ಆನಂದ ಸಿಂಗ್‌ ಕಾಂಗ್ರೆಸ್‌ನಲ್ಲಿ ಇದ್ದಾಗ ಗಂಡಸುತನ ಇರಲಿಲ್ಲವೇ: ಶೈಲಜಾ ಹಿರೇಮಠ

ಉಮೇಶ ಗೌರಿ (ಯರಡಾಲ)

ಕೊಪ್ಪಳ ಜಿಲ್ಲೆ: ಕಾಂಗ್ರೆಸ್‌ನಲ್ಲಿ ಇರುವವರಿಗೆ ಗುಂಡಿಗೆಯೂ ಇಲ್ಲ, ಗಂಡಸುತನವೂ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಇತ್ತೀಚೆಗೆ ಗಂಗಾವತಿ ತಾಲ್ಲೂಕಿನ ಮರಳಿಯಲ್ಲಿ ನೀಡಿದ್ದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೆಪಿಸಿಸಿ ಮಾಧ್ಯಮ ವಕ್ತಾರೆ ಶೈಲಜಾ ಹಿರೇಮಠ ’ಸಿಂಗ್‌ ಕಾಂಗ್ರೆಸ್‌ನಲ್ಲಿ ಇದ್ದಾಗ ಗಂಡಸುತನ ಇರಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಗಂಗಾವತಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ‘ಸಚಿವ ಅಶ್ವತ್ಥ ನಾರಾಯಣ ಕಾಂಗ್ರೆಸ್ ಪಕ್ಷದ ಗಂಡಸುತನದ ಬಗ್ಗೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಕತ್ತು, ದಮ್ಮು ಎನ್ನುವ ಪದಗಳನ್ನು ಬಳಸುತ್ತಾರೆ. ಈಗ ಆನಂದ್‌ ಸಿಂಗ್‌ ಗಂಡಸುತನ ಪದಬಳಕೆ ಮಾಡಿ ತಮ್ಮ ಮರ್ಯಾದೆಯನ್ನು ತಾವೇ ಹರಾಜು ಮಾಡಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.  

‘ಆನಂದ್ ಸಿಂಗ್ ಅವರಿಗೆ ನಿಜವಾದ ತಾಕತ್ತು ಇದ್ದರೆ ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿ. ನಾಲಿಗೆ ಹರಿಬಿಟ್ಟು, ವೈಯಕ್ತಿಕವಾಗಿ ಪಕ್ಷ ಹಾಗೂ ನಾಯಕರನ್ನು ತೇಜೋವಧೆ ಮಾಡುವುದು ಸರಿಯಲ್ಲ. ಇದನ್ನು ಕಾಂಗ್ರೆಸ್‌ ಸಹಿಸುವುದಿಲ್ಲ’ ಎಂದರು.

 ‘ಬಿಜೆಪಿ ಜನಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಆಪರೇಷನ್‌ ಕಮಲದ ಮೂಲಕ ಸೆಳೆದುಅನೈತಿಕವಾಗಿ ಆಡಳಿತ  ನಡೆಸಿದೆ. ದೇಶದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸಿ ಧರ್ಮ, ಸಂಸ್ಕೃತಿಗಳನ್ನು ನಾಶ ಮಾಡುತ್ತಿದೆ’ ಎಂದು ಆರೋಪಿಸಿದರು. ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಣಿಸಿ ಸಮಿತಿ ಸದಸ್ಯೆ ಶಶಿಕಲಾ ಇದ್ದರು‌.
……………..,
(ಕೃಪೆ: ಪ್ರಜಾವಾಣಿ ‌)
Share This Article
";