ಬಸವಣ್ಣನವರ ಪರಿವರ್ತನಾತ್ಮಕ ಮನೋಧರ್ಮ ; ಅಂದು-ಇಂದು-ಮುಂದು

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಲೇಖಕರು: ಸಿದ್ರಾಮ ತಳವಾರ

ಲೇಖಕರು: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.                            ಮೋಬೈಲ್‌ ನಂಬರ್: 86607‌ 12577

ಚನ್ನಮ್ಮನ ಕಿತ್ತೂರು: ಪ್ರತಿಯೊಂದು ದೇಶವೂ ತನ್ನದೇ ಆದ ಇತಿಹಾಸ, ಹೋರಾಟ, ಕ್ರಾಂತಿಗಳ ಕಥೆಗಳನ್ನು ಹೊಂದಿವೆ. ಬದಲಾವಣೆ ಜಗದ ನಿಯಮ, ಇಂತಹ ಬದಲಾವಣೆ ಅಥವಾ ಪರಿವರ್ತನೆ ಭಾರತ ದೇಶದಲ್ಲಿಯೂ ನಡೆದಿದೆ. ಈ ಪರಿವರ್ತನೆಯ ಕ್ರಾಂತಿಕಥೆಯ ಮುಖ್ಯ ಭಾಗ ಬುದ್ದನ ಕಾಲದಿಂದ ನಡೆದುಕೊಂಡು ಬಂದಿದ್ದರೂ ಮನುಷ್ಯರ ಮೇಲಿನ ಅಮಾನವೀಯ ಘಟನೆಗಳನ್ನು ವಿರೋಧಿಸಿ ಕ್ರಾಂತಿಕಾರಕ ಸಂಘರ್ಷಗಳನ್ನು ಕಂಡಿದ್ದು ಮಾತ್ರ 12ನೇ ಶತಮಾನದಲ್ಲಿ ಎಂದೇ ಹೇಳಬಹುದು. ಇಂತಹ ನಾಡು ಕಂಡ ಹಲವಾರು ಕ್ರಾಂತಿಕಾರಿ, ಶ್ರೇಷ್ಠ ಚಿಂತಕರಲ್ಲಿ ನಮ್ಮ ಭಾಗದ ಬಸವಣ್ಣನವರು ಅಗ್ರಗಣ್ಯರಾಗಿದ್ದಾರೆ ಎಂಬುದು ಮಾತ್ರ ಹೆಮ್ಮೆಯ ಸಂಗತಿ.
ಬಸವಣ್ಣನವರು 12ನೇಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬ್ರಾಹ್ಮಣ ಕುಟುಂಬದ ಶರಣ ಮಾದರಸ ಮತ್ತು ಶರಣೆ ಮಾದಲಾಂಬಿಕೆಯರ ಉದರದಲ್ಲಿ 1134 ರಲ್ಲಿ ಈಗಿನ ಬಿಜಾಪೂರ ಜಿಲ್ಲೆಯ ಬಸವನಬಾಗೇವಾಡಿ ಜನಿಸಿದರು. ಕಾಯಕದ ಮಹತ್ವ :
“ ಕಾಯಕದಲ್ಲಿ ನಿರತನಾದೆಡೆ ಗುರುದರ್ಶನವಾದರೂ ಮರೆಯಬೇಕು, ಲಿಂಗಪೂಜೆಯಾದರೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದರೂ ಹಂಗು ಹರಿಯಬೇಕು, ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು “
ಕಾಯಕದಲ್ಲಿ ಮೇಲು ಕೀಳು ಎಂಬುದಿಲ್ಲ ಅವರವರ ಕಾಯಕನಿಷ್ಠೆಯೇ ಭಗವಂತನನ್ನು ಕಾಣುವ ನಿಜವಾದ ಮಾರ್ಗ ಎಂಬುದು ಬಸವಣ್ಣನವರ ನಿಲುವಾಗಿತ್ತು. ಹೀಗೆ ಕಾಯಕ ನಿಷ್ಠೆಯನ್ನು ಮೊದಲು ಮಾಡಿಕೊಂಡು ಬಸವಣ್ಣ ಮಾನವ ಧರ್ಮದ ಜಾಗೃತಿಯನ್ನು ಮಾಡುತ್ತಿದ್ದರು, ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬ ಸರ್ವಜ್ಙನ ಮಾತುಗಳು ಬಸವಣ್ಣನವರನ್ನು ಪ್ರೇರೆಪಿಸಿರಬಹುದು ಅವರ ಅಂದಿನ ಕಾಯಕಪರ ವಚನಗಳು ಇಂದಿಗೂ ಪ್ರಸ್ತುತವೆನಿಸುತ್ತವೆಯಲ್ಲದೇ ಇಂದಿನ ಯುವಪೀಳಿಗೆಗೆ ಮುಂದಿನ ಪೀಳಿಗೆಗೂ ಕಾಯಕ ಎಷ್ಟು ಪ್ರಾಮುಖ್ಯ ಎಂಬುದನ್ನು ತೋರಿಸಿಕೊಡುತ್ತವೆ.
