ಸ್ವಾತಂತ್ರ್ಯ ಭಾರತದ ಹತ್ತು ಪ್ರಮುಖ ವ್ಯಕ್ತಿಗಳ ಅವಲೋಕನ.

khushihost

1947 – 2022 ರ ನಡುವಿನ ಪ್ರಮುಖ ಸ್ವಾತಂತ್ರ್ಯ ಭಾರತದ ಹತ್ತು ಪ್ರಮುಖ ವ್ಯಕ್ತಿಗಳ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಒಂದು ಅವಲೋಕನ.

1) ಮಹಾತ್ಮ ಗಾಂಧಿ: ನಿಸ್ಸಂದೇಹವಾಗಿ ಅದು ಮಹಾತ್ಮ ಗಾಂಧಿ. ಇಡೀ ವಿಶ್ವ ಸಮುದಾಯಕ್ಕೆ ಸತ್ಯ ಶಾಂತಿ ಉಪವಾಸ ಸತ್ಯಾಗ್ರಹ ಸರಳತೆಯ ಬದುಕು ಮತ್ತು ಹೋರಾಟದ ಮಾರ್ಗಗಳನ್ನು ತೋರಿಸಿದ ನಿಜವಾದ ದಾರ್ಶನಿಕ.

2) ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್: ನಿಸ್ಸಂಶಯವಾಗಿ ಅದು ಅಂಬೇಡ್ಕರ್. ತಮ್ಮ ಅತಿಮಾನುಷ ಶ್ರಮ ಶ್ರದ್ಧೆ ಅಧ್ಯಯನ ಚಿಂತನೆ ವಿಶಾಲ ಮನೋಭಾವದ ಜ್ಞಾನದಿಂದ ವೈವಿಧ್ಯಮಯ ಬೃಹತ್ ಭಾರತಕ್ಕೆ ಸ್ವಾತಂತ್ರ್ಯ ಸಮಾನತೆಯ ಸಂವಿಧಾನಾತ್ಮಕ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ ಮಹಾನ್ ಚೇತನ.

3) ಜವಹರಲಾಲ್ ನೆಹರು: ನಿಸ್ಸಂಕೋಚವಾಗಿ ಇದಕ್ಕೆ ನೆಹರು ಅರ್ಹರು. ಆಧುನಿಕ ಭಾರತದ ಅಧ್ಬುತ ಪರಿಕಲ್ಪನೆಗೆ ಗಟ್ಟಿಯಾದ ಮತ್ತು ಆಳವಾದ ಅಡಿಪಾಯ ಹಾಕಿದ ದೂರದೃಷ್ಟಿಯ ಪ್ರಾಮಾಣಿಕ ಆಡಳಿತಗಾರ. ಇಂದಿನ ಅನೇಕ ದೌರ್ಬಲ್ಯಗಳ ನಡುವೆಯೂ ಭಾರತ ವಿಶ್ವ ಗುರುವಿನ ಕನಸು ಕಾಣಲು ನೆಹರು ಬೆಳೆಸಿದ ಆಲದ ಮರ ಕಾರಣ.

4) ಎಂ ಎಸ್ ಸ್ವಾಮಿನಾಥನ್ ಮತ್ತು ವರ್ಗೀಸ್ ಕುರಿಯನ್: ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿಯ ಹರಿಕಾರರಾದ ಇವರುಗಳು ನಾಯಕತ್ವದ ಚಿಂತನೆಗಳು ಖಂಡಿತವಾಗಿಯೂ ಭಾರತದ ಜನಸಾಮಾನ್ಯರ ಬದುಕನ್ನು ಆರ್ಥಿಕವಾಗಿ ಬದಲಾಯಿಸಿ ಸ್ವಲ್ಪ ಉತ್ತಮ ಮಟ್ಟಕ್ಕೆ ಏರಿಸಿವೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಮತ್ತು ಪಶುಸಂಗೋಪನೆ ಅನೇಕರನ್ನು ಕಡು ಬಡತನದಿಂದ ಕೆಳ ಮಧ್ಯಮ ವರ್ಗಕ್ಕೆ ಮೇಲೆತ್ತಿದೆ.

