ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ನಮ್ಮ ದೇಹದ ಸಂಯೋಜನೆಯು 70 ಪ್ರತಿಶತ ನೀರಿನಿಂದ ಮಾಡಲ್ಪಟ್ಟಿದೆ. ನಮ್ಮ ದೇಹ ಮಾತ್ರವಲ್ಲ, ನಮ್ಮ ಭೂಮಿಯೂ ಶೇ. 75 ರಷ್ಟು ನೀರಿನಿಂದ ಆವೃತವಾಗಿದೆ. ಹೀಗಿದ್ದರೂ ಮಾನವನ ದಿನನಿತ್ಯದ ಬಳಕೆಗೆ ದೊರೆಯುವ ಸಿಹಿ ನೀರಿನ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದದ್ದಾಗಿದೆ. ಒಟ್ಟು ನೀರಿನಲ್ಲಿ ಸಮುದ್ರದ ನೀರಿನ ಪ್ರಮಾಣವೇ ಶೇ. 97.70 ಇದೆ. ಉಳಿದ ಶೇ. 2.80 ರಷ್ಟು ನೀರು ಮಾತ್ರ ಮಾನವನ ದಿನನಿತ್ಯದ ಬಳಕೆಗೆ ದೊರೆಯುತ್ತದೆ. ಈ ಶೇ. 2.8 ನೀರಿನಲ್ಲಿ ಶೇ. 85.3 ರಷ್ಟು ನೀರು ಕೃಷಿಗೆ ಬಳಕೆಯಾದರೆ, ಶೇ. 6.5 ರಷ್ಟು ನೀರು ಕುಡಿಯಲು ಹಾಗೂ ಗೃಹಬಳಕೆಗೆ ಉಪಯೋಗವಾಗುತ್ತಿದೆ. ಶೇ 1.3 ರಿಂದ 1.5 ರಷ್ಟು ನೀರು ಉದ್ಯಮಕ್ಕೆ ಹಾಗೂ ಶೇ 0.30 ರಷ್ಟು ನೀರು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿದೆ.
ನೀರಿನ ಕೊರತೆಯ ಕುರಿತು ವಿಶ್ವದಾದ್ಯಂತ ಗಂಭೀರ ಚಿಂತನೆಗಳು ನಡೆಯುತ್ತಿವೆ. 2019 ರಲ್ಲಿ ಪ್ರಮುಖ ನಗರಗಳು ನೀರಿನ ಕೊರತೆ ಅನುಭವಿಸಿದ್ದರಿಂದ ಮತ್ತು ಎಲ್ಲಾ ಜಲಾಶಯಗಳು ಒಣಗಿ ಹೋಗಿದ್ದರಿಂದ, ನಾಗರಿಕ ಸಂಸ್ಥೆಗಳು ‘ಡೇ ಜೀರೋ’ ಎಂದು ಘೋಷಿಸಿದಾಗ ಚೆನೈನ ಅಂತರಾಷ್ಟ್ರೀಯ ಸಂಸ್ಥೆಯೊಂದು ಮುಖ್ಯಾಂಶಗಳನ್ನು ಮಾಡಿ, ಜಲ ಸಂರಕ್ಷಣೆ ಮತ್ತು ಸಂವರ್ಧನೆಗೆ ಕರೆಕೊಟ್ಟಿತು. ಭಾರತದಲ್ಲಿ ನೀರಿನ ಸಂರಕ್ಷಣೆಗಾಗಿ ವಿಧಾನಗಳನ್ನು ಅಳವಡಿಸದಿದ್ದರೆ, 2050 ರ ವೇಳೆಗೆ ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್ ಸೇರಿದಂತೆ ಇನ್ನೂ 20 ನಗರಗಳು ಅಂತರ್ಜಲದಿಂದ ಹೊರಗುಳಿಯುತ್ತವೆ ಎಂದು ಸರ್ಕಾರದ ಥಿಂಕ್ ಟ್ಯಾಂಕ್ ಎನ್.ಐ.ಟಿ. ಆಯೋಗ್ ವರದಿ ಮಾಡಿದೆ. ಈ ಕಠೋರ ಪರಿಸ್ಥಿತಿಯನ್ನು ತಪ್ಪಿಸುವ ಏಕೈಕ ಪರಿಹಾರವೆಂದರೆ, ನೀರನ್ನು ಉಳಿಸುವ ಸಾರ್ವತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳುಬೇಕು ಹಾಗೂ ಸಮುದಾಯ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕು.