“ ದೇವ ಸಹಿತ ಮನೆಗೆ ಬಂದೆಡೆ ಕಾಯಕವಾವುದೆಂದು ಬೆಸಗೊಂಡೆ ನಿಮ್ಮಾಣೆ ನಿಮ್ಮ ಪುರಾತನರಾಣೆ ತಲೆದಂಡ !ತಲೆದಂಡ! ತಲೆದಂಡ! ಕೂಡಲ ಸಂಗಮದೇವಾ ಭಕ್ತರಲ್ಲಿ ಕುಲವನರಸಿದೆಡೆ ನಿಮ್ಮ ರಾಣಿವಾಸದಾಣೆ “

ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆಯನ್ನು ಕಾಣುವವರಾಗಿದ್ದರು ಎಂಬುದಕ್ಕೆ ಈ ವಚನವೇ ಸಾಕ್ಷಿ. 12ನೇ ಶತಮಾನದ ಕಾಯಕತತ್ವವನ್ನು ಎತ್ತಿ ಹಿಡಿದ ಬಸವಣ್ಣ ಕಾಯಕ ಶೀಲರಿಗೆ ತಾನು ನೀಡಿದ ಸ್ಥಾನಮಾನಗಳು ಅತೀ ಉನ್ನತವಾಗಿದ್ದವು. ಬಸವಣ್ಣನವರ ಅನುಭವ ಮಂಟಪದ ಆಯ್ದಕ್ಕಿ ಮಾರಮ್ಮಳ ಈ ವಚನ ಕಾಯಕವನ್ನು ಕುರಿತಾಗಿ ನೀಡಿದ ಸಾರ್ವಕಾಲಿಕ ಸತ್ಯವನ್ನು ಬಿಂಬಿಸುತ್ತದೆ.                                “ ಮನಶುದ್ದವಿಲ್ಲದವಗೆ ದ್ರವ್ಯದ ಬಡತನವಲ್ಲದೇ ಚಿತ್ತಶುದ್ದದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮೀ ತಾನಾಗಿದ್ದಳು ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನಕ್ಕರ “                            ಸಮಾನತೆಯ ಪರ್ವ :
ಇವರ 8ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಮುದಾಯದ ವಿಧಿವಿಧಾನಗಳಂತೆ ಜನಿವಾರ ಹಾಕಲು ಮುಂದಾದಾಗ ಇವರಿಗಿಂತಲೂ ವಯಸ್ಸಿನಲ್ಲಿ ಹಿರಿಯಳಾದ ಅಕ್ಕನಾಗಲಾಂಬಿಕೆಗೆ ಜನಿವಾರ ಹಾಕುವಂತೆ ಕೇಳಿಕೊಂಡಾಗ ಹೆಣ್ಣುಮಕ್ಕಳಿಗೆ ಜನಿವಾರ ಹಾಕುವುದು ಸಮಾಜದಲ್ಲಿ ಒಪ್ಪಿಕೊಳ್ಳುವಂತಿಲ್ಲವೆಂಬ ಸಂಗತಿಯನ್ನು ಅರಿತು ಹೆಣ್ಣು ಗಂಡು ಸಮಾನರು ಎಂಬ ವಿವೇಚನೆಯನ್ನು ಮುಂದಿಟ್ಟುಕೊಂಡು ಸಮಾಜದಲ್ಲಿನ ಅಸಮಾನತೆಯನ್ನು ವಿರೋಧಿಸಿ ಸಾಮಾಜಿಕವಾಗಿ ಸಮಾನತೆಗೋಸ್ಕರ ಮೊಟ್ಟಮೊದಲ ಬಾರಿ ಮನೆ ತೊರೆದು ಹೋಗಿ ಕೂಡಲ ಸಂಗಮದಲ್ಲಿ ಸುಮಾರು 12 ವರ್ಷಗಳ ಕಾಲ ಅಧ್ಯಯನ ಮಾಡಿದವರು ಬಸವಣ್ಣ.
ತಮ್ಮ ಇಡೀ ಬದುಕನ್ನೇ ಸಮಾಜದಲ್ಲಿನ ತಾರತಮ್ಯ ನಿರ್ಮೂಲನೆಗೆ, ಸಮಾನತೆ, ಕಂದಾಚಾರ, ಮೌಢ್ಯ ನಿಷೇಧಕ್ಕಾಗಿ ಮೀಸಲಿರಿಸಿ ತಮ್ಮ ಅಮೋಘ ಪಾಂಡಿತ್ಯ ಧಾರೆಯೆರೆದು ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ‍್ಯಕ್ಕೆ ಬಸವಣ್ಣನವರು ಮುಂದಾದರು. ಅಂದಿನ ಪರಿಸ್ಥಿತಿಯಲ್ಲಿ ಇದೆಲ್ಲ ಸಾಧ್ಯವೇ ಎಂಬ ಪ್ರಶ್ನೆ ಬಸವಣ್ಣನವರಿಗೂ ಕಾಡಿರುವುದುಂಟು. ಆದಾಗ್ಯೂ ಧೃತಿಗೆಡದೇ ಸಮಾಜದಲ್ಲಿ ಪರಿವರ್ತನೆಯನ್ನು ಬಯಸಿದವರು ಬಸವಣ್ಣ. ತಮ್ಮಲ್ಲಿನ ವಾಕ್ಚಾತುರ್ಯ ಅಪಾರವಾದ ಜ್ಙಾನವನ್ನು ಇದಕ್ಕಾಗಿ ವಿನಿಯೋಗಿಸಿ ನಿರಂತರ ಶ್ರಮ, ಜಾಗೃತಿಯ ಕಾರ್ಯ ಸಮಾನತೆಯ ಕುರಿತಾಗಿ ಇಚ್ಛಾ ಮನೋಭಾವದೊಂದಿಗೆ ನಾಡಿನ ಹತ್ತು ಹಲವು ಶರಣರನ್ನು ಒಂದೆಡೆ ಒಟ್ಟುಗೂಡಿಸಿ ಕಲ್ಯಾಣ ರಾಜ್ಯ ಕಟ್ಟಿದ ಮಹಾಪುರುಷ ಬಸವಣ್ಣ.                                                                                    “ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ, ದೂರ ದುರ್ಜನರ ಸಂಗವದು ಭಂಗವಯ್ಯಾ ಸಂಗವೆರಡುಂಟು; ಒಂದ ಹಿಡಿ ಒಂದ ಬಿಡು ಮಂಗಲಮೂರ್ತಿ ನಮ್ಮ ಕೂಡಲಸಂಗನ ಶರಣರ.”                                                ಸಮಾಜದಲ್ಲಿ ಜನ ಕುಡಿತ, ಜೂಜು, ಇಸ್ಪೀಟು, ಸಿಗರೇಟು ಸೇದುವುದು ಹೊಡೆದಾಟ ಕೊಲೆ ಸುಲಿಗೆ ಮುಂತಾದ ದುಶ್ಚಟಗಳಿಗೆ ದುರ್ಜನರ ಸಂಗಕ್ಕೆ ಬಲಿಯಾಗಿ ಸಾರ್ಥಕ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನು ಗಮನಿಸಿದ ಬಸವಣ್ಣನವರು ದುಷ್ಟ ಚಟಗಳನ್ನು ಬಿಡುವಂತೆ ತಮ್ಮ ವಚನಗಳ ಮೂಲಕ ಜನರಲ್ಲಿ ಪರಿವರ್ತನೆಯನ್ನು ಮಾಡಲು ಯತ್ನಿಸಿದರು. ಅಂದು ಅವರು ವಚನಗಳ ಮೂಲಕ ಜನರಲ್ಲಿ ಬೀರಿದ ಈ ಪರಿವರ್ತನಾತ್ಮಕ ಸಂದೇಶ ಇಂದಿಗೂ ಕೂಡ ನಮ್ಮ ಯುವ ಜನಾಂಗಕ್ಕೆ ಮಾದರಿಯಾಗಿದೆ ಎನ್ನಬಹುದು. ಬರುವ ದಿನಗಳಿಗೂ ಈ ಸಂದೇಶ ದಾರಿ ದೀಪವಾಗುವುದರಲ್ಲಿ ಯಾವುದೇ ಸಂಶಯವಿಲ್ಲಾ.

