ಬೈಲಹೊಂಗಲ: ತಾಲೂಕಿನ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಎಸ್.ಭರಮಣ್ಣವರ ಮಾತನಾಡಿ ಕ್ರೀಡಾಪಟುಗಳು ಉತ್ತಮ ಆಹಾರಾಭ್ಯಾಸ ಹಾಗೂ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದರು. ಮೇಜರ್ ಧ್ಯಾನಚಂದ್ ಅವರು ಸಾಕಷ್ಟು ಕಷ್ಟಗಳನ್ನು ಛಲದಿಂದ ಎದುರಿಸಿ ಹಾಕಿ ಮಾಂತ್ರಿಕ ಎಂದೇ ಪ್ರಸಿದ್ದರಾದವರು. ಅವರು ಅಪ್ಪಟ ದೇಶಪ್ರೇಮಿಯಾಗಿದ್ದು ಒಲಂಪಿಕ್ಸ್ ನಲ್ಲಿ ಹಾಕಿಯಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಗೆಲುವು ತಂದುಕೊಡುವಲ್ಲಿ ಕಾರಣೀಕರ್ತರು ಎಂದು ಅವರು ಅಭಿಪ್ರಾಯಪಟ್ಟರು.
ಶಾಲೆಯ ಹಳೆಯ ವಿದ್ಯಾರ್ಥಿನಿ ಪೂಜಾ ನಿಂಬಾಳ್ಕರ ವಿಶೇಷವಾಗಿ ಬಿಡಿಸಿದ ಮೇಜರ್ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿಶ್ವವಿಖ್ಯಾತ ಹಾಕಿಪಟುವಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಕ್ರೀಡೆಯಲ್ಲಿ ಉತ್ಸಾಹ ಮತ್ತು ಆತ್ಮವಿಶ್ವಾಸ ಗೆಲುವಿನ ಮೂಲ ಸಾಧನಗಳು ಎಂದು ಹೇಳಿದರು. ಧ್ಯಾನಚಂದ್ ಅವರಂತಹ ಮಹಾನ ಕ್ರೀಡಾಪಟು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅವರ ಅಭೂತಪೂರ್ವ ಸಾಧನೆ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ಅವರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಧ್ಯಾನಚಂದ್ ಅವರ ಜೀವನ, ಸಾಧನೆ, ಕ್ರೀಡೆಗಳ ಮಹತ್ವದ ಬಗ್ಗೆ ವಿದ್ಯಾರ್ಥಿನಿಯರಾದ ಕಾವೇರಿ ಬೋಬಡೆ, ಸಹನಾ ಶೀಗಿಹಳ್ಳಿಮಠ, ಸಾಕ್ಷಿ ಹಿರೇಮಠ, ಪೂಜಾ ಸೊಗಲದ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ವಿನಾಯಕ ಬಡಿಗೇರ, ಸದಸ್ಯರಾದ ಮಹಾಂತೇಶ ಸೊಗಲದ, ಶಿಕ್ಷಕರಾದ ಜಗದೀಶ ನರಿ, ಸುನೀಲ ಭಜಂತ್ರಿ, ಶಿವಾನಂದ ಬಳಿಗಾರ, ಶ್ರೀಪಾಲ ಚೌಗಲಾ, ವೀರೇಂದ್ರ ಪಾಟೀಲ, ರೇಖಾ ಸೊರಟೂರ, ಹೇಮಲತಾ ಪುರಾಣಿಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತನುಜಾ ಬಡಿಗೇರ ಪ್ರಾರ್ಥಿಸಿದರು. ಚೈತ್ರಾ ಸೊಗಲದ ನಿರೂಪಿಸಿದರು. ಐಶ್ವರ್ಯ ಕುಲಕರ್ಣಿ ಸ್ವಾಗತಿಸಿದರು. ಸಾವಿತ್ರಿ ಹೊಂಗಲ ವಂದಿಸಿದರು.