5) ಟಿ. ಎನ್. ಶೇಷನ್: ಯಾರು ಏನೇ ಹೇಳಿದರು ಚುನಾವಣಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನ ಗೊಳಿಸಿದ ಶ್ರೇಯ ಶೇಷನ್ ಅವರಿಗೆ ಸಲ್ಲಬೇಕು. ರಾಜಕಾರಣಿಗಳ ಏಕಮುಖ ಆಡಳಿತ ವ್ಯವಸ್ಥೆಗೆ ಸೆಡ್ಡು ಹೊಡೆದು ಧೈರ್ಯವಾಗಿ ಕಾನೂನನ್ನು ದೊಡ್ಡವರಿಗೆ ಜಾರಿಗೊಳಿಸಿ ಸ್ವಲ್ಪ ಮಟ್ಟಿಗೆ ಚುನಾವಣಾ ವ್ಯವಸ್ಥೆ ಪಾರದರ್ಶಕವಾಗಲು ಮತ್ತು ಪ್ರಜಾತಂತ್ರ ವ್ಯವಸ್ಥೆ ಗಟ್ಟಿಯಾಗಲು ಶೇಷನ್ ಕಾರಣರು.

6) ಮನಮೋಹನ್ ಸಿಂಗ್: ದೇಶದ ಆರ್ಥಿಕ ಅಭಿವೃದ್ಧಿ ತೀವ್ರ ಗತಿಯಲ್ಲಿ ಮೇಲೇರಲು ವಿಶ್ವ ಮಟ್ಟದ ಆರ್ಥಿಕ ತಜ್ಞ ಡಾಕ್ಟರ್ ಮನಮೋಹನ್ ಸಿಂಗ್ ಕಾರಣರು ಎಂಬುದು ನಿರ್ವಿವಾದ. ಜಾಗತೀಕರಣಕ್ಕೆ ಬಾಗಿಲು ತೆರೆದು ಖಾಸಗೀಕರಣಕ್ಕೆ ದಾರಿ ಮಾಡಿಕೊಟ್ಟು ಒಂದಷ್ಟು ಶೋಷಣೆಗೆ ದಾರಿ ಮಾಡಿಕೊಟ್ಟ ಆರೋಪ ಇದ್ದರೂ ಆ ಪರಿವರ್ತನೆಯಲ್ಲಿ ಮಾನವೀಯ ಮುಖವನ್ನು ಸಹ ಮರೆಯದೆ ಅನುಷ್ಠಾನ ಗೊಳಿಸಿದ ಪ್ರಾಮಾಣಿಕರು ಮನಮೋಹನ್ ಸಿಂಗ್.

7) ಅಟಲ್ ಬಿಹಾರಿ ವಾಜಪೇಯಿ: ಸೈದ್ಧಾಂತಿಕವಾಗಿ ಅಲ್ಲಿಯವರೆಗಿನ ಆಡಳಿತದ ಭಿನ್ನ ಆಲೋಚನೆ ಹೊಂದಿದ್ದರೂ ಸಹ ತಮ್ಮ ತಾಳ್ಮೆ ಅನುಭವ ಮತ್ತು ಮುತ್ಸದ್ದಿತನದಿಂದ ದೇಶವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಮೇಧಾವಿ ವಾಜಪೇಯಿ. ದೇಶದ ರಕ್ಷಣೆ ಮತ್ತು ರಸ್ತೆಗಳ ಅಭಿವೃದ್ಧಿಯಲ್ಲಿ ದೂರದೃಷ್ಟಿಯ ಚಿಂತನೆ ಹೊಂದಿದ್ದ ಸಂಭಾವಿತರು.

8) ಎ ಪಿ ಜೆ ಅಬ್ದುಲ್ ಕಲಾಂ:  ರಾಷ್ಟ್ರಪತಿಯೊಬ್ಬರು ಹೀಗೂ ಕಾರ್ಯನಿರ್ವಹಿಸಬಹುದು ಮತ್ತು ಒಬ್ಬ ಅತ್ಯುತ್ತಮ ಶಿಕ್ಷಕರ ರೀತಿ ಎಲ್ಲಾ ವಿಧ್ಯಾರ್ಥಿಗಳು – ಯುವಕರು – ಜನಪ್ರತಿನಿಧಿಗಳು ಮತ್ತು ಸಾಮಾನ್ಯ ಜನರಿಗೂ ಸ್ಪೂರ್ತಿದಾಯಕ ವಾಗಬಹುದು ಎಂಬುದನ್ನು ಇಡೀ ದೇಶಕ್ಕೆ ಮನವರಿಕೆ ಮಾಡಿಕೊಟ್ಟವರು ಈ ಮಿಸೈಲ್ ಮ್ಯಾನ್. ಖಂಡಿತ ಈ ದೇಶದ ಮಹತ್ವದ ವ್ಯಕ್ತಿಗಳಲ್ಲಿ ಇವರಿಗೂ ಒಂದು ಸ್ಥಾನವಿದೆ.