12 ನೇಯ ಶತಮಾನದಲ್ಲಿನ ವರ್ಣಾಶ್ರಮದ ಕೊಳಕು ಮತ್ತು ಕರಾಳ ಪ್ರಕ್ಷುಬ್ದತೆಯಲ್ಲಿ ನಲುಗುತ್ತಿರುವ ಸಮಾಜವನ್ನು ಕಂಡ ಬಸವಣ್ಣ ಆಗಿನ ಮೇಲು-ಕೀಳು ಭಾವನೆ ಜಾತಿ ಬೇಧಗಳ ತಾರತಮ್ಯವನ್ನು ಕಟುವಾಗಿ ವಿರೋಧಿಸುತಿದ್ದರು. ಬಸವಣ್ಣ ಭಾಗಶ: ಸಮಾಜ ಸುಧಾರಕ ಎಂದು ನಾವುಗಳೆಲ್ಲ ಓದಿದ್ದೇವಷ್ಟೇ. ಸುಧಾರಣೆ ಎಂದರೆ ಬಹುಶ: ಇರುವ ತೂತುಗಳನ್ನು ಮುಚ್ಚಿ ಹಾಕುವುದು, ಹರಿದ ತೂತುಗಳನ್ನು ಹೊಲಿಯುವುದು ಎಂದರ್ಥ. ಆದರೆ ಬಸವಣ್ಣ ನಿಜವಾಗಲೂ ಸಮಾನತೆಯ ದೃಷ್ಟಿಯಲ್ಲಿ ಮಾಡಿದ್ದು ಸುಧಾರಣೆ ಅಲ್ಲ ಬದಲಾಗಿ ಪೂರಕವಾದ ಹೊಸದೊಂದು ಸಮಾಜವನ್ನೇ ನಿರ್ಮಾಣ ಮಾಡಿದರು ಎನ್ನಬಹುದು.
ಈ ವರ್ಣಾಶ್ರಮ ಪದ್ದತಿಯನ್ನು ರಿಪೇರಿ ಮಾಡಲು ಆಸಕ್ತಿ ತೋರದ ಬಸವಣ್ಣ ಬದಲಾವಣೆಯ ಅಥವಾ ಪರಿವರ್ತನೆಯ ದಿಟ್ಟ ನಿರ್ಧಾರದೊಂದಿಗೆ ಆಗಿನ ವ್ಯವಸ್ಥೆಯನ್ನೇ ಸಂಪೂರ್ಣ ಹೊಡೆದು ಹಾಕಲು ನಿರ್ಧರಿಸಿದರು. ವಿಶ್ವದ ಇತರೆ ರಾಷ್ಟ್ರಗಳಲ್ಲಿ ಕ್ರಾಂತಿಗಳಾಗಿರುವುದನ್ನು ನಾವು ಗಮನಿಸಿದಾಗ ಅಲ್ಲಿ ಆರ್ಥಿಕ ಪರಿಸ್ಥಿತಿಯಾಗಲೀ ಆಡಳಿತ ವ್ಯವಸ್ಥೆಯಾಗಲೀ ಬದಲಾಗಿರಬಹುದು. ಆದರೆ ನಮ್ಮ ದೇಶದಲ್ಲಿ ಆಗಿನ ಮನುಷ್ಯರ ಮನಸ್ಥಿತಿ ಬದಲಾಯಿಸಲು ಸಮಾಜದ ಮೇಲ್ಪದರದಲ್ಲಿನ ಮನುಷ್ಯರ ಮನಸ್ಥಿತಿ ಬದಲಾಯಿಸಲು ಅಂದು ಕಲ್ಯಾಣದಲ್ಲಿ ಬಸವಣ್ಣ ಕ್ರಾಂತಿಯನ್ನೇ ಮಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಅವರು ಪರ್ಯಾಯವಾಗಿ ನಿರ್ಮಿಸಿದ ಸಮಾಜದ ಶರಣರ ವಚನಗಳ ಮುಂದೆ ನೆಲಕಚ್ಚಿದ ಅದೂವರೆಗೆ ಪ್ರಚಲಿತವಿದ್ದ ವ್ಯವಸ್ಥೆಗೆ ಸೆಡ್ಡುಹೊಡೆದು ನಿಲ್ಲುವಂತಿತ್ತು. ಸಮಾಜದ ಅಂತಿಮ ತೀರ್ಪು ಎನ್ನುವಂತೆ ಅದೂವರೆಗೆ ಸಮಾಜವನ್ನು ಆಳುತ್ತಿರುವ ವೇದಾಗಮಗಳು, ಶ್ರೇಣಿಕೃತ ವ್ಯವಸ್ಥೆ ಹಾಗೂ ಪುರೋಹಿತಶಾಹಿಗಳ ನಿದ್ದೆಗೆಡಿಸಿತ್ತು. ವರ್ಗ,ವರ್ಣ,ಶ್ರೇಣಿಕೃತ ಪದ್ದತಿಯ ವಿರುದ್ದ ಪರ್ಯಾಯವಾಗಿರುವ ಶರಣ ಸಮುದಾಯವನ್ನು ನಿರ್ಮಿಸಿದ ಬಸವಣ್ಣ “ವೇದಕ್ಕೆ ಬರೆಯಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ, ತರ್ಕದ ಬೆನ್ನಬಾರನೆತ್ತುವೆ, ಆಗಮದ ಮೂಗ ಕೊಯ್ಯುವೆ ನೋಡಯ್ಯ ಮಹಾದಾನಿ ಕೂಡಲ ಸಂಗಮದೇವಾ ಮಾದಾರ ಚನ್ನಯ್ಯನ ಮಗ ನಾನು” ಎಂದು ಆಗಲೇ ಜಾತಿ ಪದ್ದತಿಯನ್ನು ವಿರೋಧಿಸಿದ ಅಗ್ರಗಣ್ಯ ಪುರುಷ. ವಚನಗಳ ಮೂಲಕ ಕ್ರಾಂತಿ ಮಾಡಿದ ಬಸವಣ್ಣ ತನ್ನ ವಚನಗಳು ಎಲ್ಲಿ ತಲುಪುವುದಿಲ್ಲವೋ ಅಲ್ಲಿ ತನ್ನ ಮಾತುಗಳ ಮೂಲಕ ಜನರನ್ನು ಎಚ್ಚರಿಸುತ್ತಿದ್ದರು.

ಧರ್ಮ, ದೇವರು, ಮೂಢ ನಂಬಿಕೆ :

“ದಯವಿಲ್ಲದ ಧರ್ಮವದಾವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲಿ
ದಯವೇ ಧರ್ಮದ ಮೂಲವಯ್ಯ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ“ ಧರ್ಮ ದೇವರು ಮುಂತಾದ ಕಾರಣಗಳಿಗಾಗಿ ಹೊಡೆದಾಡಿಕೊಂಡು ಬದುಕುತ್ತಿರುವ ಜನರಿಗೆ ದೇವನೊಬ್ಬ ನಾಮಹಲವು, ದಯವೇ ಧರ್ಮದ ಮೂಲವಯ್ಯ, ದೇವರು ನಮ್ಮ ನಿಷ್ಕಲ್ಮಶ ಮನದಲ್ಲಿದ್ದಾನೆಯೇ ಹೊರತು ಗುಡಿಗುಂಡಾರದಲ್ಲಲ್ಲ. ಕಾಯಕವೇ ಕೈಲಾಸ ನಾವು ಕಷ್ಟಪಟ್ಟು ದುಡಿದು ಅದರಿಂದ ಬರುವ ಅಲ್ಪ ಆದಾಯದಲ್ಲೇ ಉಂಡು ಸುಖ ನಿದ್ರೆ ಮಾಡುವುದು, ನಿತ್ಯ ಶರಣರ ಅಧ್ಯಾತ್ಮಿಕ ವಾಣಿಗಳು ವಚನಗಳನ್ನು ಪಠಿಸುವುದು ಅವುಗಳ ಸಾರವನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಈ ನಿಟ್ಟಿನಲ್ಲಿ ನಾವುಗಳೆಲ್ಲ ಪ್ರಯತ್ನಿಸೋಣ ಎಂದು ಜನರಲ್ಲಿ ಪರಿವರ್ತನಾತ್ಮಕ ಮಾತುಗಳನ್ನು ಹೇಳುತ್ತ ಕ್ರಮೇಣ ಜನರಲ್ಲಿ ಜಾಗೃತಿಯನ್ನುಂಟು ಮಾಡುತ್ತಿದ್ದರು. ದೇವರು ಇದ್ದಾನೆಯೇ ? ಎಂಬ ಪ್ರಶ್ನೆಗೆ ಇದೂವರೆಗೆ ಉತ್ತರ ಕಂಡುಕೊಳ್ಳದ ಸಮಾಜಕ್ಕೆ ಅಲ್ಲಾ ಏಸು ಶ್ರೀರಾಮ ಇವರೆಲ್ಲ ಒಂದೇ ಎಂಬುದನ್ನು ಪ್ರತಿಪಾದಿಸಿದವರು.                                                  “ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಇದೇ ನಮ್ಮ ಕೂಡಲಸಂಗನ ಶರಣರೊಲಿಸುವ ಪರಿ”
ಎಂದು ಸಮಾಜದಲ್ಲಿನ ಕಳ್ಳತನ, ಸುಳ್ಳತನ ದರೋಡೆ ದಗಲಬಾಜಿತನ ಹಾಗೂ ಸಮಾಜದಲ್ಲಿ ಕಾಯಕವೇ ಕೈಲಾಸ ಎಂದುಕೊಂಡು ಶರಣರ ಮಾರ್ಗದತ್ತ ನಡೆದು ಸಮಾಜದಲ್ಲಿ ಪರಿವರ್ತನೆಯಾಗಲು ತಮ್ಮ ವಚನಗಳ ಚಾಟಿಯೇಟಿನ ಮೂಲಕವೇ ಜನರಲ್ಲಿ ಜಾಗೃತಿ ಮೂಡಿಸಿದರು.
