ನವದೆಹಲಿ, ಅ.19: ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ತೆರೆಬಿದ್ದಿದೆ. ನಿರೀಕ್ಷೆಯಂತೆ ಹಿರಿಯ ನಾಯಕ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು 7,897 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅದ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪ್ರತಿಸ್ಪರ್ಧಿ ಶಶಿ ತರೂರ್ ಅವರು ಕೇವಲ 1,072 ಮತಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.ಇನ್ನು 400ಕ್ಕೂ ಹೆಚ್ಚು ಮತಗಳು ತಿರಸ್ಕೃತಗೊಂಡಿವೆ. ಒಟ್ಟು 9.385 ಮತ ಚಲಾವಣೆಯಾಗಿತ್ತು.
ಈ ಮೂಲಕ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಕೂರಲಿದ್ದು, 24 ವರ್ಷಗಳ ನಂತರ ಗಾಂಧಿಯೇತರರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಮಲ್ಲಿಕಾರ್ಜುನ ಖರ್ಗೆಯವರಿಗೆ ಪರಾಜಿತ ಅಭ್ಯರ್ಥಿ ಶಶಿ ತರೂರ್ ಅಭಿನಂದನೆ ಸಲ್ಲಿಸಿದ್ದಾರೆ. ಪಕ್ಷದ ಪುನರುಜ್ಜೀವನ ಆರಂಭವಾಗಿದೆ ಎಂದು ನಾನು ನಂಬುತ್ತೇನೆ ಎಂದು ಹೇಳಿಕೆಯಲ್ಲಿ ಶಶಿ ತರೂರ್ ಹೇಳಿದ್ದಾರೆ. ಮೊನ್ನೆ ಮತದಾನದ ದಿನವೂ ಶಶಿ ತರೂರ್ ಈ ಮಾತುಗಳನ್ನು ಹೇಳಿದ್ದರು.
2017 ಮತ್ತು 2019 ರ ನಡುವಿನ ಎರಡು ವರ್ಷಗಳನ್ನು ಹೊರತುಪಡಿಸಿ ರಾಹುಲ್ ಗಾಂಧಿಯವರು ಅಧಿಕಾರ ವಹಿಸಿಕೊಂಡ ನಂತರ 1998 ರಿಂದ ಚುಕ್ಕಾಣಿ ಹಿಡಿದಿರುವ ಸೋನಿಯಾ ಗಾಂಧಿಯವರ ಸ್ಥಾನವನ್ನು ಖರ್ಗೆ ಅವರು ಬದಲಾಯಿಸಲಿದ್ದಾರೆ
ಎಐಸಿಸಿ ಅಧ್ಯಕ್ಷರಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋನಿಯಾಗಾಂಧಿ ಮತ್ತು ಪ್ರಿಯಾಂಕ ಗಾಂಧಿ ದೆಹಲಿಯಲ್ಲಿಂದು ಅಭಿನಂದಿಸಿದರು.
AICC ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆ ಕ್ರಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದ್ದಾರೆ.
Congratulations to Mallikarjun Kharge ji on being elected as the President of @INCIndia.
The Congress President represents a democratic vision of India.
His vast experience and ideological commitment will serve the party well as he takes on this historic responsibility.
— Rahul Gandhi (@RahulGandhi) October 19, 2022
ಟ್ವೀಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾರ್ದಿಕ ಅಭಿನಂದನೆಗಳು. ಪ್ರತಿಭೆ ಮತ್ತು ಅನುಭವವನ್ನು ಮೈಗೂಡಿಸಿಕೊಂಡ ಖರ್ಗೆಯವರಿಗೆ ಕಾಂಗ್ರೆಸ್ ಪಕ್ಷವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ಶಕ್ತಿ ಇದೆ. ಖರ್ಗೆಯವರ ಆಯ್ಕೆ ಕನ್ನಡಿಗರಿಗೂ ಹೆಮ್ಮೆಯ ಸಂಗತಿ’ ಎಂದು ತಿಳಿಸಿದ್ದಾರೆ.