ಖಾನಾಪುರ: ಆಹಾರ ಹಾಗೂ ನಾಗರಿಕ ಸರಬರಾಜು ಸಚಿವರಾಗಿದ್ದ ಲಿಂಗೈಕ್ಯ ಉಮೇಶ ಕತ್ತಿ ಅವರ ನಿಧನಕ್ಕೆ ಸಂತಾಪ ಸೂಚಕ ಹಿನ್ನೆಲೆಯಲ್ಲಿ ಖಾನಾಪುರ ಭಾಜಪಾ ಮಂಡಲದ ವತಿಯಿಂದ ಶ್ರದ್ಧಾಂಜಲಿ ಸಭೆ ಏರ್ಪಡಿಸಿಲಾಗಿತ್ತು. ಖಾನಾಪುರ ಮಂಡಲ ಅಧ್ಯಕ್ಷ ಸಂಜಯ ಕುಬಾಲ್, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಕಾರ್ಯದರ್ಶಿ ಗುಂಡಪ್ಪ ತೋಪಿನಕಟ್ಟಿ, ಇತ್ತಿಚೆಗೆ ಎಂಇಎಸ್‌ನಿಂದ ಬಿಜೆಪಿಗೆ ಆಗಮಿಸಿದ ಮಾಜಿ ಶಾಸಕ ಅರವಿಂದ ಪಾಟೀಲ, ಖಾನಾಪುರ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜಶ್ರೀ ದೇಸಾಯಿ, ಕಿರಣ ಯಳ್ಳೂರಕರ, ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಹಾಗೂ ಖಾನಾಪುರ ಉಸ್ತುವಾರಿ ಡಾ. ಸೋನಾಲಿ ಸರ್ನೋಬತ್, ರಾಜೇಂದ್ರ ರೈಕಾ, ಯಶವಂತ ಕೋಡೊಳ್ಳಿ, ಜ್ಯೋತಿಬಾ ರೇಮಾನಿ, ವಾಸಂತಿ ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಯಾವತ್ತೂ ಕರುನಾಡಿಗೆ ದ್ರೋಹ ಮಾಡುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಯಿಂದ ಈಚೆಗೆ ಬಿಜೆಪಿ ಸೇರಿರುವ ಮಾಜಿ ಶಾಸಕ ಅರವಿಂದ ಪಾಟೀಲ ಶೃದ್ಧಾಂಜಲಿ ಸಭೆ ಎಂದು ಅರಿಯದೆ ಕ್ಷುಲ್ಲಕವಾಗಿ ನಡೆದುಕೊಂಡಿದ್ದಾರೆ.
ಶ್ರದ್ಧಾಂಜಲಿ ಸಭೆಯನ್ನು ಮಾಡಲು ಸಕಲ ತಯಾರಿ ಮಾಡಿ ಸಭೆಗೆ ಆಗಮಿಸಿದ್ದ ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಉಪ ಅಧ್ಯಕ್ಷೆ ಹಾಗೂ ಖಾನಾಪುರ ಉಸ್ತುವಾರಿ ಡಾ. ಸೋನಾಲಿ ಸರ್ನೋಬತ್ ಅವರನ್ನು ಉದ್ದೇಶಿಸಿ ತೀರಾ ಅವಾಚ್ಯವಾಗಿ ಮಾತನಾಡಿ ಸಾರ್ವಜನಿಕರ ಎದುರೇ ಮಹಿಳೆಯೊಬ್ಬರಿಗೆ ಹಗುರವಾಗಿ ಮಾತನಾಡುವ ಮೂಲಕ ಮಹಿಳೆಯರಿಗೆ ಅಗೌರವ ತೋರುವುದದರ ಜೊತೆ ತಮ್ಮ ಸಂಸ್ಕೃತಿಯನ್ನು ತೋರಿಸಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಪಡೆಯಬೇಕು ಎಂಬ ಉದ್ದೇಶದಿಂದ ಎಂಇಎಸ್‌ನಿಂದ ಬಿಜೆಪಿಗೆ ಬಂದಿರುವ ಅರವಿಂದ ಪಾಟೀಲರಿಗೆ ಖಾನಾಪುರ ಬಿಜೆಪಿಯಲ್ಲಿ ಯಾವುದೇ ಬೆಲೆ ಸಿಗುತ್ತಿಲ್ಲ. ನಾಡಿಗೆ ದ್ರೋಹ ಮಾಡಿದ ಪಕ್ಷದಿಂದ ಪಲಾಯನ ಮಾಡಿದ ಇವರಿಗೆ ಬಿಜೆಪಿಯ ಯಾರೊಬ್ಬರೂ ಅವರನ್ನು ಗೌರವದಿಂದ ಕಾಣುತ್ತಿಲ್ಲ. ಇದರಿಂದಾಗಿ ತೀವ್ರ ಮಾನಸಿಕ ತೊಳಲಾಟಕ್ಕೆ ಸಿಲುಕಿರುವ ಅವರು, ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ. ನಾವು ತಾಲೂಕಿನವರು ಸಭೆ ಮಾಡಿಕೊಳ್ಳುತ್ತೇವೆ. ನಮ್ಮ ತಾಲೂಕಿನೊಳಗೆ ನಿಮಗೆ ಅವಕಾಶವಿಲ್ಲ ಎಂದು ನಿಂದಿಸಿದ್ದಾರೆ.
ಜೊತೆಗೆ ತಾಲೂಕಾ ಅಧ್ಯಕ್ಷರನ್ನು ಉದ್ದೇಶಿಸಿ ಅವರನ್ನು ಏಕೆ ನಮ್ಮ ತಾಲೂಕಿನಲ್ಲಿ ನಡೆಯುವ ಸಭೆಗೆ ಆಹ್ವಾನಿಸಿದ್ದೀರಿ. ಬೇರೆ ತಾಲೂಕಿನವರಿಗೆ ಇಲ್ಲೇನು ಕೆಲಸ ಎಂದು ಅರವಿಂದ ಪಾಟೀಲ ದಬಾಯಿಸುವ ಮೂಲಕ ಗುಂಡಾ ಸಂಸ್ಕೃತಿ ಮೆರೆದಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಡಾ.ಸೋನಾಲಿ ಸರ್ನೋಬತ್, ನನಗೆ ಅಧಿಕೃತವಾಗಿ ಖಾನಾಪುರ ತಾಲೂಕಿನ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ನಾನು ಬಿಜೆಪಿಯಲ್ಲಿ ಮೊದಲಿನಿಂದಲೂ ಇದ್ದೇನೆ. ನಿಮ್ಮಹಾಗೆ ಕೇವಲ ಟಿಕೆಟ್ ಆಸೆಗೆ ಬಂದವಳಲ್ಲ ನನಗೆ ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ಅಷ್ಟಕ್ಕೂ ಇದು ಶೃದ್ಧಾಂಜಲಿ ಸಭೆ. ಯಾರೂ ಭಾಗವಹಿಸಬಾರದು ಎಂದು ಇಲ್ಲ ಎಂದು ಖಡಕ್ ತಿರುಗೇಟು ನೀಡುವುದರ ಜೊತೆ ನಾಡು ನುಡಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಪಕ್ಷಕ್ಕೆ ನಾಡದ್ರೋಹಿ ಎಂಇಎಸ್ ಪಕ್ಷದಿಂದ ಬರುವ ಇಂತವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಹರಿಹಾಯ್ದರು.
ಡಾ.ಸೋನೀಲಿ ಸರ್ನೋಬತ್ ಖಾನಾಪುರ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಮಾಡುತ್ತಿರುವ ಜನೋಪಯೋಗಿ ಕೆಲಸಗಳಿಂದ ಅವರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಗುವ ಕುರಿತು ಅನುಮಾನ ಹೊಂದಿರುವ ಅರವಿಂದ ಪಾಟೀಲ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿರುವುದು ಬಿಜೆಪಿಗೆ ಹಾಗೂ ಮೂಲ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಇರುಸು ಮುರಿಸನ್ನುಂಟು ಮಾಡಿದೆ.