ಬೈಲಹೊಂಗಲ: ತಾಲ್ಲೂಕಿನ ಚಿಕ್ಕಬಾಗೇವಾಡಿಯ ಹೆಮ್ಮೆಯ ಸುಪುತ್ರ ಸುಭೇದಾರ ಈರಪ್ಪ ಕುಂಬಾರ ಭಾರತೀಯ ಸೇನೆಯಲ್ಲಿ ಸುಧೀರ್ಘ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ರವಿವಾರ ಸ್ವಗ್ರಾಮಕ್ಕೆ ಆಗಮಿಸಿದರು.
ಈ ವೇಳೆ ಸುಭೇದಾರ ಈರಪ್ಪ ಕುಂಬಾರ ಅವರನ್ನು ಗ್ರಾಮದ ಗುರು-ಹಿರಿಯರು,ಯುವಕರು ಹಾಗೂ ಎಲ್ಲಾ ಮಹಿಳೆಯರು ಅತಿ ವಿಜೃಂಭಣೆಯಿಂದ ಗ್ರಾಮಕ್ಕೆ ಸ್ವಾಗತಿಸಿದರಲ್ಲದೆ,ಶಾಲು ಹಾರ ಹಾಕಿ ಸನ್ಮಾನಿಸಿದರು. ಸ್ವಗ್ರಾಮಕ್ಕೆ ಆಗಮಿಸಿದ ವೇಳೆ ಮಂಗಳವಾದ್ಯದೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮುಖಾಂತರ ಗ್ರಾಮದ ಹೊರವಲಯದಲ್ಲಿರುವ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣಕ್ಕೆ ಕರೆತಂದು ಗೌರವ ಸನ್ಮಾನ ಸಮಾರಂಭ ಕಾರ್ಯಕ್ರಮ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಬೇದಾರ ಈರಪ್ಪ ಕುಂಬಾರ ಗ್ರಾಮಸ್ಥರು ನೀಡಿರುವ ಗೌರವ ಸ್ಮರಣೀಯ. ನಾನು ತುಂಬಾ ಬಡತನದ ಮನೆಯಲ್ಲಿ ಬೆಳೆದವನು ಊರಿನ ಹಿರಿಯರ ಮಾರ್ಗದರ್ಶನದಲ್ಲಿ ನಾನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವನು ಕಾರ್ಗಿಲ್ ಯುದ್ಧ ನಡೆದ ಸಮಯದಲ್ಲಿ, ನನ್ನ ವಿಚಾರ ಮಾಡಬೇಡಿ ನಾನು ಬದುಕಿದರೆ ಊರಿಗೆ ಮರಳುತ್ತನೆ,ಇಲ್ಲವಾದರೆ ವೀರಮರಣ ಹೊಂದಿ ಭಾರತ ಮಾತೆಯ ಋಣ ತೀರಸುತ್ತೇನೆ.ಎಂದು ನನ್ನ ಮನೆಗೆ ಪತ್ರ ಬರೆದಿದ್ದೆ. ರಾತ್ರಿ, ಹಗಲು, ಹಸಿವು, ನಿದ್ರೆ ಎನ್ನದೆ ದೇಶ ಸೇವೆ ಸಲ್ಲಿಸಿದವನು. ನಮ್ಮೂರಿನ ಯುವಕರು ಸೈನಿಕರಾಗಲು ಸಿದ್ದರಾಗಿ ದೇಶ ಸೇವೆ ಮಾಡಲು ಪ್ರಯತ್ನ ಮಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಯುವ ಮುಖಂಡ ಆನಂದ ಹಂಪಣ್ಣವರ, ನಮ್ಮ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ, ಮನ,ಮನೆಗಳಲ್ಲಿ ಸಂತಸ. ಕೇವಲ ರಾಜಕಾರಣಕ್ಕೆ ಸೀಮಿತವಾಗದ ಊರು,ಸುಮಾರು 50 ಕ್ಕೂ ಅಧಿಕ ಸೈನಿಕರು ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ. ಅಲ್ಲದೆ 65 ಜನ ಯುವಕರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಸುಬೇದಾರ ಈರಪ್ಪ ಕುಂಬಾರ ಅವರ ಸುಧೀರ್ಘ ಸೇವೆ ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮೇಜರ್ ಡಾ:ಮೋಹನ ಅಂಗಡಿ ಮಾತನಾಡಿ ಸುಬೇದಾರ ಈರಪ್ಪ ಕುಂಬಾರ ಅವರು ಕಾರ್ಗಿಲ್ ಯುದ್ಧದಲ್ಲಿ ಮುಂಚೋಣಿಯ ವೀರ ಯೋಧರಾಗಿದ್ದರು,ಅವರು ಬಡತನದಲ್ಲಿ ಹುಟ್ಟಿ ,ಅದನ್ನು ಮೆಟ್ಟಿ ನಿಂತು ನಮ್ಮ ಊರಿಗೆ ಹೆಮ್ಮೆಯ ಸಂಕೇತವಾಗಿದ್ದಾರೆ.ಅವರಂತೆ ಯುವಕರು ಶ್ರಮಪಟ್ಟು ಸದೃಡ ದೇಹ ಹೊಂದಿ ದೇಶ ಸೇವೆಗೆ ಮುಂದಾಗಬೇಕು, ಭೂ ಸೇನೆ,ವಾಯು ಸೇನೆ,ಜಲ ಸೇನೆಗಳಲ್ಲಿ ನೀವು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಓದಿ ಸೇವೆ ಸಲ್ಲಿಸಲು ಅವಕಾಶಗಳಿವೆ ಎಂದರು.