ಕರ್ನಾಟಕದ ಪರಿಸ್ಥಿತಿ ಅವಲೋಕಿಸಿದರೆ ರಾಜ್ಯದ ಸುಮಾರು ಶೇ.70 ರಷ್ಟು ಭಾಗದಲ್ಲಿ ಸರಾಸರಿ 750 ಮಿ.ಮೀ. ಗಿಂತಲೂ ಕಡಿಮೆ ಮಳೆಯಾಗುತ್ತಿದೆ. ರಾಜ್ಯದ ಒಟ್ಟು ಕೃಷಿ ಭೂಮಿಯಲ್ಲಿ ಶೇ. 60 ರಷ್ಟು ಮಳೆಯಾಶ್ರಿತ ಬೆಳೆಯನ್ನು ಬೆಳೆಯಲಾಗುತ್ತಿದೆ. ಇದರಿಂದ ಮಳೆ ಕೊರತೆಯಾದರೆ ಬಹಳಷ್ಟು ತಾಲೂಕುಗಳು ಬರಪೀಡಿತವಾಗುತ್ತವೆ. ಕರ್ನಾಟಕ ರಾಜ್ಯದಲ್ಲಿ 3472.5 ಟಿಎಂಸಿ ಸಾಮರ್ಥ್ಯದ ಏಳು ಪ್ರಮುಖ ನದಿ ಪಾತ್ರಗಳಿವೆ, ಆದರೆ ಇದರಲ್ಲಿ ಉಪಯೋಗಿಸಲು ಸಾಧ್ಯವಾಗುವುದು ಕೇವಲ ಶೇ 50 ರಷ್ಟು ಮಾತ್ರ. ದಕ್ಷಿಣ ಕರ್ನಾಟಕದ ಬೆಂಗಳೂರು ಸುತ್ತಲಿನ ಹಾಗೂ ಉತ್ತರ ಕರ್ನಾಟಕದ ಹೈದ್ರಾಬಾದ ಕರ್ನಾಟಕ ಭಾಗದಲ್ಲಿಯ ಅಂತರ್ಜಲ ಮಟ್ಟ ಕುಸಿಯುತ್ತಿರುವ ವೇಗ ನೋಡಿದರೆ ನಿಜಕ್ಕೂ ಭಯವಾಗುತ್ತದೆ. ಈ ದೆಸೆಯಲ್ಲಿ ಕರ್ನಾಟಕದಲ್ಲಿ ಸಹಿನೀರಿನ ಸಂರಕ್ಷಣೆಗಾಗಿ ಸರ್ಕಾರವು ಮಹತ್ವಾಕಾಂಕ್ಷೆಯ ಜಲಾಮೃತ ಯೋಜನೆಯನ್ನು ಜಾರಿಗೆ ತಂದಿದೆ. ಜಲಸಂವರ್ಧನೆಗೆ 4 ಮುಖ್ಯ ಸ್ಥಂಭಗಳನ್ನು ಗುರ್ತಿಸಿ ಕಾರ್ಯೋನ್ಮುಖವಾಗಿದೆ.
ಜಲ ಸಾಕ್ಷರತೆ: ರಾಜ್ಯದಲ್ಲಿ ಸಿಹಿನೀರಿನ ಮೂಲಗಳು ಇಳಿಕೆಯಾಗುತ್ತಿದ್ದು, ಹೆಚ್ಚುತ್ತಿರುವ ಜನಸಂಖ್ಯೆಯಿಂದ ನೀರಿನ ಲಭ್ಯತೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಜನರಲ್ಲಿ ಜಲ ಸಂರಕ್ಷಣೆಯ ಅರಿವು ಮೂಡಿಸಲು ರಾಜ್ಯದುದ್ದಕ್ಕೂ ಜಲ ಸಾಕ್ಷರತೆ ಮೂಡಿಸಿ ಪ್ರತಿ ಹನಿ ನೀರಿನ ಮಹತ್ವವನ್ನು ಜನರಿಗೆ ತಿಳಿಸುವ ಪ್ರಯತ್ನಗಳು ನಡೆಯುತ್ತಿವೆ.
