ಬೆಳಗಾವಿ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ 19 ವರ್ಷದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಗಳ ಮೇಲೆ ಅತ್ಯಾಚಾರ ಮಾಡಿ, ಬಳಿಕ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ತಬಸ್ಸುಮ್ ಸವದತ್ತಿ(19) ಎಂಬ ಯುವತಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಯುವತಿ. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ತಬಸ್ಸುಮ್ ಕೆಲಸ ಮಾಡುತ್ತಿದ್ದಳು. ಮೃತ ತಬಸ್ಸುಮ್ ತಂದೆ ಇರ್ಷಾದ್‌ಅಹ್ಮದ್ ಸವದತ್ತಿ ಆಟೋ ಚಾಲಕರಾಗಿದ್ದಾರೆ. ತಬಸ್ಸುಮ್‍ಳನ್ನು ಅಪರಿಚಿತ ಯುವಕ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ. ಕೇಸ್ ದಾಖಲಾಗುತ್ತೆ ಎಂದು ತಿಳಿಯುತ್ತಿದ್ದಂತೆ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ತಬಸ್ಸುಮ್ ಮೊಬೈಲ್ ಸಿಮ್‍ನೊಂದಿಗೆ ಅಪರಿಚಿತ ಯುವಕ ತೆರಳಿದ್ದ. ಆಸ್ಪತ್ರೆಗೆ ಕುಟುಂಬಸ್ಥರು ಆಗಮಿಸಿದ ವೇಳೆ ನಿತ್ರಾಣ ಸ್ಥಿತಿಯಲ್ಲಿದ್ದ ತಬಸ್ಸುಮ್ ತಲೆಯ ಹಿಂಬದಿಗೆ ಗಾಯದ ಗುರುತು ಪತ್ತೆಯಾಗಿತ್ತು. ಬಳಿಕ ತಬಸ್ಸುಮ್‍ಳನ್ನು ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ತಬಸ್ಸುಮ್ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನು ನಿನ್ನೆ ರಾತ್ರಿ ತಬಸ್ಸುಮ್ ಮೊಬೈಲ್‍ನಿಂದ ಅವರ ತಾಯಿ ನಂಬರ್ ಗೆ ವಾಟ್ಸಪ್ ಮೆಸೇಜ್ ಹಾಕಿರುವ ಯುವಕ. ಬಸ್‍ನಿಂದ ಇಳಿಯಬೇಕಾದ್ರೆ ತಬಸ್ಸುಮ್ ಮೊಬೈಲ್ ಒಡೆದು ಹೋಗಿತ್ತು. ಸಿಮ್ ನನ್ನ ಮೊಬೈಲ್‍ನಲ್ಲಿ ಹಾಕಿ ಮೆಸೇಜ್ ಮಾಡ್ತಿದೀನಿ ಅವಳ ಮೊಬೈಲ್ ಚಿಕ್ಕ ಬ್ಯಾಗ್‍ನಲ್ಲಿ ಇದೆ. ಅವಳ ಸಿಮ್ ಮುರಿದು ಹಾಕ್ತಿದೀನಿ, ಬೇರೆ ಸಿಮ್ ತಗೆದುಕೊಳ್ಳಿ, ನನಗೆ ತೊಂದರೆ ಕೊಡಬೇಡಿ ಎಂದು ವಾಟ್ಸಪ್ ಮೆಸೇಜ್ ಹಾಕಿದ್ದಾನೆ. ಅಕ್ಟೋಬರ್ 11ರಂದು ತಾಯಿ ಶಾಬೀರಾ ಬಾನುಗೆ ಫೋನ್ ಮಾಡಿದ್ದ ತಬಸ್ಸುಮ್ ತಾನು ಬೆಂಗಳೂರಿಂದ ಬೆಳಗಾವಿಗೆ ಬರೋದಾಗಿ ಹೇಳಿದ್ದಳು. ಈ ವೇಳೆ ತನ್ನ ಸೆಲ್ಫಿ ಫೋಟೋ ಕಳಿಸಿದ್ದ ತಬಸ್ಸುಮ್ ಮುಖಕ್ಕೆ ಗಾಯವಾಗಿ ಊದಿಕೊಂಡಿತ್ತು. ಈಗ ಬೆಳಗಾವಿಗೆ ಬರುತ್ತಿದ್ದಂತೆ ಈ ರೀತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ನೋಡಿ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಕುಟುಂಬಸ್ಥರು ತನಿಖೆ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಯುವತಿಯ ತಲೆಯ ಹಿಂಬದಿಗೆ ಗಾಯದ ಗುರುತು ಪತ್ತೆಯಾಗಿದೆ. ಅಲ್ಲದೇ ಮೈಮೇಲೆ ಸಿಗರೇಟ್‌ನಿಂದ ಸುಟ್ಟಿರುವ ಗಾಯದ ಗುರುತುಗಳಿದ್ದು, ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರ ಆರೋಪಿಸಿದ್ದಾರೆ. ಸಿಬಿಐ ತನಿಖೆ ನಡೆಸಬೇಕು, ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.ಈ ಬಗ್ಗೆ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.