ರಾಮನಗರ: ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬುವುದು ಈ ಸ್ಟೊರಿಯಲ್ಲಿ ಅಕ್ಷರಶಃ ಸತ್ಯವಾಗಿದೆ. ಗಂಡ ಹೆಂಡಿರ ಜಗಳದಲ್ಲಿ ಮುದ್ದಾಗ ಮಗ ಅನಾಥನಾಗಿದ್ದಾನೆ.
ಹೌದು ಅವರದ್ದು ಸುಂದರ ಸಂಸಾರವಾಗಿತ್ತು. ಮದುವೆಯಾಗಿ ಹನ್ನೊಂದು ವರ್ಷ. ಒಬ್ಬ ಮುದ್ದಾದ ಮಗ ಸಹ ಇದ್ದ. ಆದರೆ ಸಾಕಷ್ಟು ಸಿರಿವಂತನಾಗಿದ್ದರು ಕೀಚಕ ಗಂಡನಿಗೆ ಹೆಂಡತಿ ಮೇಲೆ ಅನುಮಾನ, ಹಣದ ಮೇಲೆ ವ್ಯಾಮೋಹ. ಹೀಗಾಗಿ ಪದೇ ಪದೇ ವರದಕ್ಷಿಣೆಗಾಗಿ ಹೆಂಡತಿಗೆ ಪೀಡಿಸುತ್ತಿದ್ದ. ಇದಕ್ಕೆ ತಾಯಿ ಕೂಡ ಮಗನಿಗೆ ಸಾಥ್ ನೀಡುತ್ತಿದ್ದಳು. ಇದರಿಂದ ರೋಸಿ ಹೋದ ಆ ಗೃಹಣಿ, ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಣಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಮೆ ಮಾಡಿಕೊಂಡಿರೋ ಘಟನೆ ರಾಮನಗರದ ಕೆಂಪೇಗೌಡ ಸರ್ಕಲ್ ಬಳಿ ನಡೆದಿದೆ.
ಶಶಿಕಲಾ(33) ಆತ್ಮಹತ್ಯೆ ಮಾಡಿಕೊಂಡ ಗೃಹಣಿ. ಬೆಂಗಳೂರು ದಕ್ಷಿಣ ತಾಲೂಕಿನ ಸೋಮನಹಳ್ಳಿ ಗ್ರಾಮದ ನಿವಾಸಿ ಶಶಿಕಲಾಳನ್ನು ಹನ್ನೊಂದು ವರ್ಷದ ಹಿಂದೆ ರಾಮನಗರದ ಸಂತೋಷ್ ಎಂಬಾತನ ಜೊತೆಗೆ ವಿವಾಹ ಮಾಡಿ ಕೊಡಲಾಗಿತ್ತು. ಇಬ್ಬರಿಗೂ ಐದೂವರೆ ವರ್ಷದ ಗಂಡು ಮಗ ಇದ್ದಾನೆ.
ಪ್ರಾರಂಭದಲ್ಲಿ ಇಬ್ಬರ ಸಂಸಾರ ಸಾಕಷ್ಟು ಚೆನ್ನಾಗಿತ್ತು. ಅತ್ತೆ ರೇಣುಕಾ, ಮಾವ ನರಸಿಂಹಯ್ಯ ಸಹ ಜೊತೆಗೆ ಇದ್ದರು. ಆದರೆ ದಿನಗಳು ಕಳದಂತೆ, ಸಂತೋಷನಿಗೆ ಹಣದ ಮೇಲೆ ವ್ಯಾಮೋಹ ಹೆಚ್ಚಾಗಿತ್ತು. ಹೀಗಾಗಿ ಪದೇ ಪದೇ ವರದಕ್ಷಿಣೆ ತರುವಂತೆ ಶಶಿಕಲಾಳಿಗೆ ಪೀಡಿಸುತ್ತಿದ್ದನಂತೆ. ಅಷ್ಟೇ ಅಲ್ಲದೆ ಶಶಿಕಲಾ ತವರು ಮನೆಯ ಆಸ್ತಿಯಲ್ಲೂ ಭಾಗ ಕೇಳುತ್ತಿದ್ದನಂತೆ. ಕಳೆದ ಒಂದು ವರ್ಷದಿಂದ ಇದೇ ರೀತಿ ಕಿರುಕುಳ ಕೊಡಲು ಶುರು ಮಾಡಿದ್ದ. ಈ ಸಂಬಂಧ ಸಾಕಷ್ಟು ಬಾರಿ ರಾಜೀ ಸಂಧಾನ ಸಹ ಆಗಿತ್ತು. ಅಲ್ಲದೆ ನಿನ್ನೆ ಸಂತೋಷ್ ಮನೆ ದೇವರ ಪೂಜೆ ಮಾಡಿದ್ದು, ಈ ವೇಳೆ ಶಶಿಕಲಾ ಕುಟುಂಬಸ್ಥರಿಗೆ ಕರೆದಿಲ್ಲ. ಹೀಗಾಗಿ ಶಶಿಕಲಾ ಕೂಡ ಪೂಜೆಗೆ ಹೋಗದೇ ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ.
