದಾರರ ಪಟ್ಟಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಕೋರಿದ್ದರು.
ಈ ಸಮಯದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಿ.ಎಂ. ಚಿಕ್ಕನಗೌಡರ ಅವರು ಕೋವಿಡ್ -19 ಸಂದರ್ಭದಲ್ಲಿ ಎರಡು ವರ್ಷ ವಿಡಿಯೋ ಕಾನ್ಫರೆನ್ಸ್ ಮೂಲಕ ವಾರ್ಷಿಕ ಸಭೆ ನಡೆಸಿದ ಕಾರಣ ಹಾಜರಾತಿಗೆ ರಿಯಾಯತಿಯನ್ನು ನೀಡಿ ಮತ್ತು ರಿಯಾಯತಿ ದರದಲ್ಲಿ ನೀಡಿದ ಸಕ್ಕರೆಯನ್ನು ಷೇರುದಾರರು ಹಣ ಪಾವತಿ ಮಾಡಿ ಖರೀದಿಸಿದ ವ್ಯವಹಾರವನ್ನು ಕನಿಷ್ಟ ಸೇವೆ ಎಂದು ಪರಿಗಣಿಸಿ ಅನರ್ಹರಾದ ಎಲ್ಲ ಷೇರುದಾರರಿಗೆ ಮತದಾನದ ಅರ್ಹತೆಯನ್ನು ನೀಡಲು ಸೂಕ್ತ ಕ್ರಮ ಕೈಕೊಳ್ಳುವಂತೆ ಶಾಸಕರುಗಳಾದ ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ, ಅಶೋಕ್ ಪಟ್ಟಣ ಅವರ ಮೂಲಕ ಚಿಕ್ಕನಗೌಡರು ಚುನಾವಣೆಗೆ ಸಂಬಂಧಿಸಿದ ಸಹಕಾರಿ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಇದಲ್ಲದೇ ಮತದಾನದ ಹಕ್ಕು ಕೋರಿ ಸುಮಾರು 14000 ಕ್ಕೂ ಹೆಚ್ಚು ಸದಸ್ಯರು ಚುನಾವಣಾಧಿಕಾರಿಗಳಿಗೆ ಆಕ್ಷೇಪಣೆ ಕೂಡ ಸಲ್ಲಿಸಿದರು. ಇದರ ತರುವಾಯ ಎಲ್ಲ ಸದಸ್ಯರನ್ನು ಅರ್ಹ ಮಾಡಿದರು.
ನಂತರದಲ್ಲಿ ಎಮ್.ಡಿ. ಮಲ್ಲೂರ ಅವರು ದಿ: 15/08/2023 ರಂದು ಸಹಕಾರಿ ಸಂಘಗಳ ಸಂಯುಕ್ತ ನಿಬಂಧಕರು ಬೆಳಗಾವಿ ಪ್ರಾಂತ ಬೆಳಗಾವಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಅವರಿಗೆ ಬರೆದ
ಪತ್ರದಲ್ಲಿ ಕಾರ್ಖಾನೆಯ ಒಟ್ಟು 30598 ಎಲ್ಲಾ ಶೇರು ಸದಸ್ಯರಿಗೂ ಚುನಾವಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಕೇಳಿ ಸಂಸ್ಥೆಯ ಎಲ್ಲಾ ಅನರ್ಹ ಶೇರು ಸದಸ್ಯರಿಗೆ ಮತದಾನದ ಹಕ್ಕನ್ನು
ತಾವೇ ನೀಡಿರುವಂತೆ ಮತದಾರರ ಮೇಲೆ ಪ್ರಭಾವವನ್ನು ಬೀರುವ ಪತ್ರಿಕಾ ಹೇಳಿಕೆಯನ್ನು ನೀಡಿದ್ದರು.
ಇದರ ದುರುಪಯೋಗ ಪಡೆದುಕೊಂಡು ಹಾಗೂ ತಮ್ಮ ಅಧಿಕಾರದ ಪ್ರಭಾವವನ್ನು ಉಪಯೋಗಿಸಿ ಎಂ.ಡಿ. ಮಲ್ಲೂರ ಅವರ ಮಗ ಕಾರ್ತಿಕ ಮಲ್ಲಿಕಾರ್ಜುನ ಮಲ್ಲೂರನನ್ನು ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡುವ ಎಲ್ಲಾ ಪರೋಕ್ಷ ಅನುಕೂಲತೆಗಳನ್ನು ಮಾಡಿಕೊಂಡಿದ್ದು, ದಿ: 30/08/2023 ರಂದು ಕಾರ್ತಿಕ ಮಲ್ಲಿಕಾರ್ಜುನ ಮಲ್ಲೂರ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ “ಅ”ವರ್ಗದ ಸಾಮಾನ್ಯ ಮತಕ್ಷೇತ್ರದ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದಾರೆ.
ಎಂ. ಡಿ. ಮಲ್ಲೂರ ಅವರ ಮಗನ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸುತ್ತಾರೋ ಅಥವಾ ಪುರಸ್ಕರಿಸುತ್ತಾರೂ ಕಾದು ನೋಡಬೇಕಾಗಿದೆ.