ಜಲ ಸಂರಕ್ಷಣೆ: ರಾಜ್ಯದಲ್ಲಿ 7 ಪ್ರಮುಖ ನದಿಗಳು, ಸುಮಾರು 37000 ಕೆರೆಗಳು ಹಾಗೂ ಸಾವಿರಾರು ಹಳ್ಳ-ಕೊಳ್ಳ, ಭಾವಿಗಳು ಸೇರಿದಂತೆ ಇನ್ನಿತರ ನೀರಿನ ಮೂಲಗಳಿವೆ. ಆದರೆ ನಗರೀಕರಣದ ಪರಿಣಾಮ ಜಲ ಸಂಪನ್ಮೂಲಗಳು ಮಲಿನವಾಗಿವೆ. ಇಂದಿನ ಅಗತ್ಯತೆ ಹಾಗೂ ಭವಿಷ್ಯದ ಜಲ ಸಮೃದ್ಧತೆಗಾಗಿ ನೀರಿನ ಮೂಲಗಳ ಪುನರುಜ್ಜೀವನ ಕಾರ್ಯಗಳು ನಡೆಯಬೇಕಿದೆ.
ಸಮರ್ಥ ಬಳಕೆ: ನೀರಿನ ಉಪಯೋಗ ಹಾಗೂ ದುರುಪಯೋಗದ ನಡುವಿನ ರೇಖೆ ಮಾಸಿಹೋಗಿದ್ದು, ನೀರಿನ ಬೆಲೆಯನ್ನು ಮರೆತಿದ್ದೇವೆ. ನೀರನ್ನು ಮಿತವಾಗಿ ಬಳಸುವುದು, ಮಳೆ ನೀರನ್ನು ಸಂಗ್ರಹಿಸುವುದು, ಪ್ರತಿ ಮನೆಯಲ್ಲೂ ಮಳೆ ನೀರಿನ ಕೊಯ್ಲು ಮಾಡುವುದು, ಅಂತರ್ಜಲ ಮರುಪೂರಣ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾಡಿನಾದ್ಯಂತ ಜನತೆಯಲ್ಲಿ ಮಳೆನೀರಿನ ಸಂಗ್ರಹಣೆ, ಅಂತರ್ಜಲ ಮರುಪೂರಣ ಹಾಗೂ ನೀರಿನ ಮಿತಬಳಕೆಯ ಜಾಗೃತಿ ಮೂಡಿಸಲಾಗುತ್ತಿದೆ. ಇದರಲ್ಲಿ ನಾಗರಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಬೇಕು.
ಹಸಿರೀಕರಣ: ಜಲಮೂಲಗಳ ಬತ್ತುವಿಕೆ, ಸಿಹಿನೀರಿನ ತಾಣಗಳ ಇಳಿಕೆ, ಹವಾಮಾನ ಬದಲಾವಣೆ, ಬರಪೀಡಿತವಾಗುತ್ತಿರುವ ನಾಡು, ಇದಕ್ಕೆ ಮುಖ್ಯ ಕಾರಣ ಅರಣ್ಯ ನಾಶ. ಹಸಿರಿಲ್ಲದೇ ಅಂತರ್ಜಲ ನಾಶವಾಗುತ್ತಿದೆ. ಈ ನೆಲೆಯಲ್ಲಿ ನಾಡಿನಾದ್ಯಂತ ಗಿಡಗಳನ್ನು ನೆಟ್ಟು ಪರಿಸರ ಕ್ರಾಂತಿಗೆ ನಾವು ಸಿದ್ಧವಾಗಬೇಕಿದೆ. ಈ ಕಾರ್ಯದಲ್ಲಿ ಸಮುದಾಯವು ಸರ್ಕಾರದ ಜೊತೆಗೆ ಕೈ ಜೋಡಿಸಿಬೇಕು.
1960 ರಲ್ಲಿ ಪರಿಚಯಿಸಲಾದ ಹಸಿರು ಕ್ರಾಂತಿಯಿಂದ ನೀರಿನ ಬೇಡಿಕೆಯು ಹೆಚ್ಚಾಗಿದ್ದರೂ ಅದಕ್ಕೆ ಸರಿಸಮಾನವಾಗಿ ಮೇಲ್ಮೆ ನೀರಾವರಿ ನೀರಿನ ಪೂರೈಕೆ ಹೆಚ್ಚಾಗಿಲ್ಲ. ಹೀಗಾಗಿ ಭಾರತದ ಹಲವಾರು ಪ್ರದೇಶಗಳಲ್ಲಿ ಅಂತರ್ಜಲದ ಮೇಲಿನ ಅತಿ ಹೆಚ್ಚು ಅವಲಂಬನೆಯಿಂದಾಗಿ ಅದರ ಮಟ್ಟ ಕುಸಿಯುತ್ತಲೇ ಹೋಗುತ್ತಿದೆ. ಬದಲಿಗೆ ಅಂತರ್ಜಲದ ಮಟ್ಟವನ್ನು ಏರಿಸಲು ಬೇಕಾದ ಯಾವುದೇ ಮರುಪೂರಣ ಯೋಜನೆಗಳು ಅದೇ ಗತಿಯಲ್ಲಿ ಅನುಷ್ಠಾನಕ್ಕೆ ಬರಲಿಲ್ಲ.
ಮಹಾರಾಷ್ಟದ ಕಡವಂಚಿ 3000 ಜನಸಂಖ್ಯೆ ಹೊಂದಿದ ಒಂದು ಪುಟ್ಟ ಗ್ರಾಮ. ಇಲ್ಲಿಯ ಗ್ರಾಮಸ್ಥರು ತಮ್ಮ ಜಮೀನಿನಲ್ಲಿ 650 ಕೆರೆಗಳನ್ನು ನಿರ್ಮಿಸಿರುವುದು ದೊಡ್ಡ ದಾಖಲೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೆ ಮಾದರಿ ! ಪ್ರತಿವರ್ಷ ಈ ಉರಿನ ರೈತರು 900 ಕೋಟಿ ರೂ ದ್ರಾಕ್ಷಿ ವಿದೇಶಕ್ಕೆ ರಫ್ತು ಮಾಡುತ್ತಾರೆ. ಅವರ ಭೂಮಿಯಲ್ಲಿ ಬಿದ್ದ ಒಂದೂ ಹನಿ ನೀರು ವ್ಯರ್ಥವಾಗಲು ಬಿಡುವುದಿಲ್ಲ. ನೀರು ಕೆರೆಗಳಲ್ಲಿ ಸಂಗ್ರಹವಾಗುತ್ತದೆ, ಇಲ್ಲವೇ ಭೂಮಿಯಲ್ಲಿಯೇ ಇಂಗುತ್ತದೆ. ಮೊದಲು ಕಡವಂಚಿ ಗ್ರಾಮ ಸದಾ ಬರದ ದವಡೆಗೆ ತುತ್ತಾಗುತ್ತಿದ್ದ ಊರು. ಈಗ ನೀರಿನ ವಿಷಯದಲ್ಲಿ ಜಗತ್ತಿಗೆ ಮಾದರಿಯಾಗಿದೆ. ಮಹಾರಾಷ್ಟçದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕಬ್ಬು ಬೆಳೆಯುವುದಕ್ಕೆ ಕಡ್ಡಾಯವಾಗಿ ಡ್ರಿಪ್ ಇರಿಗೇಶನ್ ಮಾಡಬೇಕು ಎಂಬ ನಿಯಮ ಜಾರಿಗೆ ತಂದರು. ಮಳೆನೀರು ಕೊಯ್ಲು ವಿಧಾನದಲ್ಲಿ ಪ್ರಗತಿ ಸಾಧಿಸಿದ ಹಳ್ಳಿಗಳಿಗೆ 50 ಲಕ್ಷ ರೂ. ಅನುದಾನ ಕೊಡುವ ಯೋಜನೆ ಘೋಷಿಸಿದ್ದರಿಂದ ಹಳ್ಳಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ದಾಂಡೇಲಿಯಲ್ಲಿ ಹರಿದು ಸಮುದ್ರ ಸೇರುತ್ತಿರುವ ಕಾಳಿ ನದಿ
