ಬೆಳಗಾವಿ: ಸಮೀಪದ ಹಲಗಾದಲ್ಲಿ ಶುಕ್ರವಾರ ಬೈಕ್ ನಲ್ಲಿ ತೆರಳುತ್ತಿದ್ದ ಜ್ಯೋತಿಷಿ ಗದಿಗಯ್ಯ ಹಿರೇಮಠ ಅವರ ರುಂಡ ಕತ್ತರಿಸಿ ಕೊಲೆಗೈದ ಪ್ರಕರಣದ ಆರೋಪಿಯನ್ನು ಪೊಲೀಸರು ಘಟನೆ ನಡೆದ 24 ಗಂಟೆಗಳಲ್ಲಿ ಬಂಧಿಸಿದ್ದಾರೆ. ಕೊಂಡಸಕೊಪ್ಪ ಗ್ರಾಮದ ವಿಠಲ ಸಾಂಬ್ರೇಕರ (32) ಕೊಲೆಗೈದ ಆರೋಪಿಯಾಗಿದ್ದು ಘಟನೆ ನಂತರ ತಲೆಮರೆಸಿಕೊಂಡಿದ್ದ ಈತನಿಗಾಗಿ ಪೊಲೀಸರು ಶೋಧ ನಡೆಸಿದ್ದರು.
ವೃತ್ತಿಯಲ್ಲಿ ಜ್ಯೋತಿಷಿಯಾಗಿದ್ದ ಗದಿಗಯ್ಯ ಹಿರೇಮಠ ಹಾಗೂ ಆರೋಪಿ ವಿಠಲ ಆಪ್ತ ಸ್ನೇಹಿತರಾಗಿದ್ದು. ಎರಡು ವರ್ಷಗಳ ಹಿಂದೆ ವಿಠಲ 2 ಲಕ್ಷ ರೂಪಾಯಿಯನ್ನು ಗದಿಗಯ್ಯಗೆ ನೀಡಿದ್ದನೆನ್ನಲಾಗಿದೆ. ಆದರೆ ಹಣ ಪಡೆದ ಗದಿಗಯ್ಯ ಅದನ್ನು ಮರಳಿಸುವ ಮಾತೇ ಆಡುತ್ತಿರಲಿಲ್ಲ.
ಕಳೆದ ಆರು ತಿಂಗಳಿಂದ ಪದೇಪದೆ ಹಣ ಕೇಳಿದರೂ ಗದಿಗಯ್ಯ ಮಾತ್ರ ಹಿಂದಿರುಗಿಸುವ ಮನಸ್ಸನ್ನೇ ಹೊಂದಿರಲಿಲ್ಲ ಎನ್ನಲಾಗಿದೆ. ಇದರಿಂದ ಗದಿಗಯ್ಯನ ಮೇಲೆ ತೀವ್ರ ಆಕ್ರೋಶಗೊಂಡ ವಿಠಲ ಹಣ ಹಿಂದಿರುಗಿಸದ ಗದಿಗೆಯ್ಯನನ್ನು ಮುಗಿಸಯೇ ಬಿಡಬೇಕೆಂಬ ನಿರ್ಧಾರ ಮಾಡಿದ್ದಾನೆ.
ಶುಕ್ರವಾರ ಕೊಂಡಸಕೊಪ್ಪದಿಂದ ಧಾರವಾಡಕ್ಕೆ ಹೋಗಿ ಅಲ್ಲಿಂದ ರೈಲ್ವೆ ಮೂಲಕ ಚೆನ್ನೈಗೆ ಹೊರಟಿದ್ದ ಗದಿಗೆಯ್ಯ ತನ್ನ ಕೊಲೆಯ ಸುಳಿವೇ ಇಲ್ಲದೆ ವಿಠಲನನ್ನು ತನ್ನೊಂದಿಗೆ ಸಾಂಬ್ರಾಕ್ಕೆ ಕರೆದೊಯ್ಯುತ್ತಿದ್ದನು. ಇದಕ್ಕೂ ಮುನ್ನ ಕೆಲ ವಸ್ತುಗಳನ್ನು ಖರೀದಿಸಿದ್ದು ವಿಠಲನಿಗೂ ಬಟ್ಟೆಗಳನ್ನು ಕೊಡಿಸಿದ್ದನಂತೆ.
ಕೊಲೆಗೆ ಹೊಂಚು ಹಾಕಿ ಕುಳಿತಿದ್ದ ವಿಠಲ ಬೈಕ್ ಹಿಂಬದಿ ಸೀಟಲ್ಲಿ ಕುಳಿತಿದ್ದು ಗದಿಗೆಯ್ಯ ಬೈಕ್ ಚಲಾಯಿಸುತ್ತಿದ್ದ. ಸಾಂಬ್ರಾದಿಂದ ಸಿಂದೊಳ್ಳಿಗೆ ಬಂದು ಅಲ್ಲಿಂದ ಕೊಂಡಸಕೊಪ್ಪಕ್ಕೆ ತೆರಳುತ್ತಿದ್ದಾಗ ಹಲಗಾ ಸಮೀಪದ ತಾರಿಹಾಳ ಕ್ರಾಸ್ ಬಳಿ ದುರದೃಷ್ಟ ಎಂಬಂತೆ ಬೈಕ್ ಕೆಟ್ಟು ನಿಂತ ವೇಳೆ ವಿಠಲ ಮಾಂಸ ಕತ್ತರಿಸುವ ಕತ್ತಿಯಿಂದ ಎರಡು ಬಾರಿ ಗದಿಗೆಯ್ಯನ ಕುತ್ತಿಗೆಗೆ ಬಲವಾಗಿ ಇರಿದಿದ್ದಾನೆ. ಈ ವೇಳೆ ಗದುಗಯ್ಯ ನೆಲಕ್ಕುರುಳಿದರೂ ಬಿಡದ ವಿಠಲ ಪದೇಪದೆ ಇರಿದು ರುಂಡವನ್ನೇ ಕತ್ತರಿಸಿ ತೃಪ್ತಿಪಟ್ಟಿದ್ದಾನೆ.ಗದಿಗೆಯ್ಯ ಮೃತಪಟ್ಟಿರುವುದು ಖಾತ್ರಿಪಡಿಸಿಕಳ್ಳುತ್ತಲೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದ.