ಕಲಬುರಗಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ, ಜೀವ ಬೆದರಿಕೆ ಸೇರಿದಂತೆ ಹಲವು ಕೇಸ್ಗಳಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡರನ್ನು ಕಲಬುರಗಿಯಿಂದ ಒಂದು ವರ್ಷ ಗಡಿಪಾರು ಮಾಡಲಾಗಿದೆ.ಕಲಬುರಗಿ ನಗರದಿಂದ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಗ್ರಾಮೀಣ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಸೆ.30ರಂದೇ ಆದೇಶ ಹೊರಡಿಸಲಾಗಿದ್ದು, ಗಡಿಪಾರಾಗಲು 5 ದಿನ ಕಾಲಾವಕಾಶ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಣಿಕಂಠ ವಿರುದ್ಧ ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಹಲವು ಪ್ರಕರಣ ದಾಖಲಾಗಿವೆ. ಹೆಚ್ಚಿನವು ಪಡಿತರ ಅಕ್ಕಿ ಸಾಗಾಟಕ್ಕೆ ಸಂಬಂಧಿಸಿವೆ. ಕಾನೂನು ಮತ್ತು ಸುವ್ಯಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರು ಇತ್ತೀಚೆಗೆ ಕಲಬುರಗಿ ನಗರಕ್ಕೆ ಭೇಟಿ ನೀಡಿದಾಗ ದಲಿತ ಸಂಘಟನೆಗಳ ಮುಖಂಡರು ಮಣಿಕಂಠ ರಾಡೋಡ ಗಡಿಪಾರಿಗೆ ಒತ್ತಾಯಿಸಿದ್ದರು. ಆ ವೇಳೆ ಕ್ರಮ ಕೈಗೊಳ್ಳುವುದಾಗಿ ಎಡಿಜಿಪಿ ಭರವಸೆ ಸಹ ನೀಡಿದ್ದರು.
ಕಲಬುರಗಿಯ ಶರಣಬಸವೇಶ್ವರ ಗುಡಿ ರಸ್ತೆಯಲ್ಲಿ ಎಂ.ಆರ್. ಮಾರ್ಟ್ ಸೂಪರ್ ಮಾರ್ಕೆಟ್ ಆರಂಭಿಸಿರುವ ಮಣಿಕಂಠ ರಾಠೋಡ ಅದರ ಉದ್ಘಾಟನೆಗೆ ಖ್ಯಾತ ಗಾಯಕಿ ಮಂಗ್ಲಿ ಅವರನ್ನು ಹೈದರಾಬಾದ್ನಿಂದ ಕರೆಸಿ ಸುದ್ದಿಯಾಗಿದ್ದರು.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರ ಜತೆಗಿನ ಫೋಟೋಗಳನ್ನು ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳಲು ಕಳೆದೊಂದು ವರ್ಷದಿಂದ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದರು. ಅವರದೇ ಸಮುದಾಯಕ್ಕೆ ಸೇರಿದ ಬಿಜೆಪಿ ಮುಖಂಡರೊಬ್ಬರು ಗಡಿಪಾರು ಆಗದಂತೆ ಪೊಲೀಸರ ಮೇಲೆ ಪ್ರಭಾವ ಬೀರಿ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈಗ ಗಡಿಪಾರು ಆದೇಶ ಹೊರಬಿದ್ದಿದೆ.
(ವಿವಾ)