ನೇಮಕಾತಿ ಅಕ್ರಮ: ಶಿಕ್ಷಕನ ಕೈವಾಡ! ಶಿಕ್ಷಕ ಸಸ್ಪೆಂಡ್

ವಿಜಯಪುರ (ಸೆ.23): ಪಿಎಸ್‌ಐ, ಕೆಪಿ‌ಟಿಸಿಎಲ್‌, ಶಿಕ್ಷಕರ ನೇಮಕಾತಿ ಅಕ್ರಮ ಬೆನ್ನಲ್ಲೇ ಜಿಲ್ಲೆಗೆ ಪಿಡಬ್ಲ್ಯೂಡಿ ಇಂಜನಿಯರ್ ಗಳ ನೇಮಕಾತಿ ಕಳಂಕವೂ ತಟ್ಟಿದೆ. ಲೋಕೋಪಯೋಗಿ ಇಲಾಖೆಯ ಅಭಿಯಂತರರ ನೇಮಕಾತಿ ಪರೀಕ್ಷೆಯ ಅಕ್ರಮ ನೇಮಕಾತಿಯಲ್ಲಿ  ಜಿಲ್ಲೆಯ  ಶಿಕ್ಷಕರೊಬ್ಬರ ಕೈವಾಡವಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆ ಶಿಕ್ಷಕನನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ ಚಾಲಾಕಿ ಶಿಕ್ಷಕ ಮಾತ್ರ ಪೊಲೀಸರ ಹಾಗೂ ಸಿಓಡಿಯವರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ. 

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುತ್ತರಗಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪದವೀಧರ ಶಿಕ್ಷಕ ಗೊಲ್ಲಾಳಪ್ಪ ಪ್ರಶ್ನೆ ಪತ್ರಿಕೆಯನ್ನು ಮೊಬೈಲನಲ್ಲಿ ಪೋಟೋ ಸೆರೆ ಹಿಡಿದು, ಕೀ ಉತ್ತರ ಸಿದ್ಧ ಮಾಡಲು ನೆರವಾಗಿರುವದರಿಂದ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವದರಿಂದ ಅನ್ನಪೂರ್ನೆಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಅಮಾನತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ. 

ಗುತ್ತರಗಿ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರು,  ಕೆ.ಪಿ.ಎಸ್.ಸಿ ಆಯೋಗದ ಪಿಡಬ್ಲೂಡಿ ಇಲಾಖೆಯ ಅಸಿಸ್ಟಂಟ್ ಇಂಜನೀಯರಿಂಗ್ ಹುದ್ದೆಯ ಪರೀಕ್ಷೆಯಲ್ಲಿ, ಪರೀಕ್ಷಾ ಕೇಂದ್ರವಾದ ಕಲಬುರ್ಗಿಯ ಬಾಲಾಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆಯ ಸೋರಿಕೆಗೆ ಕಾರಣವಾಗಿದ್ದರು. 

ಹೀಗಾಗಿ ಇವರ ಮೇಲೆ ಮೋಸ, ವಂಚನೆಯ ಹಾಗೂ ಇದಕ್ಕೆ ಸಂಬಂಧಿಸಿದ ಪ್ರಕರಣಗಳು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಶಿಕ್ಷಕನ ಬಂಧನಕ್ಕೂ ಪೊಲೀಸರು ಬಲೆ ಬಿಸಿದ್ದರು, ಆದರೆ ಶಿಕ್ಷಕ ಮಾತ್ರ ಚಳ್ಳೆ ಹಣ್ಣು ತಿನ್ನಿಸಿ ಓಡಾಡ್ತಿದ್ದಾನೆ.

ಪ್ರಭಾವಿ ಕೈಗಳು..?: ಈ ಶಿಕ್ಷಕನ ಮೇಲೆ ಕೇವಲ ಲೋಕೋಪಯೋಗಿ ಇಲಾಖೆ ಅಲ್ಲದೇ, ವಿವಿಧ ಇಲಾಖೆಗಳಿಗೆ ನೇರವಾಗಿ ಅಥವಾ ಕೆಪಿಎಸ್ ಸಿ ಮೂಲಕ  ನಡೆಯುವ ಪ್ರಥಮ ಹಾಗು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅಕ್ರಮವಾಗಿ ನೇಮಕ ಮಾಡಿದ ಆರೋಪವೂ ಇದೆ, ಅಲ್ಲದೆ 10ಕ್ಕೂ ಹೆಚ್ಚು ಪಿ.ಎಸ್‌.ಐ ಗಳನ್ನು ಅಕ್ರಮವಾಗಿ ನೇಮಕ ಮಾಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. 

ಇಷ್ಟಿದ್ದರೂ ಕೂಡಾ ಆತ ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿರುವುದರಿಂದ ಆತನ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಮೂರ್ನಾಲ್ಕು ಬಾರಿ ಅರೆಸ್ಟ್ ಮಾಡಲು ಬಂದಾಗಲೊಮ್ಮೆ ಪೊಲೀಸರ ಕಣ್ಣು ತಪ್ಪಿಸಿ ಓಡಾಡಿಕೊಂಡಿದ್ದ.

