ಬೆಂಗಳೂರು: ಆರೋಪಿಗಳಿಂದ ಜಪ್ತಿ ಮಾಡಿದ್ದ 50 ಲಕ್ಷ ರೂ. ಪೈಕಿ 10 ಲಕ್ಷ ರೂ. ಎಗರಸಿದ್ದ ಪೊಲೀಸ್ ಮುಖ್ಯಪೇದೆಯೊಬ್ಬರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಹೇಂದ್ರಗೌಡ (45) ಬಂಧಿತ. ರಾಮನಗರ ಜಿಲ್ಲೆ ರಾಮಾಪುರ ಗ್ರಾಮದ ಲಿಂಗೇಶ್ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಹೇಂದ್ರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಕಮಿಷನ್ ಆಸೆಗೆ ನೋಟು ಬದಲಾವಣೆಗೆ ಬಂದಿದ್ದವರ ಬಳಿ ಜಪ್ತಿ ಮಾಡಿದ 50 ಲಕ್ಷ ರೂ. ಪೈಕಿ 10 ಲಕ್ಷ ರೂ. ಎತ್ತಿಕೊಂಡಿರುವುದು ತನಿಖೆಯಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರು ಮಹೇಂದ್ರರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
50 ಲಕ್ಷ ರೂ. ನೋಟು ಬದಲಾವಣೆ: ರಾಮನಗರದ ಲಿಂಗೇಶ್ ಎಂಬುವರು ವ್ಯವಸಾಯದ ಜತೆಗೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದಾರೆ. ಇವರ ಸ್ನೇಹಿತ ಪ್ರದೀಪ್ ಇತ್ತೀಚೆಗೆ ಕರೆ ಮಾಡಿ, ‘ನನ್ನ ಸೇಹಿತರೊಬ್ಬರ ಬಳಿ 2 ಸಾವಿರ ರೂ. ಮುಖಬೆಲೆಯ ಕೋಟ್ಯಂತರ ರೂಪಾಯಿ ಇದೆ. ಮುಂದಿನ ದಿನಗಳಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಸಾಧ್ಯತೆ ಇರುವುದರಿಂದ 500 ರೂ. ಮುಖಬೆಲೆಯ ನೋಟುಗಳಿಗೆ ಬದಲಾಯಿಸಲು ತೀರ್ಮಾನಿಸಿದ್ದಾರೆ. 500 ರೂ. ಮುಖ ಬೆಲೆಯ ನೋಟು ನೀಡಿದರೆ, ಶೇ.10 ಕಮಿಷನ್ ನೀಡಲಿದ್ದಾರೆ’ ಎಂದು ಹೇಳಿದ್ದರು. ಇದಕ್ಕೆ ಒಪ್ಪಿದ ಲಿಂಗೇಶ್, 500 ಮುಖಬೆಲೆಯ 50 ಲಕ್ಷ ರೂ. ಹೊಂದಿಸಿದ್ದರು. ಅ.2ರಂದು ಲಿಂಗೇಶ್ ಮತ್ತು ಪ್ರದೀಪ್ ಕಾರಿನಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಸಿಂಗಸಂದ್ರಕ್ಕೆ ಹೋಗಿದ್ದರು. ಅಲ್ಲಿ ವೆಟ್ರಿವೇಲು ಎಂಬಾತನನ್ನು ಭೇಟಿಯಾಗಿದ್ದರು. ಬಳಿಕ ಮೂವರು ಚಂದ್ರಾ ಲೇಔಟ್ಗೆ ಬಂದಿದ್ದರು. ಈ ವೇಳೆ ವೆಟ್ರಿವೇಲು ಸ್ನೇಹಿತ ಶ್ಯಾಮ್ ಸಂತೋಷ್ ಎಂಬುವರು ಅಲ್ಲಿಗೆ ಬಂದಿದ್ದು, ನಾಲ್ವರು ಮಾತನಾಡುತ್ತಾ ನಿಂತಿದ್ದರು.
ಠಾಣೆ ಹೋಗುವ ಮಾರ್ಗಮಧ್ಯೆ ಕರಾಮತ್ತು: ಪೊಲೀಸ್ ಮುಖ್ಯಪೇದೆ ಮಹೇಂದ್ರಗೌಡ ಈ ವೇಳೆ ಹೊಯ್ಸಳ ವಾಹನದಲ್ಲಿ ಆ ಕಡೆಗೆ ಗಸ್ತು ಬಂದಿದ್ದು, ನಾಲ್ವರನ್ನು ಗಮನಿಸಿದ್ದರು. ಪೊಲೀಸ್ ವಾಹನ ನೋಡಿದ ಈ ನಾಲ್ವರು ಭಯಗೊಂಡು ಕಾರಿನಲ್ಲಿ ಮುಂದೆ ಹೋಗಲು ಪ್ರಯತ್ನಿಸಿದ್ದರು. ಅಷ್ಟರಲ್ಲಿ ಮಹೇಂದ್ರಗೌಡ ಮತ್ತೊಂದು ಹೊಯ್ಸಳ ವಾಹನ ಕರೆಸಿಕೊಂಡು ನಾಲ್ವರನ್ನು ಆ ವಾಹನದಲ್ಲಿ ಪೊಲೀಸ್ ಠಾಣೆಗೆ ಕಳುಹಿಸಿದ್ದರು. ಈ ವೇಳೆ ಲಿಂಗೇಶ್ ಅವರು ಬಂದಿದ್ದ ಕಾರನ್ನು ಮಹೇಂದ್ರಗೌಡನೇ ಚಲಾಯಿಸಿಕೊಂಡು ಪೊಲೀಸ್ ಠಾಣೆಗೆ ತಂದಿದ್ದ. ಈ ವೇಳೆ ಕಾರಿನಲ್ಲಿ ಪತ್ತೆಯಾದ ಬ್ಯಾಗ್ ಅನ್ನು ಪೊಲೀಸರು ಪರಿಶೀಲಿಸಿದಾಗ 40 ಲಕ್ಷ ರೂ. ಪತ್ತೆಯಾಗಿತ್ತು. ಲಿಂಗೇಶ್, ‘ನಾನು ಮನೆಯಿಂದ 50 ಲಕ್ಷ ರೂ. ಬ್ಯಾಗ್ನಲ್ಲಿ ಹಾಕಿಕೊಂಡು ಬಂದಿದ್ದೆ. ಇದೀಗ 40 ಲಕ್ಷ ರೂ. ಎನ್ನಲಾಗುತ್ತಿದೆ. ನಮ್ಮ ಕಾರನ್ನು ಠಾಣೆಗೆ ತಂದ ಮುಖ್ಯಪೇದೆ ಮಹೇಂದ್ರಗೌಡನ ಮೇಲೆ ಅನುಮಾವಿದೆ’ ಎಂದು ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದಾಗ, ಮಹೇಂದ್ರಗೌಡ ದಾರಿ ಮಧ್ಯೆ 10 ಲಕ್ಷ ರೂ. ಎಗರಿಸಿರುವುದು ಸಾಬೀತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(ಕೃಪೆ:ವಿವಾ)