ಅನನ್ಯ ಸೇವೆಗೆ ಶಿಕ್ಷಕರಿಗೆ 50 ಗ್ರಾಂ ಬಂಗಾರ, 2 ಕೆಜಿ ಬೆಳ್ಳಿ ನೀಡಿ ಬೀಳ್ಕೊಡುಗೆ ನೀಡಿದ ಗ್ರಾಮಸ್ಥರು

ಉಮೇಶ ಗೌರಿ (ಯರಡಾಲ)
ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಬಿ.ಎ.ಕೆ.ಪ್ರೌಢಶಾಲೆಯಲ್ಲಿ 40 ವರ್ಷ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ದೈಹಿಕ ಶಿಕ್ಷಕ ಎನ್.ಜಿ.ಕೊಟ್ಯಾಳ ಅವರಿಗೆ ಗ್ರಾಮಸ್ಥರು ಅಭೂತಪೂರ್ವವಾಗಿ ಬೀಳ್ಕೊಡಿಗೆ ನೀಡಿದ್ದಾರೆ.

ಬರೋಬ್ಬರಿ ಐದು ತೊಲೆ ಬಂಗಾರ (50 ಗ್ರಾಂ ಬಂಗಾರ), ಎರಡು ಕೆಜಿ ಬೆಳ್ಳಿ ಮೂರ್ತಿಗಳನ್ನು ನೀಡಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಈ ಮೂಲಕ ತಮ್ಮ ಗುರುಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಶಿಕ್ಷಕರ ಬೀಳ್ಕೊಡುಗೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

ಗ್ರಾಮದ ಜನರು, ಹಳೆಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಜನ ಪ್ರತಿನಿಧಿಗಳು ಜೊತೆಗೂಡಿ ಶಿಕ್ಷಕ ಕೊಟ್ಯಾಳ ಅವರಿಗೆ ತಲೆಗೆ ರುಮಾಲು, ದೋತಿ ತೊಡಸಿ ತೆರೆದ ವಾಹನದಲ್ಲಿ ವಾದ್ಯ ಮೇಳದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿದರು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ 5 ತೊಲೆ ಬಂಗಾರ, 2 ಕೆಜಿ ಬೆಳ್ಳಿ ಮೂರ್ತಿಗಳು, ಡಬಲ್ ಡೋರ್ ಫ್ರಿಡ್ಜ್‌, 32 ಇಂಚ್ ಎಲ್‌ಇಡಿ ಟಿವಿ, ಕಂಚಿನ ಸರಸ್ವತಿ ಮೂರ್ತಿ, ಸಿದ್ದೇಶ್ವರ ಸ್ವಾಮೀಜಿಗಳ 25 ಭಾವಚಿತ್ರಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.
ಶಿಕ್ಷಕರು ಶಾಲೆಗೆ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಅವರ ಶ್ರಮದಿಂದ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ. ಎಂದು ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.“ಮಕ್ಕಳ ಭವಿಷ್ಯ ರೂಪಿಸಿದ ಅವರ ವಿಶ್ರಾಂತ ಜೀವನ ಸುಖಮಯವಾಗಿರಲಿ” ಎಂದು ಹಾರೈಸಿದರು.
ಶಾಲೆಯ ವಿದ್ಯಾರ್ಥಿಗಳಿಗಾಗಿ 1 ಲಕ್ಷ ಠೇವಣಿ ಇರಿಸಿದ ಶಿಕ್ಷಕ:
ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಕಾಣಿಕೆಯಾಗಿ ಬಂದ 96 ಸಾವಿರ ನಗದು ಜೊತೆಗೆ ತಮ್ಮ ತಂದೆ ತಾಯಿಯ ಹೆಸರಲ್ಲಿ ಮತ್ತೆ 50 ಸಾವಿರವನ್ನು ಶಾಲೆಗೆ ನೀಡಿರುವ ಕೋಟ್ಯಾಳ ಅವರು, ಇದರಿಂದ ಬರುವ ಬಡ್ಡಿ ಹಣದಿಂದ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಎಂದಿದ್ದಾರೆ. ಈ ಮೂಲಕ ಮಾದರಿಯಾಗಿದ್ದಾರೆ. ಜೊತಗೆ ಕೊಟ್ಯಾಳ ಗುರುಗಳ ಹೆಸರಿನಲ್ಲಿ ಹಳೆಯ ವಿದ್ಯಾರ್ಥಿ ಮಲ್ಲಿನಾಥ ಎಂಬುವರು 1 ಲಕ್ಷ ಹಣ ಠೇವಣಿ ಇಟ್ಟು, ಬರುವ ಬಡ್ಡಿ ಹಣದಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕ ಎನ್.ಜಿ.ಕೊಟ್ಯಾಳ ಈ ಬೀಳ್ಕೊಡುಗೆ ಸಮಾರಂಭ ನನ್ನ ಜೀವನದಲ್ಲೇ ಮರೆಯಲು ಸಾಧ್ಯವಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";