ಸರ್ಕಾರಿ ಕಚೇರಿಗಳಲ್ಲಿ ಛಾಯಾಗ್ರಹಣ ನಿಷೇಧ; ಭ್ರಷ್ಟಾಚಾರ ಪೋಷಣಾ ಕಾನೂನು.

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಹಿಂದಿನ ಸರ್ಕಾರ ಲೋಕಾಯುಕ್ತ ದುರ್ಬಲ ಗೊಳಿಸಿ ಎಸಿಬಿ ರಚಿಸಿದಂತೆ ಬಿಜೆಪಿ ಮತ್ತೊಂದು ಭ್ರಷ್ಟಾಚಾರದ ಪೋಷಣಾ ಕಾನೂನಿಗೆ ಸರ್ಕಾರದ ಅಧೀಕೃತ ಆದೇಶವಾಗಿದೆ. ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿ ಛಾಯಾಗ್ರಹಣ ನಿಷೇಧಿಸಲಾಗಿದೆ. ಪಾರದರ್ಶಕ ಆಡಳಿತದ ಕಡೆ ಹೆಜ್ಜೆ ಎಂದು ಘೋಷಿಸುವುದು, ಅದೇ ಸಮಯದಲ್ಲಿ ಕಚೇರಿಗಳಿಗೆ ಪರದೆ ಹಾಕುವುದು ಯಾವ ನ್ಯಾಯ. ದೆಹಲಿ ಮತ್ತು ಪಂಜಾಬ್ ಸರ್ಕಾರಗಳು ಯಾರಾದರು ಅಧಿಕಾರಿಗಳು ಲಂಚ ಕೇಳಿದರೆ ಅದನ್ನು ಆಡಿಯೋ ಅಥವಾ ವಿಡಿಯೋ ಮಾಡಿ ಕಳುಹಿಸಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂಬ ನಿಯಮ ರೂಪಿಸಿರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಈ ವಿರುದ್ಧ ನಡೆ ಆಶ್ಚರ್ಯ ಮತ್ತು ಅಪಾಯಕಾರಿ ಎಂದು ಹೇಳಬಹುದು.

ಸರ್ಕಾರಿ ಕಚೇರಿಗಳು ಯಾರದೇ ಖಾಸಗಿ ಆಸ್ತಿಯಲ್ಲ. ಅವು ಇಡೀ ರಾಜ್ಯದ ಜನತೆಯ ಆಡಳಿತ ಕೇಂದ್ರಗಳು. ಅಪರೂಪದ ಕೆಲವೇ ಇಲಾಖೆಗಳ ಕೆಲವೇ ವಿಷಯಗಳನ್ನು ಬಿಟ್ಟು ಮುಚ್ಚಿಡುವಂತಹುದು ಏನೂ ಇರುವುದಿಲ್ಲ. ಆದ್ದರಿಂದಲೇ ಪೋಲೀಸ್ ಇಲಾಖೆ ಸೇರಿ ಎಲ್ಲಾ ಕಡೆಯು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅದಕ್ಕೆ ಹೋಲಿಸಿದರೆ ಈಗಿನ ಕಾನೂನು ವಿಚಿತ್ರವಾಗಿದೆ.

ಹೌದು, ಇದರ ಇನ್ನೊಂದು ಮುಖವೂ ಇದೆ. ಕೆಲವರು ಅನವಶ್ಯಕವಾಗಿ ಸರ್ಕಾರಿ ಕಚೇರಿಗಳಿಗೆ ನುಗ್ಗಿ ಸರ್ಕಾರಿ ಅಧಿಕಾರಿಗಳ ಮೇಲೆ ಒಂದಷ್ಟು ದೌರ್ಜನ್ಯ ಮಾಡಿದ ಘಟನೆಗಳು ಸಹ ನಡೆದಿವೆ. ಕೆಲವೊಮ್ಮೆ ಅತಿರೇಕದ ವರ್ತನೆ ಸಹ ತೋರಿದ್ದಾರೆ. ಈಗ ಆ ನೆಪದಲ್ಲಿ ಸರ್ಕಾರಿ ಅಧಿಕಾರಿಗಳ ಸಂಘಟನೆಯ ಮನವಿಯ ಮೇರೆಗೆ ಇದನ್ನು ಜಾರಿಗೊಳಿಸಲಾಗಿದೆ.

 

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕೇವಲ ಕೆಲವು ಘಟನೆಗಳನ್ನು ನೆಪ ಮಾಡಿಕೊಂಡು ಇಡೀ ವ್ಯವಸ್ಥೆಯನ್ನು ನಿರ್ಬಂಧಿಸುವುದು ಸರಿಯಲ್ಲ. ಸರ್ಕಾರಿ ಅಧಿಕಾರಿಗಳ ಮೇಲೆ ಕಾನೂನು ಬಾಹಿರವಾಗಿ ದೌರ್ಜನ್ಯ ಮಾಡುವ, ಅಸೌಜನ್ಯದಿಂದ ವರ್ತಿಸುವ, ಕೆಟ್ಟ ಶಬ್ದಗಳಲ್ಲಿ ಬೈಗುಳ ಮಾಡುವ, ಬ್ಲಾಕ್ ಮೇಲ್ ಮಾಡುವ ಯಾರನ್ನೇ ಆಗಲಿ ಶಿಕ್ಷೆಗೆ ಒಳಪಡಿಸಬೇಕು. ಸಾಮಾನ್ಯವಾಗಿ ಪೋಲೀಸ್ ವ್ಯವಸ್ಥೆ ಸರ್ಕಾರಿ ಅಧಿಕಾರಿಗಳ ಪರವಾನಗಿಯೇ ಕೆಲಸ ಮಾಡುತ್ತದೆ. ಅದನ್ನು ಇನ್ನಷ್ಟು ಗಂಭೀರವಾಗಿ ಜಾರಿಗೆ ತರಬೇಕು. ಸರ್ಕಾರಿ ಅಧಿಕಾರಿಗಳ ರಕ್ಷಣೆಗೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಿ. ಆದರೆ ಈಗಿನ ಆದೇಶ ನೆಗಡಿ ಬಂದಾಗ ಮೂಗನ್ನೇ ಕತ್ತರಿಸಿದಂತೆ ಆಗುತ್ತದೆ.

