ಸಚಿವ ಉಮೇಶ್ ಕತ್ತಿ ವಿಧಿವಶ: ಹಿರಿಯ ನಾಯಕನ ಹೆಜ್ಜೆ ಗುರುತು.

ರಾಜ್ಯದ ಹಿರಿಯ ರಾಜಕಾರಣಿ, ಬಿಜೆಪಿ ನಾಯಕ ಹಾಲಿ ಅರಣ್ಯ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ  ಉಮೇಶ್ ಕತ್ತಿಯವರು ನಿಧನರಾಗಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಎಂಎಸ್‌ ರಾಮಯ್ಯ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಕರೆತರುವ ಮುನ್ನವೇ ಉಮೇಶ್ ಕತ್ತಿ ಕೊನೆಯುಸಿರೆಳೆದಿದ್ದಾರೆ. ಉಮೇಶ್ ಕತ್ತಿ ಅವರ ನಿಧನದ ಮೂಲಕ ಉತ್ತರ ಕರ್ನಾಟಕ ಭಾಗದ ಗಟ್ಟಿ ದನಿಯೊಂದು ಕಣ್ಮರೆಯಾದಂತೆ ಆಗಿದೆ. ಉಮೇಶ್ ಕತ್ತಿಯವರು ಪತ್ನಿ, ಮಕ್ಕಳು ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು, ಪಕ್ಷದ ಕಾರ್ಯಕರ್ತರು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

(ಬೆಳಗಾವಿ: ಆಹಾರ ಇಲಾಖೆಯ ಸಚಿವ ಉಮೇಶ್ ಕತ್ತಿ .ವಿಧಿವಶ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಬೆಳಗಾವಿ ಜಿಲ್ಲೆಯ ಸರ್ಕಾರಿ ಕಚೇರಿಗಳಿಗೂ ರಜೆ ಘೋಷಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.)

ಹಾಗಾದ್ರೆ ಉಮೇಶ್ ಕತ್ತಿ ಯಾರು? ಅವರ ವೈಯಕ್ತಿಕ ಜೀವನ ಹೇಗಿತ್ತು? ಅವರ ರಾಜಕೀ ಜೀವನ ಹೇಗಿತ್ತು? ಅವರ ರಾಜಕೀಯ ಜೀವನದ ಏಳು ಬೀಳುಗಳೇನು? 

ಮಾರ್ಚ್‌ 14, 1961ರಲ್ಲಿ ಹುಟ್ಟಿದ ಉಮೇಶ್ ಕತ್ತಿಯವರಿಗೆ ಇದೀಗ 61 ವರ್ಷ ವಯಸ್ಸಾಗಿತ್ತು. ತಂದೆ ವಿಶ್ವನಾಥ್ ಕತ್ತಿ ಕೂಡ ರಾಜ್ಯದ ಹಿರಿಯ ರಾಜಕಾರಣಿಯಾಗಿದ್ದರು. ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಸಹ ರಾಜಕೀಯದಲ್ಲಿದ್ದು, ಮಾಜಿ ಸಂಸದರು.

ಉಮೇಶ್ ಕತ್ತಿ ತಂದೆ ವಿಶ್ವನಾಥ್ ಕತ್ತಿ ಅಂದಿನ ರಾಜ್ಯ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದ್ದವರು. ದುರಾದೃಷ್ಟವಶಾತ್ ಅಂದು ವಿಶ್ವನಾಥ್ ಕತ್ತಿಯವರು ವಿಧಾನಸಭೆಯಲ್ಲೇ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದರು. ಅವರ ನಿಧನದ ಬಳಿಕ ಉಮೇಶ್ ಕತ್ತಿ ಅವರು ರಾಜಕೀಯ ಪ್ರವೇಶ ಮಾಡಿದ್ದರು. ವಿಪರ್ಯಾಸ ಅಂದ್ರೆ ಇಂದು ಅವರೂ ಕೂಡ ಅಧಿಕಾರದಲ್ಲಿ ಇರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಹುಕ್ಕೇರಿ ಕ್ಷೇತ್ರದಿಂದ ರಾಜಕೀಯ ಪ್ರವೇಶ:ಬೆಳಗಾವಿಯ ಕೆಎಲ್‌ಇ ಸೊಸೈಟಿಯ ಲಿಂಗರಾಜ್ ಕಾಲೇಜಿನಲ್ಲಿ ಪಿಯುಸಿ ತನಕ ವ್ಯಾಸಂಗ ಮಾಡಿರುವ ಉಮೇಶ್ ಕತ್ತಿಯವರಿಗೆ ರಾಜಕೀಯ ರಕ್ತಗತವಾಗಿ ಬಂದಿತ್ತು. ಹೀಗಾಗಿ ಹುಕ್ಕೇರಿ ಕ್ಷೇತ್ರದಿಂದ 1985ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಚುನಾವಣಾ ಕಣಕ್ಕಿಳಿದರು.

ಮೊದಲ ಪ್ರಯತ್ನದಲ್ಲೇ ಗೆಲುವು:ಉಮೇಶ್ ಕತ್ತಿಯವರು ಮೊದಲ ಪ್ರಯತ್ನದಲ್ಲೇ ಗೆಲುವು ಕಂಡರು. 1989ರಲ್ಲಿ ಜನತಾದಳಕ್ಕೆ ಬಂದು ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದರು. 1994ರಲ್ಲಿಯೂ ಗೆದ್ದು ಹ್ಯಾಟ್ರಿಕ್ ಬಾರಿಸಿದರು. 1999ರಲ್ಲಿ ಸಂಯುಕ್ತ ಜನತಾದಳ (ಜೆಡಿಯು) ನಿಂದ ಸ್ಪರ್ಧಿಸಿ 4ನೇ ಬಾರಿಯೂ ಗೆದ್ದರು.

