ನಾಳೆ ಖಾನಾಪೂರದಲ್ಲಿ ಕಾಂಗ್ರೆಸ್ ಸಮಾವೇಶ, ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಕೈ ನಾಯಕಿ ಅಂಜಲಿತಾಯಿ ನಿಂಬಾಳ್ಕರ
ಸುದ್ದಿ ಸದ್ದು ನ್ಯೂಸ್ ಖಾನಾಪುರ: ಬೆಳಗಾವಿಯ ಚಿರಾಪುಂಜಿ ಅಪ್ಪಟ ಮಲೆನಾಡು ಖಾನಾಪೂರದಲ್ಲಿ ಕಾಂಗ್ರೆಸ್ ರಾಜಕೀಯ ಬಲಪ್ರದರ್ಶನಕ್ಕೆ ಮುಂದಾಗಿದ್ದು ನಾಳೆ ಶಾಸಕಿ ಡಾ.ಅಂಜಲಿತಾಯಿ ನಿಂಬಾಳ್ಕರ ನೇತೃತ್ವದಲ್ಲಿ ಕಾಂಗ್ರೆಸ್ ಸಮಾವೇಶವನ್ನು ಹಮ್ಮಿಕೊಂಡಿದೆ.
ರಾಜ್ಯ ರಾಜಕೀಯದಲ್ಲಿ ಖಾನಾಪೂರ ಕ್ಷೇತ್ರ ವಿಭಿನ್ನ ಸ್ಥಾನ ಪಡೆದಿದ್ದು ಎಂಇಎಸ್ ಪ್ರಭಾವದ ಈ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳಾ ಶಾಸಕಿಯೊಬ್ಬರು ಆದೂ ಕಾಂಗ್ರೆಸ್ ನಿಂದ ಆಯ್ಕೆಯಾಗುವ ಮೂಲಕ ಖಾನಾಪೂರ ಕ್ಷೇತ್ರವನ್ನು ಕೈ ಕಮಾಂಡ್ ವಶಕ್ಕೆ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಸ್ವತಂತ್ರವಾಗಿ ಸ್ಪರ್ಧಿಸಿ ಸೋಲುಂಡ ಡಾ.ಅಂಜಲಿತಾಯಿ ಕ್ಷೇತ್ರ ಬಿಡದೇ ನಿರಂತರ ಜನಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಜನತೆಯ ಪ್ರೀತಿಗೆ ಪಾತ್ರರಾಗಿ ಶಾಸಕಿಯಾಗಿದ್ದು ಇದೀಗ ಇತಿಹಾಸ.
ಇದೀಗ ಮತ್ತೊಮ್ಮೆ ಡಾ.ಅಂಜಲಿತಾಯಿ ನಿಂಬಾಳ್ಕರ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು ನಾಳೆ ಕಾಂಗ್ರೆಸ್ ಸಮಾವೇಶ ಆಯೋಜನೆ ಮಾಡುವ ಮೂಲಕ ಸಂಘಟನಾತ್ಮಕ ಬಲೆ ಹೆಣೆದಿದ್ದಾರೆ.
ಇವರ ಅಧಿಕಾರಾವಧಿಯ ಈ ನಾಲ್ಕೂವರೆ ವರ್ಷದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಿದ್ದು ಪುನರಾಯ್ಕೆ ಬಯಸಿ ಸ್ಪರ್ಧೆ ಮಾಡಲು ಡಾ.ಅಂಜಲಿ ಸಿದ್ದರಾಗಿದ್ದಾರೆ. ಇವರ ವಿರುದ್ದ
ಬಿಜೆಪಿ ಪ್ರತಿಸ್ಪರ್ಧಿಯಾಗಿ ಸ್ಪರ್ಧೆ ಮಾಡಲು ಮಹಿಳಾ ಮಣಿಯನ್ನೇ ಹುಡುಕಿದ್ದು ಡಾ.ಸೋನಾಲಿ ಸರನೋಬತ್ ಅವರಿಗೆ ಈ ಬಾರಿ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಡಾ.ಸೋನಾಲಿ ಪಕ್ಷದಲ್ಲಿ ಸಕ್ರಿಯವಾಗಿ ಚಟುವಟಿಕೆ ಆರಂಭಿಸಿದ್ದು ವೃತ್ತಿಯಿಂದ ಇವರು ಕೂಡ ವೈದ್ಯರಾಗಿದ್ದು ಸಾಮಾಜಿಕ ಸೇವೆಗಳ ಮೂಲಕ ಖಾನಾಪೂರ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದಾರೆ ಎನ್ನಲಾಗುತ್ತಿದೆ. ಪ್ರತಿಸ್ಪರ್ಧಿಗೆ ಟಕ್ಕರ್ ಕೊಡಲು ಶಾಸಕಿ ಡಾ.ಅಂಜಲಿ ನಿಂಬಾಳ್ಕರ ಎಡಬಿಡದೇ ಕ್ಷೇತ್ರದ ತುಂಬೆಲ್ಲಾ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಿದ್ದಾರೆ. ಆ ನಿಟ್ಟಿನಲ್ಲಿ ನಾಳೆ ರಾಜ್ಯ ನಾಯಕರು ಹಾಗೂ ಜಿಲ್ಲಾ ನಾಯಕರ ನೇತೃತ್ವದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ ಹಮ್ಮಿಕೊಂಡಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ರಾಜಕೀಯ ಪಕ್ಷಗಳು ಈ ರೀತಿಯ ಸಮಾವೇಶ ಹಮ್ಮಿಕೊಳ್ಳುವುದು ಸರ್ವೇ ಸಾಮಾನ್ಯ ಆದಾಗ್ಯೂ ಮೊದಲ ಬಾರಿಗೆ ಬೃಹತ್ ಮಟ್ಟದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜಿಸಿರುವುದು ಅಚ್ಚರಿ ಹುಟ್ಟು ಹಾಕಿದೆ.