ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಹಿಂದೇಟು! ಮೀಸಲಾತಿ ಚುನಾವಣೆ ಹೊತ್ತಲ್ಲಿ ತಂದಿತ್ತ ಫಜೀತಿ.

ಉಮೇಶ ಗೌರಿ (ಯರಡಾಲ)

ಬೆಳಗಾವಿ: ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವು ತನ್ನ ಆಡಳಿತಾವಧಿಯ  ಕೊನೆಯಲ್ಲಿ ಅಸ್ತಿತ್ವದಲ್ಲಿರುವ ಮೀಸಲಾತಿ ನೀತಿಗೆ ಮಾಡಿದ ಬದಲಾವಣೆಯಿಂದಾಗಿ ಲಿಂಗಾಯತ ಹೃದಯಭೂಮಿ ಕಿತ್ತೂರು ಕರ್ನಾಟಕ ಪ್ರದೇಶದ ಕ್ಷೇತ್ರಗಳಲ್ಲಿ ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಪರಿಣಾಮ ಬೀರುವ ನಿರೀಕ್ಷೆಯಿದೆ.

ಕಿತ್ತೂರು ಕರ್ನಾಟಕ ಭಾಗವೂ ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ ಮತ್ತು ಗದಗ ಜಿಲ್ಲೆಗಳನ್ನು ಒಳಗೊಂಡಿದೆ. ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು ರದ್ದುಪಡಿಸುವ ಮತ್ತು ಲಿಂಗಾಯತ ಮತ್ತು ಒಕ್ಕಲಿಗರ ನಡುವೆ ಮೀಸಲಾತಿ ಹಂಚಿಕೆಯ ವಿಷಯವು ಈ ಪ್ರದೇಶದ ಮತದಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ರದ್ದಾದ 2ಬಿ ಕೋಟಾದಿಂದ ಲಿಂಗಾಯತರಿಗೆ ಶೇ.2ರಷ್ಟು ಮೀಸಲಾತಿಯನ್ನು ವಿಸ್ತರಿಸುವ ಮೂಲಕ ಆಡಳಿತಾರೂಢ ಬಿಜೆಪಿ ಲಿಂಗಾಯತರನ್ನು ಸಮಾಧಾನಪಡಿಸಲು ಪ್ರಯತ್ನ ನಡೆಸಿದ್ದರೂ, ಈ ಭಾಗದ ಬಹುಪಾಲು ಲಿಂಗಾಯತ ಮತದಾರರು ಕೇಸರಿ ಪಕ್ಷದ ವಿರುದ್ಧ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿದ್ದಾರೆ.

2013ರ ಚುನಾವಣೆಯಲ್ಲಿ ಈ ಪ್ರದೇಶದ 56 ಸ್ಥಾನಗಳ ಪೈಕಿ ಕಾಂಗ್ರೆಸ್ 34 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತ್ತು. 2018ರಲ್ಲಿ ಬಿಜೆಪಿ 40 ಸ್ಥಾನಗಳಲ್ಲಿ ಯಶಸ್ಸನ್ನು ಕಂಡಿತ್ತು, ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ನಂತರ ವಿರೋಧ ಪಕ್ಷದಲ್ಲಿ ಕುಳಿತಿತ್ತು.

ಮೀಸಲಾತಿಯ ವಿಷಯದ ಹೊರತಾಗಿ, ಕಾಂಗ್ರೆಸ್‌ನ 40% ಕಮಿಷನ್ ಆರೋಪ ಮತ್ತು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೇಲಿನ ಲೋಕಾಯುಕ್ತ ದಾಳಿಯಂತಹ ಇತರ ವಿವಾದಾತ್ಮಕ ವಿಷಯಗಳು ಬಿಜೆಪಿಯ ಭವಿಷ್ಯಕ್ಕೆ ಧಕ್ಕೆ ಉಂಟಾಗುವ ಸಾದ್ಯತೆ ಇದೆ. 

ಬೊಮ್ಮಾಯಿ ಸರ್ಕಾರದ ದೌರ್ಬಲ್ಯಗಳನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ಬಿಜೆಪಿ ತನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ತನ್ನ ಸ್ಟಾರ್ ಪ್ರಚಾರಕರನ್ನು ಹೆಚ್ಚಾಗಿ ಅವಲಂಬಿಸಿದೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ರೋಡ್ ಶೋ ನಡೆಸುತ್ತಿರುವ ಮೋದಿ ಕಿತ್ತೂರು ಕರ್ನಾಟಕದಲ್ಲಿ ಹೆಚ್ಚಿನ ಪ್ರಚಾರ ನಡೆಸುವ ನಿರೀಕ್ಷೆ ಇದೆ.

ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿರುವ ಕ್ಷೇತ್ರವಾದ ಶಿಗ್ಗಾಂವಿಯಲ್ಲಿ ಹೆಚ್ಚಿನ ಘರ್ಷಣೆಗಳು ನಡೆಯುತ್ತಿವೆ. ಪಂಚಮಸಾಲಿ-ಲಿಂಗಾಯತರ ಮುಖ ಎಂದು ಬಿಂಬಿಸಲಾಗುತ್ತಿರುವ ವಿನಯ್ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಉತ್ಸುಕವಾಗಿರುವ ಹಿನ್ನೆಲೆಯಲ್ಲಿ ಎರಡು ಲಿಂಗಾಯತರ ನಡುವೆ ಘರ್ಷಣೆ ಏರ್ಪಡುವ ಲಕ್ಷಣಗಳು ಕಾಣುತ್ತಿದೆ. 

ಎಸ್‌ ಆರ್ ಬೊಮ್ಮಾಯಿ, ಜೆಎಚ್ ಪಟೇಲ್ ಮತ್ತು ರಾಮಕೃಷ್ಣ ಹೆಗಡೆ ಅವರ ನಿಧನದ ನಂತರ ಜನತಾ ದಳದ ಪತನದಿಂದ ಜೆಡಿಯು ನಾಯಕರು ಬಿಜೆಪಿಗೆ ಬದಲಾದರು. ಯಡಿಯೂರಪ್ಪ ಲಿಂಗಾಯತ ಐಕಾನ್ ಆಗಿ ಜನಪ್ರಿಯತೆ ಗಳಿಸಿದ ಪರಿಣಾಮ ಈ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ಕಾರಣವಾಯಿತು.

ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಹಲವು ಕ್ಷೇತ್ರಗಳಲ್ಲಿ ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉತ್ಸುಕರಾಗಿರುವ ಹಿನ್ನಲೆ , ಭಾರೀ ಪ್ರಮಾಣದಲ್ಲಿ ಮತ ವಿಭಜನೆಯಾಗುವ ಭೀತಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ.  

 
Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";