Thursday, September 19, 2024

ಬೆಳವ(ಗೂಬೆ)ಹೊಕ್ಕ ಮನೆಯಲ್ಲಿ ಇರಬಾರದೆಂದು ಹೊರಬಂದೆ: ಸವದಿ

ಬೆಳಗಾವಿ: ರಮೇಶ ಜಾರಕಿಹೊಳಿ ಅವರ ದೃಷ್ಟಿಯಲ್ಲಿ ನಾನು ‘ಪೀಡೆ’ ಇರಬಹುದು. ಆದರೆ, ಬೆಳವ(ಗೂಬೆ) ಹೊಕ್ಕ ಮನೆ ಯಾವಾಗಲೂ ಹಾಳಾಗುತ್ತದೆ. ಆ ಮನೆಯಿಂದ ಬಂದಿರುವ ಬೆಳವ, ಈ ಮನೆ ಹಾಳು ಮಾಡಿ ವಾಪಸ್‌ ಹೋಗುತ್ತದೆ. ಹಾಗಾಗಿ ಆ ಮನೆಯಲ್ಲಿ ಇರಬಾರದೆಂದು ತೀರ್ಮಾನಿಸಿ ಹೊರಬಂದಿದ್ದೇನೆ’ ಎಂದು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಲಕ್ಷ್ಮಣ ಸವದಿ ಸೋತಿದ್ದರೂ ಪಕ್ಷ ಉಪಮುಖ್ಯಮಂತ್ರಿ ಮಾಡಿತ್ತು. ನಿಮ್ಮನ್ನು(ಕಾರ್ಯಕರ್ತರನ್ನು) ಬಿಟ್ಟು ಹೋಗಿದ್ದಾನೆ. ಪೀಡೆ ತೊಲಗಿತು’ ಎಂಬ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ, ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದರು.

‌‘ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ವಾತಾವರಣ ನಿರ್ಮಿಸಿದ್ದು ಪಕ್ಷದವರೇ. ನೀನು ಉಪಚುನಾವಣೆಯಲ್ಲಿ ಮಹೇಶ ಕುಮಠಳ್ಳಿ ಗೆಲ್ಲಿಸಿದರೆ, ಮುಂದಿನ ಅವಧಿಯವರೆಗೆ ಉಪಮುಖ್ಯಮಂತ್ರಿ ಮಾಡುವುದಾಗಿ ‘ಆಪರೇಷನ್ ಕಮಲ’ದ ವೇಳೆ ವರಿಷ್ಠರು ತಿಳಿಸಿದ್ದರು. ನಾನೇನೂ ಡಿಸಿಎಂ ಅಥವಾ ಮಂತ್ರಿ ಸ್ಥಾನ ಕೊಡಿ ಎಂದು ಕೇಳಿರಲಿಲ್ಲ. ಅವರೇ ಕೊಟ್ಟರು. ಆ ಸ್ಥಾನದಿಂದ ತೆಗೆಯುವ ವೇಳೆ ಕೇಳಲಿಲ್ಲ. ನಾನೇನೂ ಭ್ರಷ್ಟಾಚಾರ ಮತ್ತು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇನಾ?’ ಎಂದು ಪ್ರಶ್ನಿಸಿದರು.

‘ಬಿಜೆಪಿಗೆ ಕಪ್ಪುಚುಕ್ಕೆ ಬಾರದಂತೆ 20 ವರ್ಷ ಕೆಲಸ ಮಾಡಿದ್ದೇನೆ. ರಾಜ್ಯ ಸುತ್ತಿ ಅನೇಕ ಶಾಸಕರ ಆಯ್ಕೆಗಾಗಿ ಶ್ರಮಿಸಿದ್ದೇನೆ. ಅನೇಕ ಉಪಚುನಾವಣೆಗಳಲ್ಲಿ ನಾಯಕರು ಕೊಟ್ಟ ಜವಾಬ್ದಾರಿ ನಿಭಾಯಿಸಿದ್ದೇನೆ. ಅವರು ಕೊಟ್ಟ ಮಾತಿನಂತೆ, ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕೊಡಬೇಕು ಎಂದಿದ್ದೆ. ಆದರೆ, ಕಾಂಗ್ರೆಸ್‌
ತೊರೆದು ಬಿಜೆಪಿಗೆ ಬಂದ 17 ಜನರಿಗೆ ಟಿಕೆಟ್‌ ಕೊಡಬೇಕು ಎಂದರು. ಹಾಗಾದರೆ ಆರ್‌.ಶಂಕರ್‌ ಅವರಿಗೆ ಏಕೆ ಟಿಕೆಟ್‌ ನೀಡಲಿಲ್ಲ’ ಎಂದು ಪ್ರಶ್ನಿಸಿದರು.

