ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ದೇಶದ ಸರ್ವೊಚ್ಛ ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸಿ ಲಂಚಕ್ಕಾಗಿ ಕೈಯೊಡ್ಡಿ ಜೈಲು ಸೇರಿರುವ ತಹಸೀಲ್ದಾರ ಸೋಮಲಿಂಗಪ್ಪ ಹಾಲಗಿ ಅವರ ಲಂಚಾವತಾರದ ಕರಾಳ ಮುಖದ ಛಾಯೆ ಇದೀಗ
ದಿನಕ್ಕೊಂದು ರೂಪ ಪಡೆದುಕೊಳ್ಳುತ್ತ ಸಾಗಿದ್ದು ಸರಕಾರದ ಹಿರಿಯ ಅಧಿಕಾರಿಗಳನ್ನು ಜನಪ್ರತಿನಿಧಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ತಾಲೂಕಿನ ಖೋದಾನಪೂರ ಗ್ರಾಮದ ಬಾಪುಸಾಹೇಬ್ ಇನಾಮದಾರ ಹಾಗೂ ಅರಣ್ಯ ಇಲಾಖೆ ನಡುವಿನ ಸಾವಿರಾರು ಎಕರೆ ಜಮೀನಿನ ವ್ಯಾಜ್ಯ 40 ವರ್ಷಗಳಿಂದ ನ್ಯಾಯಾಲಯಗಳಲ್ಲಿ ನಡೆದು ತಾರಕಕ್ಕೇರಿ ಕೊನೆಗೆ ಸುಪ್ರೀಮ್ ಕೊರ್ಟನಲ್ಲಿ ಅಗಸ್ಟ್ 10 ರಂದು ಇನಾಮದಾರ ಪರ ನಿರ್ಣಯ ಹೊರಬಿದ್ದಿತ್ತು. ಇನಾಮದಾರ ಅವರು ಸೆಪ್ಟಂಬರ್ 6 ರಂದು ಸ್ಥಳೀಯ ತಹಸೀಲ್ದಾರ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿ ಅರಣ್ಯ ಖಾತೆ ಬದಲಾಯಿಸಿ ತಮ್ಮ ಹೆಸರನ್ನು ನೊಂದಾಯಿಸಲು ಮನವಿ ಮಾಡಿದರು. ಅಂದಿನಿಂದ ಪ್ರಾರಂಭವಾಯಿತು ನಿತ್ಯ ತಹಸೀಲ್ದಾರ ಕಚೇರಿಗೆ ಇನಾಮದಾರ ಎಡತಾಕಾಟ. ಸರ್ವೊಚ್ಚ ನ್ಯಾಯಾಲಯದ ನಿರ್ಣಯವನ್ನೇ ಧಿಕ್ಕರಿಸಿದ ತಹಸೀಲ್ದಾರ 3 ತಿಂಗಳ ಕಾಲಹರಣ ಮಾಡಿದರು. ನ್ಯಾಯಾಲಯದ ನಿಯವನ್ನೇ ಧಿಕ್ಕರಿಸಿದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವದಾಗಿ ಇನಾಮದಾರ ಹೇಳಿದರು.