2004ರಲ್ಲಿ ಮೊದ ಮತ್ತು ಕೊನೆಯ ಬಾರಿಗೆ ಸೋಲು

2004ರಲ್ಲಿ ಕಾಂಗ್ರೆಸ್‌ಗೆ ಬಂದ ಉಮೇಶ್ ಕತ್ತಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸೋಲು ಕಂಡರು. ರಾಜಕೀಯ ಜೀವನದಲ್ಲಿ ಇದೊಂದೇ ಚುನಾವಣೆಯಲ್ಲಿ ಉಮೇಶ್ ಕತ್ತಿ ಸೋಲು ಕಂಡಿರುವುದು. 2008ರಲ್ಲಿ ಜೆಡಿಎಸ್ ಸೇರಿದರು, ಬಳಿಕ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡರು.

ಆಪರೇಷನ್‌ ಕಮಲದ ಮೂಲಕ ಬಿಜೆಪಿ ಸೇರ್ಪಡೆ:ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 6ನೇ ಗೆಲುವು ಸಾಧಿಸಿದರು. 2013 ಹಾಗೂ 2018ರ ಚುನಾವಣೆಯಲ್ಲಿಯೂ ಹುಕ್ಕೇರಿ ಕ್ಷೇತ್ರದಿಂದ ಕಣಕ್ಕಿಳಿದು ಗೆಲುವು ಸಾಧಿಸಿದರು.

1996ರಲ್ಲಿ ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕಾರ:ಶಾಸಕರಾಗಿದ್ದ ತಂದೆ ವಿಶ್ವನಾಥ್ ಕತ್ತಿ ನಿಧನದಿಂದಾಗಿ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ 1996ರಲ್ಲಿ ಮೊದಲ ಬಾರಿಗೆ ಸಕ್ಕರೆ ಖಾತೆ ಸಚಿವರಾದರು. 2008ರಲ್ಲಿ ತೋಟಗಾರಿಕೆ ಮತ್ತು ಬಂಧಿಖಾನೆ ಸಚಿವರಾದರು.

ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಕೀರ್ತಿ:2010ರಲ್ಲಿ ಕೃಷಿ ಸಚಿವರಾದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಉಮೇಶ್ ಕತ್ತಿ ಅವರದ್ದು. 2019ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸೇರಿದರು, ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಿಕ್ಕಿತು.

ಪ್ರಸ್ತುತ ಆಹಾರ ಮತ್ತು ನಾಗರಿಕ ಇಲಾಖೆ, ಅರಣ್ಯ ಇಲಾಖೆ ಸಚಿವರಾಗಿ ಸೇವೆ :2021ರಲ್ಲಿಯೂ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದರು. ಅರಣ್ಯ ಇಲಾಖೆ ಖಾತೆ ಸಚಿವರಾಗಿದ್ದರು.

6 ಪಕ್ಷ, 9 ಬಾರಿ ಸ್ಪರ್ಧೆ, 8 ಬಾರಿ ಗೆಲುವು:ಉಮೇಶ್ ಕತ್ತಿಯವರು ಇದುವರೆಗೂ ತಮ್ಮ ರಾಜಕೀಯ ಜೀವನದಲ್ಲಿ 9 ಸಲ ಚುನಾವಣೆ ಎದುರಿಸಿದ್ದರು. ಈ ಪೈಕಿ 8 ಬಾರಿ ಗೆದ್ದು ದಾಖಲೆ ಬರೆದಿದ್ದರು. ಜೊತೆಗೆ ನಾಲ್ಕು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನೂ ವಿಶೇಷ ಅಂದರೆ ತಂದೆ ವಿಶ್ವನಾಥ್ ಕತ್ತಿ ಅವರ ನಿಧನದ ಬಳಿಕ 1985ರಲ್ಲಿ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ, ಆರು ಪಕ್ಷಗಳನ್ನು ಬದಲಿಸಿದ್ದಾರೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹ:ಉಮೇಶ್ ಕತ್ತಿ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಅಂತ ಹೇಳುತ್ತಲೇ ಬಂದಿದ್ದರು. ಈ ಬಗ್ಗೆ ಹೈಕಮಾಂಡ್ ಸೂಚನೆ ನೀಡಿದ್ದರೂ ಕೂಡ ಈ ವಿಚಾರದಲ್ಲಿ ಅವರ ನಿಲುವು ಅಚಲವಾಗಿತ್ತು. ನಾನು ಸಿಎಂ ಆಗುತ್ತೇನೆ ಅದು ಉತ್ತರ ಕರ್ನಾಟಕ್ಕೆ ಅಂತ ಹೇಳುತ್ತಿದ್ದರು. ಜೊತೆಗೆ ನಾನು ಸಾಯುವವರೆಗೂ ಅಧಿಕಾರದಲ್ಲಿ ಇರುತ್ತೇನೆ ಅಂತ ಹೇಳುತ್ತಿದ್ದರು. ಅದೇ ರೀತಿ ಸಚಿವರಾಗಿದ್ದು, ಅಧಿಕಾರದಲ್ಲಿ ಇರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ.

 

 

 

 

 

(18NEWS)

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";