ಸಾಲದ ಸುಳಿಗೆ ಸಿಲುಕಿ, ಒಂದೂವರೆ ವರ್ಷಕ್ಕೆ ಬಾರದ ಲೋಕಕ್ಕೆ ಪಯಣ ಬೆಳಸಿದ ನವ ಪ್ರೇಮಿಗಳು.

ಉಮೇಶ ಗೌರಿ (ಯರಡಾಲ)

ರಾಮನಗರ: ಅವರಿಬ್ಬರು ಅಕ್ಕಪಕ್ಕದ ಗ್ರಾಮದವರು. ಇನ್ನು ಚಿಕ್ಕವಯಸ್ಸು. ಇಬ್ಬರು ಪರಸ್ಪರ ಪ್ರೀತಿಸಿ, ಪೋಷಕರ ವಿರೋಧದ ನಡುವೆಯೇ ಒಂದೂವರೆ ವರ್ಷ ಹಿಂದೆ ಅಷ್ಟೇ ವಿವಾಹವಾಗಿದ್ದರು. ಆದರೆ ಸಂಸಾರದ ಬಂಡಿಯಲ್ಲಿ ಕೆಲವಷ್ಟು ಸಮಸ್ಯೆಗಳು ಎದುರಾಗಿದ್ದವು. ಸಾಲದ ಸುಳಿಯಲ್ಲಿ ಸಿಲುಕಿದ ಗಂಡ ನೇಣಿಗೆ ಶರಣಾಗಿದ್ದ. ಇದರಿಂದ ಮನನೊಂದ ಹೆಂಡತಿ ಕೂಡ ಬಾರದ ಲೋಕಕ್ಕೆ ತೆರಳಿದ್ದಾಳೆ.

ಹೌದು… ಸಾಲಭಾದೆ ತಾಳಲಾರದೇ ಗಂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೇ,ಗಂಡನ ಸಾವಿನಿಂದ ಮನನೊಂದು ಹೆಂಡತಿ ಕೂಡ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ರಾಮನಗರ ತಾಲೂಕಿನ ತಿಮ್ಮಸಂದ್ರ ಹಾಗೂ ಅರಳಿಮರದದೊಡ್ಡಿ ಗ್ರಾಮದಲ್ಲಿ ನಡೆದಿದೆ.

ರಾಮನಗರ ತಾಲೂಕಿನ ತಿಮ್ಮಸಂದ್ರ ಗ್ರಾಮದ ಶಿವರಾಜು(27) ವೃತ್ತಿಯಲ್ಲಿ ಆಟೋ ಚಾಲಕ. ಪಕ್ಕದ ಗ್ರಾಮ ಅರಳೀಮರದದೊಡ್ಡಿ ಗ್ರಾಮದ ನವ್ಯ(20)ಳನ್ನ ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ. ಇಬ್ಬರ ಪ್ರೀತಿಗೆ ಕುಟುಂಬಸ್ಥರ ವಿರೋಧವಿತ್ತು. ಆದರೂ ಒಂದೂವರೆ ವರ್ಷದ ಹಿಂದೆ ಇಬ್ಬರು ಮದುವೆಯಾಗಿದ್ದರು. ಆನಂತರ ತಿಮ್ಮಸಂದ್ರ ಗ್ರಾಮದಲ್ಲಿ ಇಬ್ಬರು ವಾಸವಾಗಿದ್ದರು.

ಶಿವರಾಜು ಆಟೋ ಓಡಿಸಿಕೊಂಡು ಇದ್ದರೇ, ನವ್ಯ ರಾಮನಗರದ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಸಂಸಾರದ ಬಂಡಿ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ನಿನ್ನೆ(ಅ.15) ತಾಯಿ ಕೆಲಸಕ್ಕೆ ಹೋದ ನಂತರ ಹೆಂಡತಿ ನವ್ಯಳನ್ನು ರಾಮನಗರಕ್ಕೆ ಬಿಟ್ಟು ಬಂದು ಮನೆಯಲ್ಲಿಯೇ ಶಿವರಾಜು ನೇಣಿಗೆ ಶರಣಾಗಿದ್ದಾನೆ.

ನಂತರ ಗಂಡನ ಅಂತ್ಯಕ್ರಿಯೆ ಮುಗಿದ ಬಳಿಕ ನವ್ಯಳ ಪೋಷಕರು, ನವ್ಯಳನ್ನ ಅರಳೀಮರದದೊಡ್ಡಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ನವ್ಯ ಕೂಡ ಇಂದು(ಅ.16) ಬೆಳೆಗ್ಗೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ.

ಅಂದಹಾಗೆ ಆತ್ಮಹತ್ಯೆ ಮಾಡಿಕೊಂಡ ಶಿವರಾಜ್, ಸಾಕಷ್ಟು ಸಾಲ ಮಾಡಿದ್ದನಂತೆ. ಅಲ್ಲದೆ ಬಡ್ಡಿಗೆ ಹಣತಂದು ಆಟೋ ತೆಗೆದುಕೊಂಡಿದ್ದನಂತೆ.  ಆದ್ರೆ, ಸಾಲ ತೀರಿಸಿರಲಿಲ್ಲವಂತೆ. ಹೀಗಾಗಿ ಮೂರು ದಿನಗಳ ಹಿಂದೆ ಆಟೋವನ್ನ ಸಾಲಗಾರರು ತೆಗೆದುಕೊಂಡು ಹೋಗಿದ್ದರಂತೆ.ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಇನ್ನು ಗಂಡನೇ ಹೋದ ಮೇಲೇ ನಾನೇಕೆ ಇರಬೇಕು. ಅದೂ ಕೂಡ ಪ್ರೀತಿಸಿ ಮದುವೆಯಾದ ಹುಡುಗನೇ ಇಲ್ಲದ ಮೇಲೆ ನಾನು ಬದುಕಿರಬಾರದು ಎಂದು ನವ್ಯ ಕೂಡ ತವರು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಒಟ್ಟಾರೆ ಎಷ್ಟೇ ಕಷ್ಟಗಳು ಬಂದರೂ ಸಮಾಜದ ಮುಂದೆ ಬದುಕಿ ತೋರಿಸಬೇಕಾದ ಯುವ ಜೋಡಿಗಳು, ಸಾಲದ ಸುಳಿಗೆ ಸಿಲುಕಿ, ತಪ್ಪು ನಿರ್ಧಾರವನ್ನ ತೆಗೆದುಕೊಂಡು ಬಾರದ ಲೋಕಕ್ಕೆ ಹೋಗಿದ್ದಾರೆ.

 

 

 

 

 

ಕೃಪೆ;ಟಿವಿ9
Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";