ಬೆಳಗಾವಿ: ಕಾರ್ಯಕ್ರಮಯೊಂದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಳ್ಳಿ ಹಳ್ಳಿಗೆ ಹೋಗಿ ಬಿಜೆಪಿಯ ಸಾಧನೆ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಈ ಮಾತು ಕೇಳಿ ನನಗೆ ನಗು ಬರುತ್ತಿದೆ ಎಂದು ಚನ್ನಮ್ಮನ ಕಿತ್ತೂರಿನ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಆನಂದ ಹಂಪಣ್ಣವರ ರವಿವಾರ ಚಿಕ್ಕಬಾಗೇವಾಡಿಯಲ್ಲಿ ಮಾದ್ಯಮಕ್ಕೆ ತಿಳಿಸಿದರು.
ಮುಖ್ಯಮಂತ್ರಿಯಂತಹ ಸಂವಿಧಾನಾತ್ಮಕವಾದ ಘನತೆಯ ಹುದ್ದೆಯಲ್ಲಿ ಇದ್ದು ಬಸವರಾಜ ಬೊಮ್ಮಾಯಿ ಅವರು ಯಾವುದೋ ಒಂದು ನಾಟಕ ಡೈಲಾಂಗ ಹೇಳಿದಂತೆ ಮಾತನಾಡುತ್ತಿದ್ದಾರೆ.ಹಳ್ಳಿ ಹಳ್ಳಿಗೆ ಹೋಗಿ ಇವರು ಬಿಜೆಪಿಯ ಸಾಧನೆ ಬಗ್ಗೆ ಮಾತನಾಡುವ ಬಗ್ಗೆ ಹೇಳಿದ್ದಾರೆ. ಈ ಮಾತು ಕೇಳಿ ನನಗೆ ನಗು ಬರುತ್ತಿದೆ.ಇದನ್ನು ಜನರು ಕೂಡ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.
ಬೊಮ್ಮಾಯಿಯವರೇ ನಿಮ್ಮ ಯಾವ ಸಾಧನೆ ಬಗ್ಗೆ ಮಾತನಾಡುತ್ತೀರಿ? 40% ಕಮಿಷನ್ ಭ್ರಷ್ಟಾಚಾರದ ಬಗ್ಗೆಯೋ? ಪಠ್ಯ ಪುಸ್ತಕ ತಿರುಚಿದ ಬಗ್ಗೆಯೋ? ಕಿಟಕಿ ಒಳಗಿಂದ ಸಾವರ್ಕರ್ ಬುಲ್ ಬುಲ್ ಪಕ್ಷಿಯ ಮೇಲೆ ಹೇಗೆ ಹಾರಿಕೊಂಡು ಬಂದರೆಂದೋ? ಪೆಟ್ರೋಲ್ ಬೆಲೆ 100 ರೂಪಾಯಿ ದಾಟಿಸಿದ ಬಗ್ಗೆಯೋ? ಅಡುಗೆ ಸಿಲಿಂಡರ್ ಬೆಲೆ 1,000 ರೂಪಾಯಿ ದಾಟಿಸಿದ ಬಗ್ಗೆ ಹೇಳುತ್ತೀರೋ? ಸಮಾಜದಲ್ಲಿ ಧರ್ಮದ ಹೆಸರಲ್ಲಿ ಅಶಾಂತಿ ಮೂಡಿಸುವ ಬಗ್ಗೆ ಹೇಳುವಿರೋ? ನಮ್ಮ ಸರ್ಕಾರ ನೇಮಕಾತಿ ಭ್ರಷ್ಟಾಚಾರ ನಡೆಸುತ್ತಿದ್ದು, ಇದೇ ನಮ್ಮ ಸಾಧನೆ ಎನ್ನುವಿರೋ? ಅಕ್ಕಿ ಬೇಳೆ ಅಡಿಗೆ ಎಣ್ಣೆ ಬೆಲೆ ವಿಪರೀತ ಏರಿಸಿದ್ದೇವೆ ಎನ್ನುವಿರೋ? ನಮ್ಮ ಯೋಗ್ಯತೆಗೆ ಇಷ್ಟು ದಿನವಾದರೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವಿರೋ? ದಯಮಾಡಿ ಈ ಮೇಲೆ ತಿಳಿಸಿದ ಯಾವ ಸಾಧನೆ ಬಗ್ಗೆ ಮಾಡುತ್ತೀರಾ ಎಂಬುದನ್ನು ಜನರಿಗೆ ತಿಳಿಸಿ ಎಂದು ಆನಂದ ಹಂಪಣ್ಣವರ ಪ್ರಶ್ನೆ ಮಾಡಿದ್ದಾರೆ.