ಯಾವುದೇ ಮಾನದಂಡ ರೂಪಿಸಿದರೆ, ಸಾಮಾನ್ಯ ಕಾರ್ಯಕರ್ತರಿಂದ ಪ್ರಧಾನಿಯವರೆಗೆ ಏಕರೂಪದಲ್ಲಿ ಅದು ಅನ್ವಯವಾಗುತ್ತದೆ. ಆದರೆ, ಬಿಜೆಪಿಯಲ್ಲಿ ತತ್ವ–ಸಿದ್ಧಾಂತ ಗಾಳಿಗೆ ತೂರುವ ಕೆಲಸವಾಗಿದೆ. ಸ್ವಾಭಿಮಾನಕ್ಕೆ ಧಕ್ಕೆಯಾದರೆ, ಯಾರೂ ತಡೆಯಲಿಕ್ಕೆ ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು

ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರ ಒಪ್ಪಿಗೆ ಮೇರೆಗೆ ಕಾಂಗ್ರೆಸ್‌ ಸೇರಿದ್ದು, ಒಂದೆರಡು ದಿನಗಳಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಲಕ್ಷ್ಮಣ ಸವದಿ ಒಂದು ಗಿಡದ ತಪ್ಪಲು ಎಂದು ಜಿಲ್ಲೆಯ ನಾಯಕರೊಬ್ಬರು ಹೇಳಿದ್ದಾರೆ. ಆ ಮಾತು ಸಕಾರಾತ್ಮಕವಾಗಿ ಸ್ವೀಕರಿಸಿ, ತಪ್ಪಲಿನ ತರಹವೇ ಕೆಲಸ ಮಾಡುತ್ತೇನೆ’ ಎಂದರು.

‘ಲಕ್ಷ್ಮಣ ಸವದಿ ದುಡುಕಿದ್ದಾರೆ’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ, ‘ನಾನು ದುಡುಕಿಲ್ಲ. ಸಿ.ಎಂ ಮೇಲೆ ಗೌರವವಿದೆ. ನಿಜವಾಗಿ ದುಡುಕಿದ್ದು ನೀವು’ ಎಂದು ಪ್ರತಿಕ್ರಿಯಿಸಿದರು.

‘ಬಿ.ಎಸ್‌.ಯಡಿಯೂರಪ್ಪ ದೊಡ್ಡ ನಾಯಕರು. ನಮ್ಮ ತಂದೆ ಸಮಾನರು. ಒಂದು ಪಕ್ಷ ಬಿಟ್ಟು, ಇನ್ನೊಂದು ಪಕ್ಷಕ್ಕೆ ಬಂದಿದ್ದಾರೆ. ಅವರಿಗೆ ಬೇರೆಯವರಿಗೆ ಮಾರ್ಗದರ್ಶನ ಮಾಡುವ ಹಕ್ಕಿಲ್ಲ’ ಎಂದು ತಿವಿದರು.

‘ಜಗದೀಶ ಶೆಟ್ಟರ್ ಮತ್ತು ನಾನು 20 ವರ್ಷಗಳಿಂದ ಜತೆಗಿದ್ದೇವೆ. ಶೆಟ್ಟರ್ ಏನು ತಪ್ಪು ಮಾಡಿದ್ದಾರೆ? ಭ್ರಷ್ಟಾಚಾರ ಮಾಡಿದ್ದಾರಾ? ಅವರಿಗೆ 67 ವರ್ಷ ವಯಸ್ಸು. ವಯಸ್ಸಿನ ಮಾನದಂಡವಿದ್ದರೆ, ಏಕೆ ಟಿಕೆಟ್ ಕೊಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ಜಿಲ್ಲೆ

ರಾಜ್ಯ

error: Content is protected !!