9) ಜಯಪ್ರಕಾಶ್ ನಾರಾಯಣ್: ಸ್ವಾತಂತ್ರ್ಯ ನಂತರ ಒಂದು ಭ್ರಷ್ಟ ವ್ಯವಸ್ಥೆಯ ವಿರುದ್ಧ ಇಡೀ ಜನಸಮುದಾಯಗಳನ್ನು ಒಗ್ಗೂಡಿಸಿ ಬಲಿಷ್ಠ ಸರ್ಕಾರವನ್ನೇ ತಮ್ಮ ನಿಸ್ವಾರ್ಥ – ಪ್ರಾಮಾಣಿಕ ಹೋರಾಟದಿಂದ ಬದಲಾಯಿಸಿದ ಧೀಮಂತ ಹೋರಾಟಗಾರರು ಜೆ ಪಿ ಎಂದೇ ಹೆಸರಾದ ಜಯಪ್ರಕಾಶ್ ನಾರಾಯಣ್. ಅಂದಿನ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವದಲ್ಲಿ ಜನರ ಶಕ್ತಿಯನ್ನು ದೇಶಕ್ಕೆ ಮನವರಿಕೆ ಮಾಡಿಕೊಟ್ಟು ಒಂದು ಬೃಹತ್ ಕ್ರಾಂತಿಕಾರಿ ಚಳವಳಿಗೆ ಮತ್ತು ಆ ಮೂಲಕ ಭವಿಷ್ಯದ ಪರಿವರ್ತನೆಗೆ ಒಂದು ಮಾರ್ಗವನ್ನು ಹುಟ್ಟು ಹಾಕಿದರು.

10) ಮದರ್‌ ತೆರೇಸಾ ಮತ್ತು ರತನ್ ಟಾಟಾ: ಪ್ರೀತಿ ತುಂಬಿದ ನಿಸ್ವಾರ್ಥ ಸೇವೆಗೆ ಮತ್ತೊಂದು ಹೆಸರನ್ನು ಬಿಟ್ಟು ಹೋದವರು ಮದರ್‌ ತೆರೇಸಾ. ಬೀದಿ ಬದಿಯ ಕುಷ್ಠರೋಗಿಗಳಿಗೆ ತಾಯಿಯಾಗಿ ದಾದಿಯಾಗಿ ಸೇವೆ ಎಂದರೆ ಇದೇ ಎಂದು ಭಾರತದ ಜನರಿಗೆ ಇಂದಿಗೂ ಸ್ಪೂರ್ತಿಯ ತಾಯಿ ಮದರ್ ತೆರೇಸಾ.

ವ್ಯಾಪಾರ ವಹಿವಾಟು ಉದ್ಯಮದಲ್ಲಿಯೂ ಮೌಲ್ಯಗಳೊಂದಿಗೆ ದೇಶ ಸೇವೆ ಮಾಡುತ್ತಾ ಆರ್ಥಿಕ ಅಭಿವೃದ್ಧಿ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ರತನ್ ಟಾಟಾ. ಈಗಿನ ಕೆಲವು ದೊಡ್ಡ ಉದ್ಯಮಿಗಳಂತೆ ಯಾವುದೇ ಮೌಲ್ಯವಿಲ್ಲದೇ – ದೇಶದ ಜನರ ಬಗ್ಗೆ ಕರುಣೆ ಇಲ್ಲದೇ ಕೇವಲ ಹಣ ಕೇಂದ್ರಿತ ತಮ್ಮ ‌ಸಾಮ್ರಾಜ್ಯವನ್ನು ವಿಸ್ತರಿಸುವುದೇ ಗುರಿಯಾಗದೆ ಸಾಕಷ್ಟು ಮೌಲ್ಯಯುತ ಉದ್ಯಮವನ್ನು ಈಗಲೂ ನಡೆಸುತ್ತಿರುವವರು ರತನ್ ಟಾಟಾ. ದೇಶ ಇವರನ್ನು ಮರೆಯುವ ಹಾಗಿಲ್ಲ.