ಆರ್.ಎಸ್.ಎಸ್ ನ ಕಪಿ ಮುಷ್ಠಿಗೆ ಸಿಲುಕಿರುವ ಬಿಜೆಪಿಗರು ಇದೀಗ ರೈತರ ಪಂಪ್ ಸೆಟ್ ಗೆ ನೀಡುತ್ತಿದ್ದ ಉಚಿತ ವಿದ್ಯುತ್ತಿಗೂ ಕತ್ತರಿ ಹಾಕಿದ್ದು,ಈ ಮೂಲಕ ತಮ್ಮ ದೇಶ ಪ್ರೇಮದ ನಿಜದ ಮುಖವನ್ನು ಕಳಚಿಟ್ಟಿದ್ದಾರೆ. ಇದೇ ಸರ್ಕಾರ ಮೊನ್ನೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡವರಿಗೆ ನೀಡಲಾಗುತ್ತಿದ್ದ ಭಾಗ್ಯಜ್ಯೋತಿ ಸೌಲಭ್ಯದ ಆದೇಶವನ್ನೂ ಹಿಂಪಡೆದು ತಮ್ಮ ಶೋಷಿತ ಸಮುದಾಯಗಳ ವಿರೋಧಿ ಮನಸ್ಥಿತಿಯನ್ನು ತೋರ್ಪಡಿಸಿದ್ದರು.
ಪ್ರಸ್ತುತ ಕೇಂದ್ರ ಮತ್ತು ರಾಜ್ಯದಲ್ಲಿ ಇರುವ ಡಬಲ್ ಇಂಜಿನ್ ಸರ್ಕಾರವು ರೈತರು ಮತ್ತು ದುರ್ಬಲ ವರ್ಗದ ಜನರ ಬದುಕಿಗೆ ಎಳ್ಳು ನೀರು ಬಿಡುತ್ತಿದ್ದು ಕಾರ್ಪೊರೇಟ್ ಶ್ರೀಮಂತರ ಸೇವೆ ಮಾಡುವುದೇ ತನ್ನ ಕೆಲಸವನ್ನು ಮುಂದುವರೆಸಿದ್ದು ಸುಮಾರು 10 ಲಕ್ಷ ಕೋಟಿ ಕಾರ್ಪೋರೇಟ್ ಸಾಲವನ್ನು ಮನ್ನಾ ಮಾಡಿದೆ.
ರೈತರು, ಬಡವರು ಮತ್ತು ಶ್ರಮಿಕರ ಬದುಕಿನ ಮೇಲೆ ಆಕ್ರಮಣ ಮಾಡುತ್ತಿರುವ ಇವರ ವಿಷಪೂರಿತ ದ್ವೇಷ ಪ್ರೇಮಕ್ಕೆ ಸಾಮಾನ್ಯ ಜನರು ಬಲಿಯಾಗುತ್ತಿದ್ದು ಅವರೇ ಮುಂದಿನ ದಿನಮಾನಗಳಲ್ಲಿ ಬಿಜೆಪಿಗರ ವಿಷಯುಕ್ತ ದೇಶಪ್ರೇಮದ ಧೋರಣೆಗೆ ಅಂತ್ಯ ಹಾಡಬೇಕಿದೆ ಎಂದು ಆಪ್ ಮುಖಂಡ ಆನಂದ ಹಂಪನ್ಣವರ ತಿಳಿಸಿದರು.