ಈಗಾಗಲೇ 30/40% ಶೇಕಡಾ ಹಣ ಲಂಚದ ರೂಪದಲ್ಲಿ ಹರಿದಾಡುತ್ತಿದೆ ಎಂಬ ಬಹಿರಂಗ ಸತ್ಯದ ನಡುವೆ, ಜಾಗೃತ ಮನಸ್ಥಿತಿಯ ಕೆಲವು ಸಂಘಟನೆಗಳು ಸರ್ಕಾರಿ ಕಚೇರಿಗಳಲ್ಲಿ ಧೈರ್ಯವಾಗಿ ಪ್ರಶ್ನಿಸುವ ವಾತಾವರಣ ಸೃಷ್ಟಿಯಾಗುತ್ತಿರುವಾಗ ಈ ಆದೇಶ ಸಾರ್ವಜನಿಕರಿಗೆ ಮಾಡುವ ಮೋಸ ಮತ್ತು ಬೆದರಿಕೆ ಎಂದೇ ಪರಿಗಣಿಸಲಾಗುತ್ತದೆ.

ಇದರ ವಿರುದ್ಧ ಸಂಘ ಸಂಸ್ಥೆಗಳು ಧ್ವನಿ ಎತ್ತಬೇಕಾಗಿದೆ. ಡೆತ್ ಸರ್ಟಿಫಿಕೇಟಿಗೂ ಬರ್ತ್ ಸರ್ಟಿಫಿಕೇಟಿಗೂ ಲಂಚ ಕೊಡಬೇಕಾದ ಪರಿಸ್ಥಿತಿ ಇರುವಾಗ ಅದರ ನಿವಾರಣೆಗಾಗಿ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾದ ಸರ್ಕಾರವೇ ಭ್ರಷ್ಟಾಚಾರದ ಮಾರ್ಗಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿರುವುದು ದುರದೃಷ್ಟಕರ.

ಸರ್ಕಾರಗಳ ಮಾತು ಮತ್ತು ಕೃತಿಯ ನಡುವೆ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ.‌ ಲಂಚವೆಂಬ ನಂಜು ಇಡೀ‌ ದೇಹವನ್ನು ಆಕ್ರಮಿಸಿಕೊಂಡಿರುವಾಗ ಅದಕ್ಕೆ ಚಿಕಿತ್ಸೆ ನೀಡುವುದು ಬಿಟ್ಟು ಮತ್ತಷ್ಟು ನಂಜು‌ ದೇಹ ಸೇರಲು ಅವಕಾಶ ಮಾಡಿಕೊಟ್ಟಿರುವುದು ಖಂಡನೀಯ.

ಇದನ್ನೆಲ್ಲಾ ಗಮನಿಸುತ್ತಿದ್ದರೆ ಪ್ರಜಾಪ್ರಭುತ್ವದ ಹೆಸರಿನಲ್ಲಿಯೇ ರಾಜಕಾರಣಿಗಳು ಅಧಿಕಾರಿಗಳು, ಕಪ್ಪು ಹಣದ ವಾಣಿಜ್ಯೋದ್ಯಮಿಗಳು, ಕಾರ್ಪೊರೇಟ್ ಕುಳಗಳು ಈ ಸಮಾಜದಲ್ಲಿ ಅತ್ಯಂತ ಪ್ರಬಲವಾಗಿದ್ದು ಕಾನೂನುಗಳ ಮೂಲಕವೇ ಪರೋಕ್ಷವಾಗಿ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ಜನರನ್ನು ಶೋಷಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ ಎಂದೆನಿಸುತ್ತಿದೆ.

ದಯವಿಟ್ಟು ಇನ್ನಾದರೂ ಇದನ್ನು ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳದಿದ್ದರೆ ಕನಿಷ್ಠ ‌ಈ ಶೋಷಣೆಗಳನ್ನು ಅನುಭವಿಸುವ ಗುಲಾಮಿ ಮನೋಭಾವವನ್ನಾದರು ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬದುಕುವುದು ಕಷ್ಟ.

ಆಯ್ಕೆ ನಿಮ್ಮ ಮುಂದಿದೆ.

ಸ್ವಾಭಿಮಾನಿ ಸ್ವಾತಂತ್ರ್ಯ ಸಮಾನತೆಯ ಗೌರವದ ಬದುಕು ಅಥವಾ ಅವಮಾನದ ಗುಲಾಮಿತನದ ಕಷ್ಟದ ಬದುಕು…. ಯಾವುದು ಬೇಕು…….

ಇದು ಸಾಮಾನ್ಯ ಜನರಿಗೆ ಮಾತ್ರವಲ್ಲ. ಈ ಸಮಾಜದ ಎಲ್ಲಾ ವಿದ್ಯಾವಂತ ಬುದ್ದಿವಂತ ಮೇಧಾವಿ ವರ್ಗಗಳಿಗೂ ಅನ್ವಯ……..ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,

ಲೇಖಕರು:ವಿವೇಕ ಹೆಚ್.ಕೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";