ಜಾತಿ ಪದ್ದತಿಯನ್ನು ತೀವೃವಾಗಿ ವಿರೋಧಿಸುತ್ತಿದ್ದ ಬಸವಣ್ಣನವರು ಅಷ್ಟೇ ಪ್ರಮಾಣದಲ್ಲಿ ಲಿಂಗ ಸಮಾನತೆಗೂ ಒತ್ತು ನೀಡಿದ್ದರು. ಲಿಂಗ ಸಮಾನತೆ, ಜಾತಿ ಸಮಾನತೆ, ಆರ್ಥಿಕ ಸಮಾನತೆಯ ಕುರಿತು ಪ್ರತಿಕ್ಷಣವೂ ತುಡಿಯುತ್ತಿದ್ದ ಅವರ ಮನಸ್ಸು ಹೊಸ ಬದಲಾವಣೆಯತ್ತ ಮುಖ ಮಾಡಿತ್ತು. ಆ ನಿಟ್ಟಿನಲ್ಲಿ ಎಲ್ಲ ವರ್ಗದ ಶರಣರನ್ನೂ ಒಳಗೊಂಡ ಅನುಭವ ಮಂಟಪವೊಂದನ್ನು ರಚಿಸಿ ಸಾಮಾಜಿಕ ಸಮಾಣತೆಯ ಕ್ರಾಂತಿಗೆ ನಾಂದಿ ಹಾಡಿದರು. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನ ರೂಪಿಸಿಕೊಳ್ಳುವ ಹಕ್ಕಿದೆ ಎಂಬುದನ್ನು ಪ್ರತಿಪಾದಿಸಿದರು. ಹೀಗೆ ಸಮಾನತೆ ಕಾಯಕ ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರೂ ಬೇಕಾದರೂ ಶಿವಶರಣ ರಾಗಬಹುದು ಎಂದು ಬಸವಣ್ಣ ಸಾರಿದರು. ಪೊಳ್ಳು ದೇವರುಗಳನ್ನು ಸ್ತುತಿಸುತ್ತ ಪುರೋಹಿತಶಾಹಿ ಗಳಿಂದ ನಿರಂತರ ಶೋಷಣೆಗೊಳಗಾಗುತ್ತಿರುವ ಮುಗ್ದ ಜನರಿಗೆ ಬಸವಣ್ಣ ಹೊಸ ಆಶಾಕಿರಣವಾದರು.      “ ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ? ತನಗಾದ ಆಗೇನು?ಅವರಿಗಾದಜೇಗೆಯೇನು ? ತನುವಿನ ಕೋಪ ತನ್ನ ಹಿರಿಯತನದ ಕೇಡು,
ಮನದ ಕೋಪ ತನ್ನ ಅರಿವಿನ ಕೇಡು, ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ ನೆರೆಮನೆಯ ಸುಡದು ಕೂಡಲ ಸಂಗಮದೇವಾ “
ಈ ಕುರಿತು ಸಮಾಜದಲ್ಲಿ ಕೆಲವು ಕುಹಕಿಗಳ ಕೆಂಗಣ್ಣಿಗೆ ಬಸವಣ್ಣ ಬಲಿಯಾಗ ಬೇಕಾಯಿತಾದರೂ ಅದನ್ನು ತಲೆಗೆ ಹಚ್ಚಿಕೊಳ್ಳದೇ ನಿರ್ಲಿಪ್ತರಾಗಿ ಕುಪಿತಗೊಂಡ ಜನರನ್ನುದ್ದೇಶಿಸಿ ಮೇಲಿನ ವಚನದಂತೆ ಮನೆಯ ಕಿಚ್ಚು ಮನೆಯ ಸುಡುವುದಲ್ಲದೇ ನೆರೆಮನೆಯ ಸುಡದು ನಿಮ್ಮ ಅಜ್ಙಾನದ ಅಂಧಕಾರದಿಂದ ಜ್ಙಾನದ ಬೆಳಕಿನತ್ತ ಬನ್ನಿರೆಂದು ತಿಳಿಹೇಳಿದರು. ಇದು ಸಾರ್ವಕಾಲಿಕ ಸತ್ಯವಾದ ಸಂದೇಶ ಎಂಬುದನ್ನೂ ಈಗಿನ ದಿನಗಳಿಗೂ ಹೋಲಿಸಿ ನೋಡಬಹುದು.
ಮನುಷ್ಯನ ಸಿಟ್ಟು ಅತಿರೇಖಕ್ಕೆ ಅಂದೇ ಬಸವಣ್ಣ ಉತ್ತರ ಹೇಳಿದ್ದರು. ಈ ವಚನವನ್ನು ಓದುವುದರ ಮೂಲಕ ಆ ಸಿಟ್ಟು ತನಗಾಗಿಸುವ ಕೇಡನ್ನು ಸೂಚಿಸುವುದರಲ್ಲಿ ಸಂಶಯವಿಲ್ಲ. ಮಾನವತಾವಾದಕ್ಕೆ ಅತೀ ಹೆಚ್ಚಿನ ಮಹತ್ವ ನೀಡುವ ಮೂಲಕ ಬಸವಣ್ಣನವರು ವರ್ಣವಿರೋಧಿ ವರ್ಗ ವಿರೋಧಿ ಪುರೋಹಿತಶಾಹಿಗಳ ವೈರುಧ್ಯವನ್ನು ಕಟ್ಟಿಕೊಂಡರು. ಸಾಮಾಜಿಕ ಕ್ರಾಂತಿಗೆ ಕಾರಣರಾದ ಇವರು ಜಾತಿ ಮತ ಲಿಂಗ ಬೇಧಗಳನ್ನು ಹೊಡೆದೋಡಿಸಲು ಮುಂದಾದರು. ಅಯ್ಯಾ ಎಂದರೆ ಸವರ್ಗ ಎಲವೋ ಎಂದರೆ ನರಕ ಕಾಯಕವೇ ಕೈಲಾಸ ಮುಂತಾದ ವಚನಗಳ ಮೂಲಕ ಮಾನವತಾವಾದವನ್ನು ಎತ್ತಿ ಹಿಡಿದ ಇವರು ಅಸಂಖ್ಯಾತ ವಚನಗಳನ್ನು ರಚಿಸಿದ್ದಾರೆ.
