ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ಯುವಕರ ಬರ್ಬರ ಹತ್ಯೆ ಮಾಡಲಾಗಿದೆ. ಸುಳೇಭಾವಿ ಗ್ರಾಮದ ಲಕ್ಷ್ಮೀ ಗಲ್ಲಿಯಲ್ಲಿ ರಣಧೀರ ಅಲಿಯಾಸ್ ಮಹೇಶ್ ರಾಮಚಂದ್ರ ಮುರಾರಿ (26), ಪ್ರಕಾಶ್ ಪಾಟೀಲ್ (24) ಎಂದು ಗುರುತಿಸಲಾಗಿದೆ. ಹತ್ಯೆಗೈದು ಹಂತಕರು ಪರಾರಿಯಾಗಿದ್ದಾರೆ. ರಾತ್ರಿ ನಡೆದ ಘಟನೆಗೆ ಇಡೀ ಬೆಳಗಾವಿ ಬೆಚ್ಚಿಬಿದ್ದಿದೆ.
ಗುಂಪು ಘರ್ಷಣೆಗೆ ಹಳೆಯ ವೈಷಮ್ಯವೇ ಕಾರಣ ಎಂದು ತಿಳಿದು ಬಂದಿದ್ದು, ಇಬ್ಬರು ಯುವಕರನ್ನು ಹತ್ಯೆ ಮಾಡಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ,ಮಾರಿಹಾಳ ಇನ್ಸ್ಪೆಕ್ಟರ್ ಬಸ್ಸಾಪೂರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಕ್ಕಾ ಪ್ಲ್ಯಾನ್ ಮಾಡಿಯೇ ಇಬ್ಬರನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಸುಳೇಭಾವಿಯ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯ ಎದುರು ಓರ್ವನ ಮೃತದೇಹ ಬಿದ್ದಿದ್ರೆ ಗಣಪತಿ ಮಂದಿರ ಮುಂಭಾಗದಲ್ಲಿ ಮತ್ತೋರ್ವನ ಮೃತದೇಹ ಬಿದ್ದಿದೆ. ನೂರು ಮೀಟರ್ ಅಂತರದಲ್ಲೇ ಇಬ್ಬರ ಹತ್ಯೆಯಾಗಿದ್ದು, ಘಟನಾ ಸ್ಥಳದಲ್ಲಿ ಪತ್ತೆಯಾದ ಬೈಕ್‌ಗಳ ಮೇಲೆ ಖಾರದ ಪುಡಿ ಬಿದ್ದಿದೆ.
ಎಲ್ಲೆಂದರಲ್ಲಿ ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನೋಡಿದ್ರೆ ಕಣ್ಣಿಗೆ ಖಾರದ ಪುಡಿ ಎರಚಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಅನುಮಾನ ವ್ಯಕ್ತವಾಗುತ್ತಿದೆ. ಘಟನಾ ಸ್ಥಳದಲ್ಲಿ ಸಿಕ್ಕ ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದು ಎಫ್‌ಎಸ್‌ಎಲ್ ತಂಡದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸುಳೇಭಾವಿ ಗ್ರಾಮದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿದೆ.
ಘಟನೆಗೆ ಸ್ಪಷ್ಟಕಾರಣ ಗೊತ್ತಾಗಿಲ್ಲ. ಪರಿಸ್ಥಿತಿ ಈಗ ಉದ್ವಿಗ್ನವಾಗಿದ್ದು, ಮಾರಿಹಾಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹಂತಕರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದೊಂದು ದಾಯಾದಿ ಕಲಹ ಎಂದು ತಿಳಿದು ಬಂದಿದೆ.
ಕೊಲೆಯಾದ ಮಹೇಶ್ ಮುರಾರಿ,ಹಿಂದೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ : ಇನ್ನು ದುಷ್ಕರ್ಮಿಗಳಿಂದ ಭೀಕರ ಹತ್ಯೆಗೀಡಾಗಿರುವ ಮಹೇಶ್ ಮುರಾರಿ 2019ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. 2019ರ ಜನವರಿ ಒಂದರಂದು ಸುಳೇಭಾವಿ ಗ್ರಾಮದ ಬಜಾರ್ ಗಲ್ಲಿ ನಿವಾಸಿ ನಾಗೇಶ ಮ್ಯಾಕಲ್ಯಾಗೋಳ ಹತ್ಯೆಯಾಗಿತ್ತು. ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ನಾಗೇಶ್‌ನನ್ನು ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಹೇಶ ಮುರಾರಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದ ಎಂಬುದು ಗೊತ್ತಾಗಿದೆ. ಒಟ್ಟಾರೆ ಶಾಂತವಾಗಿದ್ದ ಸುಳೇಭಾವಿ ಗ್ರಾಮದಲ್ಲಿ ಜೋಡಿ ಕೊಲೆ ಬೆಚ್ಚಿ ಬೀಳುವಂತೆ ಮಾಡಿದ್ದು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.