ಬ್ಲೂಟುತ್ ಬಳಕೆ: 2021ರ ಡಿಸೆಂಬರ 14 ರಂದು ನಡೆದಿದ್ದ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ (ಜೆಇ) ಮತ್ತು ಸಹಾಯಕ ಇಂಜಿನಿಯರ್ (ಎಇ) ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆಸಿದ ಆರೋಪ ಈತನ ಮೇಲಿದೆ. ಈ ಪರೀಕ್ಷೆಗೆ ಬ್ಲೂಟೂತ್ ಬಳಸಿ ಅಕ್ರಮವೆಸಗಿರುವುದು ಬೆಳಕಿಗೆ ಬಂದಿದೆ. ಪಿಎಸ್‌ಐ, ಎಫ್‌ಡಿಎ ಪರೀಕ್ಷೆಯಲ್ಲಿಯೂ ಡೀಲ್ ಕುದುರಿಸಿ ಅಕ್ರಮ ನಡೆಸಿದ್ದರ ತನಿಖೆ ಚುರುಕುಗೊಂಡಿರುವ ಹೊತ್ತಿನಲ್ಲೇ ಬೆಳಕಿಗೆ ಬಂದ ಮತ್ತೊಂದು ಹಗರಣ ಇದಾಗಿದೆ.

ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಪರೀಕ್ಷೆ ಅಕ್ರಮದ ತನಿಖೆಯ ಸಿಐಡಿ ತಂಡಕ್ಕೆ ಪಿಡಬ್ಲ್ಯೂಡಿ ಇಲಾಖೆಯ ಜೆಇ, ಎಇ ಪರೀಕ್ಷೆ ಅಕ್ರಮದ ಬಗ್ಗೆಯೂ ಸ್ಪೋಟಕ ಅಂಶಗಳು ಗೊತ್ತಾಗಿವೆ. ಈಗ ತಲೆ ತಪ್ಪಿಸಿಕೊಂಡಿರುವ ಶಿಕ್ಷಕ  ಗೋಲ್ಲಾಳಪ್ಪನನ್ನು ವಶಕ್ಕೆ ಪಡೆದರೆ ಇನ್ನಷ್ಟು ಆರೋಪಿಗಳು ಹಾಗೂ ಪ್ರಭಾವಿಗಳ ಹೆಸರು ಬೆಳಕಿಗೆ ಬರುವ ಸಾಧ್ಯತೆಗಳಿವೆ. 

ಪಿಎಸ್‌ಐ ನೇಮಕ ಹಗರಣದ ಕಿಂಗ್‌ಪಿನ್‌ ಆಗಿರುವ ನೀರಾವರಿ ಇಲಾಖೆ ಎಇ ಮಂಜುನಾಥ ಮೇಳಕುಂದಿ ಮತ್ತು ಇನ್ನೊಬ್ಬ ಮಾಸ್ಟರ್ ಮೈಂಡ್ ಆರ್‌.ಡಿ.ಪಾಟೀಲ್ ಜೊತೆಗೆ ಸೇರಿಕೊಂಡು ಇಂಜಿನಿಯರ್ಸ್‌ ನೇಮಕ ಪರೀಕ್ಷೆಯಲ್ಲೂ ಕೈಚಳಕ ತೋರಿಸಿ ಕಳ್ಳಾಟ ನಡೆಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ: ಶಿಕ್ಷಕನಾಗಿ ಅಕ್ರಮವೆಸಗಿರುವುದಕ್ಕೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೇ ಸಾಕ್ಷಿ ಎಂದಿವೆ ಸಿಐಡಿ ಮೂಲಗಳು. ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಬಂಧಿಸಿದ ನಂತರ ಕಲಬುರಗಿ ನೀರಾವರಿ ಇಲಾಖೆ ಅಧಿಕಾರಿಗಳು, ಮೇಲಾಧಿಕಾರಿಗಳಿಗೆ ನೀಡಿರುವ ವರದಿಯಲ್ಲೂ ಲೋಕೋಪಯೋಗಿ ಇಲಾಖೆ ಎಇ ಮತ್ತು ಜೆಇ ನೇಮಕ ಪರೀಕ್ಷೆಯಲ್ಲೂ ಅಕ್ರಮ ನಡೆಸಿದ ಆರೋಪ ಮಂಜುನಾಥ ಮೇಳಕುಂದಿ ಜೊತೆಗೆ ಸಂಪರ್ಕವಿದೆ ಎನ್ನುವ ಅಂಶವನ್ನು  ಉಲ್ಲೇಖ ಮಾಡಲಾಗಿದೆ ಎನ್ನುವುದು ಗೊತ್ತಾಗಿದೆ.

 

 

 

 

 

 

 

 

 

 

 

ಕೃಪೆ;ಸುವರ್ಣಾ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";