ಹರಿಜನರು, ದಲಿತರು ದೇವಾಲಯ ಪ್ರವೇಶಿಸಿದ ಮಾತ್ರಕ್ಕೆ ಅಸ್ಪೃಶ್ಯತೆ ಮಾಯವಾಗದು ಮತ್ತು ಹೆಣ್ಣುಮಕ್ಕಳು ಗರ್ಭಗುಡಿಯ ಮೂರ್ತಿ ಮುಟ್ಟಿದಾಕ್ಷಣ ಸಮಾನತೆ ಬರಲಾರದು ಜಾತಿಕೂಪದಂತಿರುವ ದೇವಸ್ಥಾನದೊಳಗೆ ಅದೇಷ್ಟೋ ಮೌಢ್ಯಗಳು ಮುಸುಕುಹೊದ್ದು ಕೂತಿವೆ. ಶೋಷಣೆಗೆ ಮೂಲ ಕಾರಣಗಳೇ ಈ ದೇವಾಲಯಗಳು ಧರ್ಮ ದೇವರ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಯನ್ನು ಕಟುವಾಗಿ ಟೀಕಿಸಿದ ಬಸವಣ್ಣ “ಉಳ್ಳವರು ಶಿವಾಲಯ ಮಾಡುವರಯ್ಯ, ನಾನೇನು ಮಾಡಲೀ ಬಡವನಯ್ಯ,       ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ“                   ಎಂಬ ವಚನದ ಮೂಲಕ ದೇವಸ್ಥಾನಗಳ ಅಗತ್ಯತೆಯನ್ನು ತಳ್ಳಿ ಹಾಕಿದರು.

“ ಇವನಾರವ ಇವನಾರ ಇವನಾರವನೆಂದೆಣಿಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆಣಿಸಯ್ಯಾ
ಕೂಡಲಸಂಗಮದೇವಾ ಇವ ನಿಮ್ಮ ಮಹಾಮನೆಯ ಮಗನೆಂದೆಣಿಸಯ್ಯಾ“

ಎನ್ನುವ ಮೂಲಕ ಸಮಾಜದಲ್ಲಿ ಸಾಮಾಜಿಕ ಸಮಾನತೆಯನ್ನು ಜಾರಿಗೊಳಿಸಿದ ಕೀರ್ತಿ ಬಸವಣ್ಣವನವರಿಗೆ ಸಲ್ಲುತ್ತದೆ. ಶೂದ್ರರಾದ ರೈತಾಪಿ ಜನ ಕಾಯಕ ಜೀವಿಗಳು ಮಹಿಳೆಯರು ಮತ್ತು ಪಂಚಮರು ಈ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಮನುಧರ್ಮದ ಪುರುಷ ಪ್ರಧಾನ ವರ್ಣ ವ್ಯವಸ್ಥೆಯಿಂದಾಗಿ ಸಾಕಷ್ಟು ಹಿಂಸೆ ನೋವು ತೊಂದರೆ ಸಾವುಗಳನ್ನೂ ಕೂಡ ಕಂಡಿದ್ದಾರೆ.
ಆ ಕಾಲದಲ್ಲಿ ಮೇಲ್ವರ್ಗ ಮತ್ತು ಮೇಲ್ಜಾತಿಯ ಅನುತ್ಪಾದಕ ಪುರುಷರಿಗಾಗಿಯೇ ಬದುಕಿನ ಎಲ್ಲ ಸುಖಭೋಗಗಳು ಮೀಸಲಾಗಿದ್ದವು ಇವರು ಮಾತ್ರ ಜನಿವಾರ ಧರಿಸುವ ಹಕ್ಕು ಹೊಂದಿದ್ದರು. ಈ ಜನಿವಾರ ಧರಿಸುವ ಬ್ರಾಹ್ಮಣ ಓದಿರಬಹುದು ಬರೆದಿರಬಹುದು ಆದರೆ ಕಾಯಕ ಜೀವಿಯಾಗಿ ಉತಾದನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿಲ್ಲಾ. ಈ ಉತ್ಪಾದನೆಯ ಅನುಭವದಿಂದ ಬರುವ ಜ್ಙಾನವನ್ನು ಹಿಂದಿನ ಕಾಲದಲ್ಲಿ ಅವನೆಂದೂ ಪಡೆದಿರಲಿಲ್ಲ. ಕ್ಷತ್ರಿಯ ಕಾದಿರಬಹುದು ಆದರೆ ಉತ್ಪಾದನೆಯಲ್ಲಿ ಅವನೂ ತೊಡಗಿಲ್ಲಾ. ವೈಶ್ಯ ವಸ್ತುಗಳ ಮಾರಾಟ ಮಾಡಿರಬಹುದು ಕೃಷಿ ಭೂಮಿಯ ಒಡೆಯನೂ ಆಗಿರಬಹುದು ಆದರೆ ಸ್ವತ: ಉತ್ಪಾದನೆ ಮಾಡಿಲ್ಲಾ. ವಿಪರ್ಯಾಸವೆಂದರೆ ಈ ಮೂರೂ ವರ್ಗದವರಿಗೂ ಜನಿವಾರ ಹಾಕಿಕೊಳ್ಳುವ ಹಕ್ಕಿದೆ. ಆದರೆ ಉತ್ಪಾದನೆಯಲ್ಲಿ ತೊಡಗಿದ ಕಾಯಕ ಜೀವಿಗಳು ಶ್ರಮಜೀವಿಗಳು ಪಂಚಮರಿಗೆ ಜನಿವಾರ ಇಲ್ಲಾ. ಯಾರಿಗೆ ಜನಿವಾರ ಇತ್ತೋ ಅವರು ದುಡಿಯದೇ ಸುಖಕರ ಜೀವನ ಅನುಭವಿಸುತ್ತಿದ್ದರು. ಯಾರಿಗೆ ಜನಿವಾರ ಇಲ್ಲವೋ ಅವರು ಕಷ್ಟಪಟ್ಟು ದುಡಿದು ಜೀವನ ಅನುಭವಿಸುತ್ತಿದ್ದರು. ಈ ಎಲ್ಲ ಪ್ರಸಂಗಗಳೂ ಬಸವಣ್ಣನವರನ್ನು ಕೆರಳಿಸಿದವು ಎನ್ನಬಹುದು ಅದೇ ಕಾರಣಕ್ಕೆ ಅವರು ಕಟ್ಟಕಡೆಗೆ ಮಾನವನ ಕಡೆಗೆ ಈ ಅನ್ಯಾಯದ ವಿರುದ್ದ ಹೋರಾಡಿದರು.

