ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಲಿದೆ. ಅದರೊಂದಿಗೆ 137 ವರ್ಷದ ಇತಿಹಾಸವಿರುವ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷಕ್ಕೆ 24 ವರ್ಷಗಳ ನಂತರ ಗಾಂಧಿಯೇತರ ಅಧ್ಯಕ್ಷರೊಬ್ಬರು ಲಭಿಸಲಿದ್ದಾರೆ.
ಅವರು ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯೋ ಅಥವಾ ಕೇರಳದ ಶಶಿ ತರೂರ್ ಅವರೋ ಎಂಬುದು ಮತ ಎಣಿಕೆಯ ನಂತರ ತಿಳಿಯಲಿದೆ.
ದೇಶಾದ್ಯಂತ ಸ್ಥಾಪಿಸಲಾಗಿದ್ದ 68 ಮತಗಟ್ಟೆಗಳಿಂದ ಮತ ಪೆಟ್ಟಿಗೆಗಳನ್ನು ದೆಹಲಿಗೆ ತರುವ ಕಾರ್ಯ ಮಂಗಳವಾರ ಸಂಜೆಗೆ ಪೂರ್ಣಗೊಂಡಿದೆ. ಇಂದು(ಬುಧವಾರ) ಬೆಳಿಗ್ಗೆ 10 ಗಂಟೆಯಿಂದ ಎಐಸಿಸಿ ಮುಖ್ಯ ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದೆ.
ಗಾಂಧಿ ಕುಟುಂಬಕ್ಕೆ ಹತ್ತಿರುವಿರುವ ಹಾಗೂ ಪಕ್ಷದಲ್ಲಿ ಹೆಚ್ಚು ಬೆಂಬಲ ಹೊಂದಿರುವ ಖರ್ಗೆ ಅವರೇ ಜಯ ಗಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿ ಚುನಾವಣೆ ನಡೆದಿದೆ. ಹಾಗೆಯೇ 22 ವರ್ಷಗಳ ಬಳಿಕ ನೆಹರೂ-ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ಸಿಗಲಿದೆ.
ನವದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ 96ರಷ್ಟು ಮತದಾನವಾಗಿತ್ತು. 9,915 ಪ್ರತಿನಿಧಿಗಳ ಪೈಕಿ 9,500 ಪ್ರತಿನಿಧಿಗಳು ತಮ್ಮ ಹಕ್ಕು ಚಲಾಯಿಸಿದ್ದರು.