ಅಂದಹಾಗೆ ಸಂತೋಷ್ ಸಾಕಷ್ಟು, ಸಿರಿವಂತನಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ದುಡ್ಡಿಗಾಗಿ ಸಾಕಷ್ಟು ಪೀಡಿಸುತ್ತಿದ್ದನಂತೆ. ಅಲ್ಲದೆ ಶಶಿಕಲಾ ಕುಟುಂಬಸ್ಥರು, ಸಂಬಂಧಿಕರು ಯಾರು ಕೂಡ ಮನೆಗೆ ಬರುವಂತೆ ಇರಲಿಲ್ಲವಂತೆ. ಶಶಿಕಲಾಳನ್ನ ಮನೆಯಿಂದ ಹೊರಗೆ ಕಳುಹಿಸದೇ ಮೊಬೈಲ್ ಸಹ ಯೂಸ್ ಮಾಡಲು ಬಿಡದೇ ಕಿರುಕುಳ ನೀಡುತ್ತಿದ್ದನಂತೆ. ಇದೇ ವಿಚಾರವನ್ನ ಸಾಕಷ್ಟು ಬಾರಿ ಕುಟುಂಬಸ್ಥರ ಬಳಿ ಶಶಿಕಲಾ ಹೇಳಿಕೊಂಡಿದ್ದಾಳೆ. ಹಲವು ಬಾರಿ ರಾಜೀ ಸಂಧಾನ ಸಹ ನಡೆದಿದೆ. ಸಾಕಷ್ಟು ಹಣವನ್ನ ಸಹಾ ಸಂತೋಷ್‌ಗೆ ಶಶಿಕಲಾ ಕುಟುಂಬಸ್ಥರು ಕೊಟ್ಟಿದ್ದರಂತೆ. ಆದರು ಪದೇ ಪದೇ ಪೀಡಿಸುತ್ತಿದ್ದನಂತೆ. ಹೀಗಾಗಿ ಹಿಂಸೆ ತಾಳಲಾರದೇ ಮನೆಯಲ್ಲಿಯೇ ನಿನ್ನೆ ನೇಣಿಗೆ ಶರಣಾಗಿದ್ದಾಳೆ.
ಇನ್ನು ಶಶಿಕಲಾ ಆತ್ಮಹತ್ಯೆ ಸಂಬಂಧ ಪತಿ ಸಂತೋಷ್, ಅತ್ತೆ ರೇಣುಕಾ, ಮಾವ ನರಸಿಂಹಯ್ಯ, ನಾದಿನಿ ಶಿಲ್ಪಾ ವಿರುದ್ದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಸಂತೋಷ್ ಮತ್ತು ಅತ್ತೆ ರೇಣುಕಾರನ್ನ ಪೊಲೀಸರು ಬಂಧಿಸಿದ್ದಾರೆ.ಆದರೆ ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಇಬ್ಬರ ಗಲಾಟೆಯಲ್ಲಿ ಮುದ್ದಾಗ ಮಗ ಅನಾಥನಾಗಿದ್ದಾನೆ.
(ಕೃಪೆ:ಟಿವಿಸುವರ್ಣಾ)