ಮಹಿಳಾ ಸಮಾನತೆ : ತೃತೀಯ ಲಿಂಗಿಗಳಿಗೂ ಸಮಾನತೆ:
ಮಹಿಳಾ ಸ್ವಾತಂತ್ರ್ಯ ಸಾಮಾಜಿಕ ಸ್ವಾತಂತ್ರ್ಯದ ಕುರುಹು ಎನ್ನಬಹುದು ಬಸವಣ್ಣನವರ ಕಲ್ಯಾಣ ರಾಜ್ಯದಲ್ಲಿ ಮಹಿಳೆಯರಿಗೆ ಮೊಟ್ಟಮೊದಲ ಬಾರಿ ಸಮಾನತೆಯ ಅನುಭವವಾಗಿತ್ತು. ಅನುಭವ ಮಂಟಪದ ಹತ್ತು ಹಲವು ಚರ್ಚೆಗಳಲ್ಲಿ ಮುಕ್ತವಾಗಿ ಭಾಗವಹಿಸುತ್ತಿದ್ದ ಅನೇಕ ಮಹಿಳಾ ಶರಣೆಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಸೂಳೆ ಸಂಕವ್ವೆ, ಮುಕ್ತಾಯಕ್ಕ, ಗೊಗ್ಗವ್ವ ಮುಂತಾದ ಶರಣೆಯರು ಪರಿವರ್ತನಾತ್ಮಕ ಬದಲಾವಣೆಗೆ ಬಸವಣ್ಣನವರಿಗೆ ಬೆಂಗಾವಲಾಗಿ ನಿಂತರು ಎಂದೇ ಹೇಳಬಹುದು.
“ಜಾತಿ ಸಂಕರವಾದ ಬಳಿಕ ಕುಲವನರಸುವರೇ ? ಎಂದು ಪ್ರಶ್ನಿಸುತ್ತಲೇ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶೂದ್ರರಿಗೆ ಮಹಿಳೆಯರಿಗೆ ಮತ್ತು ಪಂಚಮರಿಗೆ ಮೊದಲ ಬಾರಿಗೆ ಶಿಕ್ಷಣ ಪಡೆಯುವ ವ್ಯವಸ್ಥೆ ಮಾಡಿದರು. ಮುಂದಿನ ದಿನಗಳಲ್ಲಿ ಅವರುಗಳೆಲ್ಲ ತಮ್ಮ ಅನುಭವಗಳನ್ನು ಅನುಭವ ಮಂಟಪದಲ್ಲಿ ಹಂಚಿಕೊಂಡರು. ಅಖಂಡ ಭಾರತದಲ್ಲಿ ಮೊಟ್ಟ ಮೊದಲ ಬಾರಿ ವಿವಿಧ ಜಾತಿಗಳ ಕಾಯಕ ಜೀವಿಗಳು ತಮ್ಮ ಜಾತಿಯನ್ನೂ ಮೀರಿ ಒಂದು ವರ್ಗವಾಗಿದ್ದು ಶರಣ ಸಂಕುಲದಲ್ಲಿ ಮಾತ್ರ ಎಂಬುದು ಹೆಮ್ಮೆಯ ವಿಷಯವೇ ಸರಿ. ಕ್ರಮೇಣ ಜಾತಿಯೊಳಗಿದ್ದ ವಿಷವನ್ನು ಹೊರಹಾಕುವಲ್ಲಿ ಇವರ ಪ್ರಯತ್ನ ಮುಂದುವರೆದಿತ್ತು.