ನಮ್ಮ ಗ್ರಾಮದಲ್ಲಿ ಸುಮಾರು 5 ಜನ ಸುಬೇದಾರ ಆಗಿ ಸೇವೆ ಸಲ್ಲಿಸಿದ್ದಾರೆ,ಅದರಲ್ಲಿ ಸುಬೇದಾರ ಈರಪ್ಪ ಕುಂಬಾರ ಅವರ ಕೊಡುಗೆ ಅಪಾರವಾಗಿದೆ, ಭಾರತೀಯ ಸೇನೆ ಸೇರಲು ನಮಗೆ ಹಾಗು ನಮ್ಮ ಊರಿನ ಯುವಕರಿಗೆ ಇವರೆ ಪ್ರೇರಣೆಯಾಗಿದ್ದರು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕರಾದ ರಮೇಶ ಪೊಜೇರ ಹೇಳಿದರು.
ಈ ವೇಳೆ ಸೇವೆಯಲ್ಲಿ ಇರುವಾಗ ವೀರಮರಣ ಹೊಂದಿದ ಗ್ರಾಮದ ಸೈನಿಕರಿಗೆ ಗೌರವ ನಮನಗಳನ್ನು ಸಲ್ಲಿಸಿದರು , ಊರಿನ ಮಾಜಿ ನಿವೃತ್ತ ಸೈನಿಕರನ್ನು ಹಾಗು ವೀರ ಮರಣ ಹೊಂದಿದ ಯೋಧರ ಪತ್ನಿಯರನ್ನು ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಮಾಜಿ ಸೈನಿಕರಾದ, ಸುಬೇದಾರ ಗಂಗಪ್ಪಾ ಘೋಡಗೇರಿ,ಬಸಪ್ಪ ಉಡಕೇರಿ,ಕಲ್ಲನಗೌಡ ಪಾಟೀಲ,ಉಮೇಶ ಮೇಲಿನಮನಿ,ಬಾಬು ತೊಳೊಜಿ,ಮದರಾಸಾಬ್ ಸನದಿ,ಸುರೇಶ ಸೊಗಲದ,ಮಹಾಂತೇಶ ಹುಬ್ಬಳ್ಳಿ,ಅರ್ಜುನ ಹೊಂಗಲ. ಬೈಲಹೊಂಗಲ ತಾಪಂ ಮಾಜಿ ಉಪಾಧ್ಯಕ್ಷ ಮಲನಾಯ್ಕ ಭಾಂವಿ,ಗ್ರಾಪಂ ಸದಸ್ಯರಾದ ಶಿವಾನಂದ ಪೊಜೇರ,ಅಮರೇಶ ಸೊಗಲನ್ನವರ,ಹಾಗೂ ಮುಖಂಡರಾದ ಯುವ ಉದ್ಯಮಿ ಸೋಮನಗೌಡ ಪಾಟೀಲ,ಗಜಾನಂದ ಸೊಗಲನ್ನವರ, ಭಾರತಿ ಹೋಳಿ,ವಿದ್ಯಾ ಹೋಳಿ,ಶಶಿಕಲಾ ಹೋಳಿ,ನೀಲವ್ವಾ ಹೋಳಿ ಸೇರಿದಂತೆ ಅನೇಕ ಮಾಜಿ ಸೈನಿಕರು,ಗ್ರಾಮಸ್ಥರು ಉಪಸ್ಥಿತರಿದ್ದರು. ರಾಜು ಉಡಕೇರಿ ಕಾರ್ಯಕ್ರಮ ನಿರ್ವಯಿಸಿದರು.