ಹೈದರಾಬಾದ್ (ತೆಲಂಗಾಣ): ದೆವ್ವ ಓಡಿಸುವುದಾಗಿ ನಂಬಿಸಿದ ನಕಲಿ ಬಾಬಾ ಪೂಜೆಯ ಹೆಸರಲ್ಲಿ ಗೃಹಿಣಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ವಿವರ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಬಡಾವಣೆವೊಂದರ ಯುವತಿ 3 ತಿಂಗಳ ಹಿಂದೆ ತಾಳಬಕಟ್ಟೆ ಭವಾನಿನಗರ ಬಡಾವಣೆಯ ವ್ಯಕ್ತಿಯೊಂದಿಗೆ ಪ್ರೇಮ ವಿವಾಹವಾಗಿದ್ದಳು. ಅತ್ತೆಯ ಮನೆಗೆ ಬಂದ ಕೆಲವು ದಿನಗಳ ನಂತರ ಆಕೆಯ ಆರೋಗ್ಯ ಹದಗೆಟ್ಟಿತ್ತು.
ಆಕೆಗೆ ದುಷ್ಟಶಕ್ತಿಗಳು ಅಂಟಿಕೊಂಡಿವೆ ಎಂದು ಶಂಕಿಸಿ, ಆಕೆಯ ಪತಿ ಮೊದಲು ಬರ್ಕತ್‌ಪುರದ ಬಾಬಾರೊಬ್ಬರ ಬಳಿಗೆ ಕರೆದೊಯ್ದು ತಾಯಿಯ ಸಲಹೆಯಂತೆ ಪೂಜೆ ಸಲ್ಲಿಸಿದ್ದ. ಆದರೆ, ಫಲ ಸಿಗದ ಕಾರಣ ಜುಲೈ ಮೊದಲ ವಾರದಲ್ಲಿ ಹಳೆ ಬಸ್ತಿ ಬಂಡ್ಲಗುಡ ರಹಮತ್‌ನಗರದಲ್ಲಿರುವ ತಂತ್ರಿಕ್ ಮಜರ್ ಖಾನ್ (30) ಎಂಬಾತನ ಬಳಿ ಕರೆದುಕೊಂಡು ಹೋಗಿದ್ದರು. ಆಕೆಗೆ 5 ದೆವ್ವಗಳು ಆವರಿಸಿದ್ದು, ಇವುಗಳಿಂದ ಮುಕ್ತಿ ಹೊಂದಲು ಆಕೆಗೆ ಪೂಜೆ ಸಲ್ಲಿಸಬೇಕು ಎಂದು ನಕಲಿ ಬಾಬಾ ಹೇಳಿದ್ದಾನೆ.
ಮೊದಲು ತಾಳಬಕಟ್ಟೆಗೆ ಬಂದು ಸಂತ್ರಸ್ತೆಯ ಮನೆಯನ್ನು ಪರಿಶೀಲಿಸಿದರು. ಎರಡು ದಿನಗಳ ನಂತರ ಅವನು ತನ್ನ ಮನೆಗೆ ಬರುವಂತೆ ಹೇಳಿದ್ದ. ಸಂತ್ರಸ್ತೆ ತನ್ನ ಪತಿಯೊಂದಿಗೆ ಬಂಡ್ಲಗುಡದಲ್ಲಿರುವ ನಕಲಿ ಬಾಬಾನ ಮನೆಗೆ ಬಂದಿದ್ದಳು. ಪತಿಗೆ ಸೊಂಟಕ್ಕೆ ದಾರ ಮತ್ತು ಕಣ್ಣಿಗೆ ಬಟ್ಟೆ ಕಟ್ಟಲು ಹೇಳಿದ. ನಂತರ ಪತಿಯನ್ನು ಹೊರಗೆ ಕಳುಹಿಸಿ ಸಂತ್ರಸ್ತೆಯನ್ನು ಮಲಗಿಸಿ ಆಕೆಯ ಮೇಲೆ ಎಣ್ಣೆ ಸುರಿದಿದ್ದಾನೆ.
ನಂತರ ಆಕೆಯ ಮೈಮೇಲೆ ಎಣ್ಣೆಯನ್ನು ಬಳಿದುಕೊಂಡು ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ದೇಹವನ್ನು ಹಾಲಿನಿಂದ ತೊಳೆದು ಹೊಸ ಬಟ್ಟೆಯನ್ನು ಧರಿಸಲು ಹೇಳಿದ. ಇಲ್ಲಿ ನಡೆದ ಪೂಜೆಯ ಬಗ್ಗೆ ಯಾರಿಗೂ ಹೇಳಬೇಡ, ಹೇಳಿದ್ರೆ ತೊಂದರೆಯಾಗುತ್ತದೆ ಎಂದು ನಕಲಿ ಬಾಬಾ ತನಗೆ ಎಚ್ಚರಿಸಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ.
ಮನೆಗೆ ತೆರಳಿದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಕುಟುಂಬಸ್ಥರು ಆಕೆಯನ್ನು ತಡೆದು ಕೊಠಡಿಯಲ್ಲಿ ಹಾಕಿ ಬೀಗ ಜಡಿದಿದ್ದರು. 10 ದಿನಗಳ ನಂತರ ಮನೆಗೆ ಬಂದ ಅಕ್ಕನಿಗೆ ವಿಷಯ ತಿಳಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಅಂದಿನ ಇನ್ಸ್ಪೆಕ್ಟರ್ ಅಮ್ಜದ್ ಅಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ವಿಷಯ ತಿಳಿದ ನಕಲಿ ಬಾಬಾ ಮಜರ್ ಖಾನ್ ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದನು. ಸಿಐ ವರ್ಗಾವಣೆಯಿಂದ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಂಡಿರಲಿಲ್ಲ. ಸಂತ್ರಸ್ತೆಯ ಒತ್ತಡದ ಮೇರೆಗೆ ಭವಾನಿನಗರ ಪೊಲೀಸರು ಪ್ರಕರಣವನ್ನು ಬಂಡ್ಲಗೂಡ ಠಾಣೆಗೆ ಇದೇ 22ರಂದು ವರ್ಗಾಯಿಸಿದ್ದರು. ಆರೋಪಿಗೆ ಎರಡು ಮದುವೆಯಾಗಿರುವುದು ತಿಳಿದುಬಂದಿದ್ದು, ಪೊಲೀಸರು ಆರೋಪಿಯ ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.