ಮೇಲೆ ಹೆಸರಿಸಿದ ಎಲ್ಲರೂ ಸಾರ್ವಜನಿಕ ಜೀವನದಲ್ಲಿ ಮೇಲ್ನೋಟಕ್ಕೆ ಬಹುತೇಕ ಶುದ್ಧ ಚಾರಿತ್ರ್ಯ ಹೊಂದಿದವರು ಎಂದು ಭಾವಿಸುತ್ತೇನೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಸಹ ಮಹತ್ವದ ವ್ಯಕ್ತಿಗಳೇ ಆದರೂ ಅವರದು ಸ್ವಲ್ಪ ಮಟ್ಟಿಗೆ ಸೀಮಿತ ಸಮಯ ಮತ್ತು ವ್ಯಾಪ್ತಿಯ ಮಿತಿ ಇದೆ. ಹೋಮಿ ಜಹಂಗೀರ್ ಬಾಬಾ ಮತ್ತು ಜಗದೀಶ್ ಚಂದ್ರ ಬೋಸ್ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

ಇಂದಿರಾಗಾಂಧಿ ಮತ್ತು ನರೇಂದ್ರ ಮೋದಿಯವರ ಹೆಸರು ಪ್ರಸ್ತಾಪಿಸಬಹುದಾದರೂ ಇಬ್ಬರು ಸಂಪೂರ್ಣ ಪರಿಶುದ್ಧತೆ ಪಡೆದಿಲ್ಲ. ಇಬ್ಬರದೂ ಸರ್ವಾಧಿಕಾರಿ ಧೋರಣೆ. ತಮಗೆ ಇಷ್ಟವಿಲ್ಲದ ಸರ್ಕಾರಗಳನ್ನು ವಾಮ ಮಾರ್ಗದಿಂದ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಕಿತ್ತು ಬಿಸಾಡಿದ್ದಾರೆ. ಇಂದಿರಾಗಾಂಧಿ ನೇರ ಭ್ರಷ್ಟಾಚಾರದಲ್ಲಿ ಭಾಗಿಯಾದರೆ ನರೇಂದ್ರ ಮೋದಿ ಪರೋಕ್ಷ ಭ್ರಷ್ಟಾಚಾರದಲ್ಲಿ ಭಾಗಿಯಾದವರೆ. ತಮ್ಮ ಅಧಿಕಾರವನ್ನು ಎಲ್ಲಾ ಮಹತ್ವಾಕಾಂಕ್ಷೆಗಳ ನಡುವೆ ದುರುಪಯೋಗ ಪಡಿಸಿಕೊಂಡಿದ್ದಾರೆ.

ಇದು ಒಂದು ಸೀಮಿತ ಅಭಿಪ್ರಾಯ. ಇನ್ನೂ ಸಾಕಷ್ಟು ವ್ಯಕ್ತಿಗಳು ನಿಮ್ಮ ಮನಸ್ಸಿನಲ್ಲಿ ಸುಳಿದಾಡಬಹುದು. ಇದಕ್ಕಿಂತ ಒಳ್ಳೆಯ ವ್ಯಕ್ತಿಗಳು ನಿಮ್ಮ ಗಮನಕ್ಕೆ ಬರಬಹುದು. ಇಲ್ಲಿರುವವರ ಬಗ್ಗೆ ಅಸಮಾಧಾನವೂ ಇರಬಹುದು. ಆ ಎಲ್ಲವನ್ನೂ ಸ್ವಾಗತಿಸುತ್ತಾ.

ನಮ್ಮ ನಮ್ಮ ಜ್ಞಾನದ ಮಿತಿಯಲ್ಲಿ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಮತ್ತು ನಿಸ್ಪಕ್ಷಪಾತವಾಗಿ ಇರೋಣ ಎಂದು ಮನವಿ ಮಾಡಿಕೊಳ್ಳುತ್ತಾ. ಏನೇ ಆಗಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಒಂದು ಅವಲೋಕನ ನಡೆಯಲಿ ಎಂದು ಬಯಸುತ್ತಾ. 

 

ಲೇಖಕರು:ವಿವೇಕಾನಂದ ಹೆಚ್.ಕೆ.
9844013068.

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";