‘ಇನ್‌ಸ್ಟಾ ಗ್ರಾಂ’ ಪ್ರೇಮ ಜೀವಕ್ಕೇ ಕುತ್ತು ತಂತು

ಉಮೇಶ ಗೌರಿ (ಯರಡಾಲ)

ಬೆಂಗಳೂರು:ಸಾಮಾಜಿಕ ಜಾಲತಾಣಗಳ ಸಂಬಂಧಗಳು ಆರಂಭದಲ್ಲಿ ಸಿಹಿಯಾಗಿದ್ದರೂ ಕೆಲವೇ ವರ್ಷಗಳಲ್ಲಿ ಕಹಿಯಾಗಿ ಪರಿಣಮಿಸಿ ಹಲವರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಖಾಸಗಿ ವಿಡಿಯೊ ಬ್ಲ್ಯಾಕ್‌ಮೇಲ್‌ ತಂತ್ರಕ್ಕೆ ಒಳಗಾಗಿ ಸಂಕಷ್ಟ ಸಿಲುಕುತ್ತಿದ್ದಾರೆ.

ಈ ಅಂಶಗಳಿಗೆ ಪುಷ್ಟಿ ನೀಡುವಂತೆ ಇನ್‌ಸ್ಟಾ ಗ್ರಾಂ ಪ್ರೀತಿ ಮುರಿದು ಬಿದ್ದ ಕಾರಣಕ್ಕೆ ಸಾಫ್ಟ್‌ವೇರ್‌ ಎಂಜಿನಿಯರ್‌ ನಮ್ರತಾ (29) ಎಂಬುವವರು ಬೆಂಗಳೂರಿನಲ್ಲಿ ಜೀವ ಕಳೆದುಕೊಂಡಿದ್ದಾರೆ. ನಮ್ರತಾ ಅವರ ಸಾವಿಗೆ ಕಾರಣವಾದ ಆರೋಪದ ಮೇರೆಗೆ ಟೆಕ್ಕಿ ವಿನಾಯಕ ಶಾನ್‌ಭೋಗ್‌ (30) ಕಾನೂನು ಉರುಳಿಗೆ ಸಿಲುಕಿಕೊಂಡಿದ್ದಾರೆ.

ದಾವಣಗೆರೆ ಮೂಲದ ಟೆಕ್ಕಿ ವಿನಾಯಕ್‌ ಹಾಗೂ ನಮ್ರತಾ ಇನ್‌ಸ್ಟಾ ಗ್ರಾಂ ಮೂಲಕ ಪರಿಚಯವಾಗಿ ಪ್ರೀತಿಸುತ್ತಿದ್ದರು. ಚೆನ್ನೈ, ಗೋವಾ, ಮೈಸೂರು ಸೇರಿದಂತೆ ಹಲವು ಕಡೆ ಪ್ರವಾಸ ಕೂಡ ಹೋಗಿ ಬಂದಿದ್ದರು. ಈ ವಿಚಾರ ನಮ್ರತಾ ತಾಯಿ ಜಯಮ್ಮ ಅವರಿಗೂ ಗೊತ್ತಿತ್ತು. ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದ ವಿನಾಯಕ್‌ ಇತ್ತೀಚೆಗೆ ಅಂತರ ಕಾಯ್ದುಕೊಂಡು ನಿರ್ಲಕ್ಷ್ಯ ವಹಿಸಿದ ಕಾರಣ ನಮ್ರತಾ ಆಗಸ್ಟ್‌ 6ರಂದು ಆತ್ಮಹತ್ಯೆ ಮಾಡಿಕೊಂಡಳು.

”ಮಗಳ ಸಾವಿಗೆ ಆಕೆಯನ್ನು ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ವಿನಾಯಕ ಕಾರಣ,” ಎಂದು ನಮ್ರತಾ ತಾಯಿ ನೀಡಿದ ದೂರಿನ ಮೇಲೆ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ‘ಬಾಂಧವ್ಯ’ಗಳು ದುರಂತಗಳಿಗೆ ಕಾರಣವಾಗುತ್ತಿರುವ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ಹೀಗಾಗಿ ಇನ್‌ಸ್ಟಾ ಗ್ರಾಂ, ಫೇಸ್‌ಬುಕ್‌ ಪ್ರೇಮಸಾಂಗತ್ಯ ಬೆಳೆಸುವ ಮುನ್ನ ಎಚ್ಚರ ಅಗತ್ಯವಾಗಿದೆ.

Share This Article
";