ಬಳ್ಳಾರಿ: ಶ್ರೀರಾಮುಲು ರಕ್ತ ಪವಿತ್ರ ರಕ್ತ, ಹಿಂದೆ ಅವರ ಬಗ್ಗೆ ಹಗುರವಾಗಿ ಮಾತಾಡಿದ್ರಿ. ರಾಮುಲು ಅನ್ನು ಪೆದ್ದ ಅಂದ್ರು, ರಾಮುಲು ಈ ಸಮುದಾಯದ ಹೃದಯ ಸಾಮ್ರಾಟ. ರಾಮುಲುಗೆ ಪೆದ್ದ ಅಂತೀಯಾ ಸಿದ್ದರಾಮಣ್ಣಾ? ನೀನ್ ಬಾಳ ಬುದ್ಧಿವಂತ ಅಲ್ವಾ?
ನೀನು ಮುಖ್ಯಮಂತ್ರಿಯಾಗಿದ್ದೆ, ಮುಂದೊಂದು ದಿನ ಅವಕಾಶ ಬಂದ್ರೆ ಶ್ರೀರಾಮುಲು ಕೂಡ ಮುಖ್ಯಮಂತ್ರಿ ಆಗ್ತಾನೆ. ಸಾಮಾಜಿಕ ನ್ಯಾಯ ಕೊಡೋದು ಬಿಜೆಪಿ ಮಾತ್ರ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಬಳ್ಳಾರಿಯಲ್ಲಿ ಭಾನುವಾರ ಎಸ್ಟಿ ನವ ಶಕ್ತಿ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಬಿಜೆಪಿಯನ್ನ ಮತ್ತೊಮ್ಮೆ ಅಧಿಕಾರಕ್ಕೆ ತರಲು ಒಂದು ದೊಡ್ಡ ಸಮಾವೇಶ ಮಾಡಿ ಮುನ್ನುಡಿ ಬರೆದಿದ್ದೀರಿ. ಇದು ಪರಿವರ್ತಾನಾ ಸಮಾವೇಶ, ಬದಲಾವಣೆಯ ಸಮಾವೇಶ. ಎಸ್ಸಿ-ಎಸ್ಟಿ ಜನರ ಬದುಕು ಬದಲಾಗಬೇಕು, ಬಡವರ ಬದುಕು ಬದಲಾಗಬೇಕು ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಕೆಲಸ ಮಾಡ್ತಿದ್ದೇವೆ. ಕರ್ನಾಟಕದಲ್ಲಿ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ವಿಸಲು ನನಗೆ ವಾಲ್ಮೀಕಿ, ಬುದ್ಧ, ಬಸವಣ್ಣ ಸ್ಫೂರ್ತಿ. ಕೇಂದ್ರದಲ್ಲಿ 3% ಇದ್ದ ಮೀಸಲಾತಿಯನ್ನ 7% ಮಾಡಿದ್ದು ಮೋದಿ ಅವರು. ಕಾಂಗ್ರೆಸ್ನವರು 60 ವರ್ಷದಲ್ಲಿ ಏನು ಮಾಡಿದ್ರು? ಸಿದ್ದರಾಮಯ್ಯನವರೇ ಇಲ್ಲಿ ಬಂದು ನೋಡಪ್ಪಾ.ಎಸ್ಸಿ-ಎಸ್ಟಿ ನಮ್ ಜೊತೆ ಇದ್ದಾರೆ. ಇಲ್ಲಿದೆ ಬಾ ಅಹಿಂದಾ, ನಮ್ಮ ಜೊತೆ ಇದೆ ನೋಡು. ನಿಮ್ಮ ನಾಟಕ ಇನ್ಮುಂದೆ ನಡೆಯಲ್ಲ ಎಂದರು. ಸಣ್ಣ ಮೈದಾನದಲ್ಲಿ ಭಾರತ್ ಜೋಡೋ ಸಭೆ ಮಾಡಿ ಬೃಹತ್ ಸುನಾಮಿ ಅಂದ್ರು. ಈಗ ಬಂದು ನೋಡಿ ಸುನಾಮಿ ಬಂದಿದೆ ಎಂದು ಕಾಂಗ್ರೆಸ್ ಅನ್ನು ಮಾತಿನಲ್ಲೇ ಸಿಎಂ ಕೆಣಕಿದರು.
ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ಸೋನಿಯಾ ಗಾಂಧಿ ಅವರು ಮೂರು ಸಾವಿರ ಕೋಟಿ ಕೊಡ್ತೀವಿ ಎಂದಿದ್ದರು. ಆದ್ರೆ ಮೂರೇ ಮೂರು ರೂಪಾಯಿನೂ ಕೊಡಲಿಲ್ಲ, ಕೊನೆಗೆ ಬಳ್ಳಾರಿ ಜನರಿಗೆ ಕೃತಜ್ಞತೆಯನ್ನೂ ಹೇಳದೇ ಮೋಸ ಮಾಡಿದ್ದಾರೆ. ಈ ಬಾರಿ ಬಳ್ಳಾರಿ-ವಿಜಯನಗರದಲ್ಲಿ ಹತ್ತಕ್ಕೆ ಹತ್ತು ಕ್ಷೇತ್ರದಲ್ಲೂ ಬಿಜೆಪಿಯನ್ನೇ ಗೆಲ್ಲಿಸಬೇಕು. ಮೀಸಲಾತಿ ಅಷ್ಟೇ ಅಲ್ಲ, 28 ಸಾವಿರದ 234 ಕೋಟಿ ರೂ. ಅನುದಾನ ಕೊಟ್ಟು ಸಮುದಾಯದ ಅಭಿವೃದ್ಧಿ ಮಾಡ್ತಿದ್ದೇವೆ. ಸಮಾಜ ಕಲ್ಯಾಣ ಇಲಾಖೆಗೆ 6 ಸಾವಿರ ಕೋಟಿ ರೂ. ಸಮಿಶ್ರ ಸರ್ಕಾರ ಇದ್ದಾಗ ಎಸ್ಸಿ-ಎಸ್ಟಿಗೆ ಮೀಸಲಾತಿ ಹೆಚ್ಚಿಸಲಿಲ್ಲ ಎಂದು ಆರೋಪಿಸಿದರು.
ಎಸ್ಸಿ-ಎಸ್ಟಿ ಜನರಿಗೆ 101 ಅಂಬೇಡ್ಕರ್ ಹಾಸ್ಟೆಲ್, 50 ಕನಕದಾಸ ಹಾಸ್ಟೇಲ್ ಮಾಡ್ತಿದ್ದೇವೆ. 5 ಲಕ್ಷ ಯುವಕರಿಗೆ ಉದ್ಯೋಗ, 5 ಲಕ್ಷ ಸ್ತ್ರೀಯರಿಗೆ ಉದ್ಯೋಗ ಕೊಡ್ತೇವೆ. ನಾವು ಸಮಾಜದಲ್ಲಿ ಪರಿವರ್ತನೆಯ ಸಂಕಲ್ಪ ಮಾಡಿದ್ದು, ಮೋಸ ಮಾಡಿರುವ ಕಾಂಗ್ರೆಸ್ ಅನ್ನು ಬೇರು ಸಹಿತ ತೆಗೆದು ಹಾಕುವ ನಿಟ್ಟಿನಲ್ಲಿ ಹೋರಾಡುತ್ತಿದ್ದೇವೆ. ಬಂಧುಗಳೇ ನೀವೆಲ್ಲಾ ನಮ್ಮ ಜೊತೆ ಇರಿ. ಇದು ಸಂಕಲ್ಪಗಳ ಸಮಾವೇಶ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕೃಪೆ:ವಿವಾ