ತೃತೀಯ ಲಿಂಗಿಗಳ ಕುರಿತಾಗಿಯೂ ಇತ್ತೀಚಿಗೆ ಕಾನೂನಾತ್ಮಕ ನೆರವು ರಕ್ಷಣೆ ಹಕ್ಕುಗಳು ದೊರೆತಿವೆಯಾದರೂ ಇವರಿಗೆ ಅಂದಿನ ಕಾಲದಲ್ಲಿಯೇ ಬಸವಣ್ಣ ತನ್ನ ವಚನದ ಮೂಲಕ ಸ್ಥಾನಮಾನ ಗೌರವ ಕಲ್ಪಿಸಿಕೊಟ್ಟಿದ್ದರು. “ ಸ್ತ್ರಿಯಲ್ಲ, ಪುರುಷನಲ್ಲ, ನಪುಂಸಕನಲ್ಲ, ಆತ್ಮನೆಂದು ಅರಿಯಬಹುದಲ್ಲದೇ ಕಾಣಿಸಬಾರದು, ದೇಹಾದಿ ಗುಣಧರ್ಮ ಕರ್ಮಗಳು ತಾನಲ್ಲ, ಇವು ತನ್ನವಲ್ಲವೆಂದು ತಿಳಿಯಬಹುದು” ಎನ್ನುವ ಶರಣ ಚಂದಿಮರಸರ ಮಾತುಗಳು ಕ್ರಾಂತಿಕಾರಿ ವಿಚಾರಕ್ಕೆ ಉದಾತ್ತ ಚಿಂತನೆಗೆ ದಾರಿಮಾಡಿಕೊಟ್ಟಿದ್ದವು. ತಮಗೊಂದು ಮುಖವಿಲ್ಲದೇಸಮಾಜದಲ್ಲಿ ಅವಮಾನದ ವೇದನೆಯಿಂದ ಬಳಲುತ್ತಿರುವ ಇವರಿಗೆ ಸಾಮಾಜಿಕ ಸ್ತ್ರಿ ಪುರುಷರಂತೆ ಸಮಾನತೆ ದೊರೆಯುವ ಉದ್ದೇಶದಿಂದ ರಚಿಸಲಾದ ಈ ವಚನ ಶರಣರ ಆಧುನಿಕ ಮನಸ್ಥಿತಿಗೆ ಹಿಡಿದಿರುವ ಕೈಗನ್ನಡಿ ಎನ್ನಬಹುದು.

ಪರಿಸಮಾಪ್ತಿ :
ಜಾಗತಿಕ ಮಟ್ಟದಲ್ಲಿ ಇಂಥಹದ್ದೊಂದು ಕ್ರಾಂತಿಯನ್ನೇ ಮಾಡಿದ ಬಸವಣ್ಣ ಇಡೀ ಜಗತ್ತೇ ನಮ್ಮ ದೇಶದತ್ತ ಮುಖ ಮಾಡುವಂತೆ ಆಗಲೇ ಚಿಂತನೆಯನ್ನು ಮಾಡಿದವರು ಇಂದಿನ ವಾಸ್ತವಿಕ ಸುಧಾರಣೆಗಳಿಗೆ ಬಸವಣ್ಣನವರ ಎಷ್ಟೋ ವಚನಗಳು ದಾರಿದೀಪವಾಗಿವೆ. ಸಮಾಜದಲ್ಲಿನ ಆರೋಗ್ಯಕ್ಕಾಗಿ ಕೆಲವೊಂದು ಬದಲಾವಣೆಗಳಿಗಾಗಿ ಕ್ರಾಂತಿ ಅವಶ್ಯಕ. ಈ ಹಿನ್ನೆಲೆಯಲ್ಲಿ ಬಸವಣ್ಣನವರು ಜಾತಿ ಅಸಮಾನತೆ, ಆರ್ಥಿಕ ಅಸಮಾನತೆ, ಧಾರ್ಮಿಕ ಅಸಮಾನತೆಯನ್ನು ಹಡೆದು ಹಾಕುವಲ್ಲಿ ಯಶಸ್ವಿಯಾದರು. ಅಂತರ್ಜಾತಿ ವಿವಾಹ ಮಾಡುವುದರ ಮೂಲಕ ಸಮಾಜದಲ್ಲಿ ಸಮಾನತೆಯ ಬಹುದೊಡ್ಡ ಕ್ರಾಂತಿಗೆ ನಾಂದಿ ಹಾಡಿದರು.
ಈಗಿನ 21 ನೇ ಶತಮಾನದಲ್ಲಿಯೂ ಬಸವಣ್ಣನವರ ಆದರ್ಶಗಳು ನಮಗೆ ದಾರಿದೀಪವಾಗಿವೆ. ಇಂತಹ ಉತ್ತುಂಗ ಚಿಂತನೆಗಳನ್ನು ಜನಸಾಮಾನ್ಯರ ಆಡುಭಾಷಡಯಲ್ಲಿಯೇ ವಚನಗಳ ಮಊಲಕ ನಮಗೆ ಒದಗಿಸಿದ ಬಸವಣ್ಣನವರು ಈ ದೇಶ ಕಂಡ ಸುಧಾರಕ ಎನ್ನುವುದಕ್ಕಿಂತ ಸಮಾಜದ ಪರಿವರ್ತಕ. ಕಲ್ಯಾಣದ ಮಾದರಿಯನ್ನೇ ಇಟ್ಟುಕೊಂಡು ಈಗಿನ ರಾಜ್ಯಸರ್ಕಾರಗಳು ತಮ್ಮ ವಿಚಾರಗಳನ್ನು ಸಮಾಜದ ಹಿತಚಿಂತನೆಗಳನ್ನು ಕುರಿತಾಗಿ ಚರ್ಚಿಸುತ್ತಿರುವುದ ನಮಗೆಲ್ಲ ತಿಳಿದಿರುವ ವಿಷಯವೇ.
ಇಂತಹ ಪುಣ್ಯಪುರುಷ ನಮ್ಮ ನಾಡಿನಲ್ಲಿ ಜನಿಸಿರುವುದು ವೈಯಕ್ತಿಕವಾಗಿ ನನಗೆ ಹೆಮ್ಮೆಯ ವಿಷಯ. ಕೆಲವೇ ಕೆಲವು ಅಂದರೆ ಸುಮಾರು ಎರಡು ದಶಕದಲ್ಲಿ ಇಡೀ ಸಮಾಜವನ್ನೇ ಪರಿವರ್ತನೆ ಮಾಡಿದ ಬಸವಣ್ಣನವರು ಅಂದು-ಇಂದು-ಮುಂದೆಯೂ ನಮಗೆ ಪ್ರಸ್ತುತವೆನಿಸುತ್ತಾರೆ. ಪ್ರಾಮುಖ್ಯರೆನಿಸುತ್ತಾ ಎಂಬುದನ್ನು ನಾವು ಒಪ್ಪಲೇಬೇಕು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";