ವಿಜಯನಗರ: ತರಬೇತಿ ನಿರತ 500 ಐಎಎಸ್ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರಿಗೆ ಪಾಠ ಮಾಡುವ ಅವಕಾಶ ಸಿಕ್ಕಿದೆ. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನ ಕುರಿತು ಅಧಿಕಾರಿಗಳಿಗೆ ಗ್ರಾಪಂ ಅಧ್ಯಕ್ಷರು ಮಾಹಿತಿ ನೀಡಲಿದ್ದಾರೆ.
ಅಂದಹಾಗೆ ಆ ಅಧ್ಯಕ್ಷರ ಹೆಸರು ಮಹೇಂದ್ರ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ದೇವಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ.
ಮಹೇಂದ್ರ ಅವರು ಆ.30ರಂದು ಉತ್ತಾರಾಖಂಡ ರಾಜ್ಯದ ಮನ್ಸೂರಿಯಲ್ಲಿ ತರಬೇತಿ ನಿರತ ಐಎಎಸ್ ಅಧಿಕಾರಿಗಳಿಗೆ ಪಾಠ ಮಾಡಲಿದ್ದಾರೆ!
ಡಿಪ್ಲೊಮಾ ಪದವೀಧರರಾದ ಮಹೇಂದ್ರ ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಾರಣಾಂತರಗಳಿಂದ ಕೆಲಸ ಬಿಟ್ಟು ಸ್ವಗ್ರಾಮದಲ್ಲಿ ಸಮಾಜ ಸೇವೆ ಮಾಡಲು ಮುಂದಾಗಿ ರಾಜಕೀಯಕ್ಕೆ ಕಾಲಿಟ್ಟರು. ಇದೀಗ ಗ್ರಾಪಂ ಅಧ್ಯಕ್ಷರಾಗಿರುವ ಇವರು ಗುಜುನೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಂದ ಮೀನಿನಾಕಾರದ ಕೆರೆ ನಿರ್ಮಾಣ ಮಾಡಿಸಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.
ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಡಿ ತಮ್ಮ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ನರೇಗಾ ಯೋಜನೆಯಡಿ ತಾಲೂಕಿನ 14 ಕಡೆ ಅಮೃತ ಸರೋವರ ನಿರ್ಮಿಸಲಾಗುತ್ತಿದೆ.
ನರೇಗಾ ಯೋಜನೆಯಡಿ ಕ್ಯಾಚ್ ದಿ ರೇನ್, ಜಲಶಕ್ತಿ ಅಭಿಯಾನ, ಅಮೃತ ಸರೋವರ ಕೆರೆ ನಿರ್ಮಾಣ, ಸರ್ಕಾರಿ ಶಾಲೆ- ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರಕ್ಕಾಗಿ ಕೈತೋಟ ನಿರ್ಮಾಣ. ಹಳ್ಳಿ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಜಲ ಜೀವನ್ ಮಿಷನ್, ಹಳ್ಳಿಗಳಲ್ಲೂ ಡಿಜಿಟಲ್ ಗ್ರಂಥಾಲಯ, ಮಾದರಿ ಶಾಲೆ, ಮಹಿಳಾ ಸಬಲೀಕರಣಕ್ಕೆ ನರ್ಸರಿ ಅಭಿವೃದ್ಧಿ, ಇಕೋ ಪಾರ್ಕ್, ಇಂಗು ಗುಂಡಿ, ಮಳೆ ಕೊಯ್ಲು, ಕಲ್ಯಾಣಿಗಳ ಪುನಶ್ಚೇತನ, ಕೆರೆಗಳ ಅಭಿವೃದ್ಧಿ ಸೇರಿ ನಾನಾ ಕಾಮಗರಿಗಳ ಅನುಷ್ಠಾನದ ಬಗ್ಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಬಲ್ಲ ಮಹೇಂದ್ರ ಅವರು ತರಬೇತಿ ನಿರತ ಐಎಎಸ್ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಲಿದ್ದಾರೆ.