ಅದಕ್ಕೆ ಕ್ಯಾರೆ ಎನ್ನದ ತಹಸೀಲ್ದಾರ ಕೋರ್ಟ ನನ್ನನ್ನು ನ್ಯಾಯಾಂಗ ನಿಂದನೆ ಮೇಲೆ ಜೈಲಿಗೆ ಹಾಕುತ್ತಾ? ಎಂದು ಅಪಹಾಸ್ಯ ಮಾಡಿ ಇನಾಮದಾರ ಅವರ ಮನ ನೋಯಿಸಿದ್ದರು. ಇದರಿಂದ ರೊಚ್ಚಿಗೆದ್ದ ಇನಾಮದಾರ ಅವರು ಧಾರವಾಡದ ಹೈಕೋರ್ಟನಲ್ಲಿ ತಹಸೀಲ್ದಾರ ವಿರುದ್ಧವಾಗಿ ನವೆಂಬರ್ 9 ರಂದು ನ್ಯಾಯಾಂಗ ಪ್ರಕರಣವನ್ನು ದಾಖಲಿಸಿದರು. ನವೆಂಬರ್ 21 ರಂದು ವಿಚಾರಣೆ ನಡೆದು ತಹಸೀಲ್ದಾರ ಅವರಿಗೆ ಧಾರವಾಡ ಹೈಕೋರ್ಟ ಶೋಕಾಸ್ ನೊಟೀಸ ಜಾರಿಗೊಳಿಸಿತು. ಇನ್ನು ತನ್ನ ಆಟ ನಡೆಯುವದಿಲ್ಲ ಎಂದರಿತ ತಹಸೀಲ್ದಾರ ಅವರು ಇನಾಮದಾರ ಅವರನ್ನು ಕರೆಯಿಸಿ ಕಾಗದಪತ್ರಗಳನ್ನು ಸರಿಪಡಿಸುವದಾಗಿ ಹೇಳಿ ಲಕ್ಷಾಂತರ ರೂ ಲಂಚಕ್ಕೆ ಬೇಡಿಕೆ ಇಟ್ಟು ಅದರಲ್ಲಿ 2 ಲಕ್ಷ ನಗದು 20 ಲಕ್ಷ ರೂ. ಮೌಲ್ಯದ ಖಾಲಿ ಚೆಕ್ಕು ಹಾಗೂ ಖಾಲಿ ಬಾಂಡ್ ಪೇಪರ್ ನೀಡುವಂತೆ ಶರತ್ತು ಇಟ್ಟಿದ್ದಾರೆ. ಇದರಿಂದ ಕುಪಿತಗೊಂಡ ಇನಾಮದಾರ ಅವರು ನ್ಯಾಯಕ್ಕಾಗಿ ಲೋಕಾಯುಕ್ತರ ಮೊರೆ ಹೋಗಿದ್ದರ ಪರಿಣಾಮವಾಗಿ ತಹಸೀಲ್ದಾರ ಈಗ ಜೈಲು ಪಾಲಾಗಿದ್ದಾರೆ.
ಮರಳಿ ಹೋಗದ ಅಧಿಕಾರಿ
ಸೋಮಲಿಂಗಪ್ಪ ಹಾಲಗಿ ಮೂಲತಃ ಕಂದಾಯ ಇಲಾಖೆಯಲ್ಲಿ ಇದ್ದು ಪ್ರಮೋಷನ್ ಹೊಂದಿ ಅಥವಾ ಕೆಎಎಸ್ ಪಾಸ್ ಆಗಿ ತಹಸೀಲ್ದಾರ ಆದವರಲ್ಲ. ಇವರು ಬೆಂಗಳೂರಿನಲ್ಲಿ ಸಚಿವಾಲಯದಲ್ಲಿನ ಅಧಿಕಾರಿ ಇದ್ದವರು. ಸಚಿವಾಲಯದಲ್ಲಿ ಈ ರೀತಿಯಾಗಿ ಬೇರೆ ಬೇರೆ ಇಲಾಖೆಗಳಿಗೆ ಸೇರಿದಂತೆ ಒಟ್ಟು 44 ಇಂಥ ಅಧಿಕಾರಿಗಳನ್ನು ಸರಕಾರ ವಿವಿಧ ತಾಲುಕುಗಳಿಗೆ ತಹಸೀಲ್ದಾರ ಎಂದು ನೇಮಕ ಮಾಡಿತು. ಕೆಲ ತಿಂಗಳ ನಂತರ ಸಚಿವಾಲಯ ತಾನು ಮಾಡಿದ ಆಜ್ಞೆಯನ್ನು ರದ್ದುಗೊಳಿಸಿ ಇತರ ಯಾವುದೇ ಇಲಾಖೆ ಸೇವೆ ಅಥವಾ ಹುದ್ದೆಗೆ ಸೇರಿದ ಸರ್ಕಾರಿ ಅಧಿಕಾರಿಗಳನ್ನು ಗ್ರೇಡ್ 1 ಹಾಗೂ ಗ್ರೇಡ್ 2 ತಹಸೀಲ್ದಾರ ಎಂದು ನೇಮಕ ಮಾಡುವಂತಿಲ್ಲ. ಈಗಾಗಲೇ ಹೀಗೆ ಬಡ್ತಿ ಪಡೆದವರು ಮರಳಿ ತಮ್ಮ ಇಲಾಖೆಗಳಿಗೆ ಹಾಜರಾಗಬೇಕೆಂದು ಸರಕಾರ ಆದೇಶಿಸಿತು. ಸರಕಾರದ ಆದೇಶದಂತೆ 43 ಅಧಿಕಾರಿಗಳು ಮರಳಿ ತಮ್ಮ ಇಲಾಖೆಗಳಿಗೆ ಸೇರಿಕೊಂಡರು. ಆದರೆ ಸೋಮಲಿಂಗಪ್ಪ ಹಾಲಗಿ ಮಾತ್ರ ಸರಕಾರದ ಆದೇಶವನ್ನು ಧಿಕ್ಕರಿಸಿ ಕಿತ್ತೂರಲ್ಲಿಯೇ ತಹಸೀಲ್ದಾರ ಆಗಿ ಮುಂದುವರೆದರು ಇದು ಸಾರ್ವಜನಿಕರಲ್ಲಿ ಗುಸುಗುಸು ಚರ್ಚೆಗೆ ಕಾರಣವಾಯಿತು. ಸರಕಾರದ ಆದೇಶವನ್ನೇ ಧಿಕ್ಕರಿಸಿ ಮುಂದುವರೆದ ಈತನಿಗೆ ಅಂಥ ಪ್ರಭಾವಿ ಗಾಡ್ ಫಾದರ್ ಯಾರಿದ್ದಾರೆ. ಎಂದು ಸಾರ್ವಜನಿಕ ವಲಯದಲ್ಲಿ ಈಗಲೂ ಚರ್ಚೆಯ ವಿಷಯವಾಗಿದೆ. ಆನೆ ನಡೆದದ್ದೆ ದಾರಿ ಎಂದ ತಹಸೀಲ್ದಾರಗೆ ಇನಾಮದಾರ ಅವರು ಖೆಡ್ಡ ಹಾಕಿ ಕೆಡವಿ ಜೈಲಿಗಟ್ಟುವಲ್ಲಿ ಸಫಲರಾದರು.
ಹಗರಣಗಳ ಸರಮಾಲೆ
ತಹಸೀಲ್ದಾರ ಸೋಮಲಿಂಗಪ್ಪ ಹಾಲಗಿ ಅವರ ಮೇಲೆ ಹಗರಣಗಳ ಸರಮಾಲೆಯನ್ನೇ ರೈತ ಸಂಘಟನೆ ಬಿಚ್ಚಿಟ್ಟಿದೆ. ರಾಜಕಾರಣಿಗಳ ಪ್ರಭಾವದಿಂದ ದರ್ಭಾರ ಮಾಡುತ್ತ, ಕಚೇರಿಯ ಯಾವುದೇ ಕೆಲಸಕ್ಕೆ ಬಂದರೂ ರೈತರಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಅನೇಕ ಬಾರಿ ರೈತರು ಮನವಿ ಸಲ್ಲಿಸಿ ಎಚ್ಚರಿಸಿದ್ದು ಉಂಟು. ಈಗ ಮತ್ತೆ ಸುದ್ಧಿ ಗೋಷ್ಟಿ ನಡೆಸಿದ ರೈತರು ಇಂಥ ಭ್ರಷ್ಟ ಅಧಿಕಾರಿಯನ್ನು ಸೇವೆಯಿಂದಲೇ ವಜಾಗೊಳಿಸಿ ಜೈಲು ಶಿಕ್ಷೆಗೆ ಗುರಿಯಾಗಿಸಬೇಕೆಂದು ಒತ್ತಾಯಿಸಿದ್ದಾರೆ. ಪ್ರವಾಹದಲ್ಲಿ ಬಿದ್ದ ಮನೆಗಳಿಗೆ ಸರಕಾರದಿಂದ ಫಲಾನುಭವಿಗೆ ಬಂದ 5 ಲಕ್ಷ ಅನುದಾನ ಮಂಜೂರು ಮಾಡಲು 1 ಲಕ್ಷ ರೂ. ಲಂಚ ಪಡೆದಿದ್ದಾರೆ. ಶಾಸಕ ಮಹಾಂತೇಶ ದೊಡ್ಡಗೌಡರ ಬೆಂಬಲಿಗರಿಗೆ ಮಾತ್ರ ಮನೆಗಳನ್ನು ಮಂಜೂರು ಮಾಡಿದ್ದಾರೆ. ಕುಲವಳ್ಳಿ ಗ್ರಾಮದಲ್ಲಿ ಒಂದೇ ಮನೆಗೆ ಇಬ್ಬರ ಹೆಸರಿನಲ್ಲಿ ಅನುದಾನ ನೀಡಿದ್ದಾರೆ. ವೃದ್ಧಾಪ್ಯ ವೇತನ, ವಿಧವಾ ವೇತನಗಳಿಗೆ ಎಗ್ಗಿಲ್ಲದಂತೆ ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ರೈತ ಸಂಘಟನೆ ಆರೋಪಿಸಿದೆ.
ಧಮಕಿ ಬೆದರಿಗೆ ಕರೆಗಳು
ಅತ್ತ ತಹಸೀಲ್ದಾರ ಜೈಲು ಸೇರುತ್ತಿದ್ದಂತೆಯೇ ಇತ್ತ ಬಾಪುಸಾಹೇಬ್ ಇನಾಮದಾರ ಅವರ ಪುತ್ರ ರಾಜೇಂದ್ರ ಇನಾಮದಾರ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದು ಪ್ರಕರಣವನ್ನ ಹಿಂಪಡೆಯುವಂತೆ ಕೆಲ ಮರಿ ಪುಢಾರಿಗಳು ಒತ್ತಾಯಿಸುತ್ತಿದ್ದಾರೆ. ಆಕಸ್ಮಾತ್ ಸೋಮಲಿಂಗಪ್ಪ ಹಾಲಗಿ ಅವರನ್ನು ಜಾಮೀನಿನ ಮೇಲೆ ಬಿಟ್ಟರೆ ಸಾಕ್ಷಾಧಾರಗಳನ್ನು ನಾಶಪಡಿಸುವ ಹುನ್ನಾರ ನಡೆಸಬಹುದು ಅಥವಾ ಸ್ಥಳಿಯ ತಾಲೂಕಿನ ಹೂಲಿಕಟ್ಟಿ ಗ್ರಾಮ ನಿವಾಸಿಯಾಗಿರುವ ಸೊಮಲಿಂಗಪ್ಪ ಹಾಲಗಿ ಈತ ಇನಾಮದಾರ ಮೇಲೆ ಒತ್ತಡ ಹೇರುವ ಸಾಧ್ಯತೆ ಇರುವುದರಿಂದ ಈತನಿಗೆ ಸಧ್ಯದ ಮಟ್ಟಿಗೆ ನ್ಯಾಯಾಲಯ ಜಾಮೀನು ನೀಡಬಾರದು ಎಂಬುದೆ ಕಿತ್ತೂರು ನಾಡಿನ ಪ್ರಬುದ್ಧ ನಾಗರಿಕರ ಆಶಯವಾಗಿದೆ.
“ಇತ್ತೀಚೆಗೆ ಕಿತ್ತೂರ ತಾಪಂ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಶೇ.10 ಕಮಿಷನ್ ಪಡೆಯುತ್ತಿದ್ದಾರೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡ್ರ ಮುಂದೆ ನಾನು ದೂರಿದರೂ ಅಧಿಕಾರಗಳ ಮೇಲೆ ಯಾವುದೇ ಕ್ರಮಕೈಗೊಳ್ಳಲಿಲ್ಲ. ಇಂದು ಲೋಕಾಯುಕ್ತ ಬಲೆಗೆ ಬಿದ್ದ ತಹಸೀಲ್ದಾರ ಸೋಮಲಿಂಗಪ್ಪ ಹಾಲಗಿ ಮತ್ತು ಗುಮಾಸ್ತ ಜಿ. ಪ್ರಸನ್ನ ಅವರಂತಹ ಭ್ರಷ್ಟ ಅಧಿಕಾರಿಗಳನ್ನು ಬಳಸಿಕೊಂಡು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ ಕಮಿಷನ್ ದಂಧೆ ನಡೆಸಿದ್ದಾರೆ. ಕಾರಣ ಈ ಪ್ರಕರಣವನ್ನು ಸಿಬಿಐ ತನಿಖೆ ಒಪ್ಪಿಸಬೇಕು”. ರೈತ ಮುಖಂಡ ಬಿಷ್ಠಪ್ಪ ಶಿಂದೆ.