ನಮಗೆ ಕಾಳಿ ನದಿ ಜೋಡಣೆ ಯೋಜನೆ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದಾಗ 3 ವರ್ಷಗಳ ಹಿಂದೆ ಕೇಂದ್ರ ಜಲಶಕ್ತಿ ಮಂತ್ರಿ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡುವ ಒಂದು ಅಪರೂಪದ ಅವಕಾಶ ಲಭಿಸಿತ್ತು. ಅವರು ರಾಜಸ್ಥಾನದ ಲಪ್ಪೇರಿಯಾ ಎಂಬ ಹಳ್ಳಿಯ ಲಕ್ಷ್ಮಣ್ ಸಿಂಗ್ ಎಂಬ ಯುವಕ 40 ವರ್ಷಗಳ ಹಿಂದೆ ಜಲಕ್ರಾಂತಿ ಮಾಡಿದ ಕಥೆ ಹೇಳಿದರು. ಆ ಹಳ್ಳಿಯಲ್ಲಿ ಕುಡಿಯುವುದಕ್ಕೆ ಹನಿ ನೀರು ಸಿಗುತ್ತಿರಲಿಲ್ಲ. ಜನರನ್ನು ಸಂಘಟಿಸಿ ಗ್ರಾಮದ 19 ಬಾವಿಗಳನ್ನು ಸ್ವಚ್ಛ ಮಾಡುವ ಮೂಲಕ ಲಕ್ಷ್ಮಣ ಸಿಂಗ್ ಕಾರ್ಯ ಆರಂಭಿಸಿದನು. ತಕ್ಷಣ ಕುಡಿಯುವುದಕ್ಕೆ ನೀರು ಸಿಗತೊಡಗಿತು. ಲಕ್ಷಣ ಸಿಂಗ್ ಸಲಹೆಯಂತೆ ಗ್ರಾಮದ ಎಲ್ಲರೂ ಮಳೆ ನೀರು ಕೊಯ್ಲು ಮಾಡಲು ನಿರ್ಧರಿಸಿದರು. ಶ್ರಮದಾನ ಮಾಡಿ ಆರು ಕೆರೆಗಳನ್ನು ಕಟ್ಟಿದರು. ಹನಿ ನೀರಾವರಿ ಪದ್ಧತಿ ಅನುಸರಿಸಿದರು.
ಈ ಯುವಕನ ಸಾಹಸದಿಂದ ಲಫ್ಪೇರಿಯಾ ಗ್ರಾಮ ನೀರಿನ ವಿಷಯದಲ್ಲಿ ಬಹುದೊಡ್ಡ ಸಾಧನೆ ಮಾಡಿತು. ಅಂತರಾಷ್ಟಿಯ ಮಟ್ಟದಲ್ಲಿ ಈ ಊರಿನ ಹೆಸರು ಗಮನ ಸೆಳೆಯಿತು. ಇಸ್ರೇಲ್‌ನ ಪ್ರಮುಖರು ಲಪ್ಪೇರಿಯಾಕ್ಕೆ ಬಂದು ಲಕ್ಷ್ಮ ಣ ಸಿಂಗ್‌ನನ್ನು ಸಂದರ್ಶಿಸಿದರು. ಹೆಮ್ಮೆಯ ಸಂಗತಿಯೆದರೆ ಲಕ್ಷ್ಮಣ ಸಿಂಗ್‌ನಿಂದ ಪ್ರೇರಣೆ ಪಡೆದು ಇಸ್ರೇಲ್ ದೇಶ ನೀರು ನಿರ್ವಹಣೆಯಲ್ಲಿ ಜಗತ್ತಿಗೆ ಮಾದರಿಯಾಗಿದೆ. ಭಾರತದ ಪ್ರತಿ ಗ್ರಾಮಕ್ಕೆ ಒಬ್ಬ ಲಕ್ಷ್ಮಣ ಸಿಂಗ್ ಬೇಕಾಗಿದ್ದಾರೆ. ನೀವು ನಿಮ್ಮ ನಿಮ್ಮ ಊರುಗಳಲ್ಲಿ ಲಕ್ಷ್ಮಣ ಸಿಂಗ್ ಆಗುತ್ತೀರಾ ? ಎಂದು ಪ್ರಶ್ನಿಸಿ ನಕ್ಕರು.
ಭಾರತದಲ್ಲಿ ಒಂದು ಕಿಲೋ ಭತ್ತ ಬೆಳೆಯಲು 560 ಲೀಟರ್ ನೀರು ಬೇಕು. ಚೀನಾದಲ್ಲಿ ಕೇವಲ 350 ಲೀಟರ್‌ನಲ್ಲಿ ಒಂದು ಕಿಲೋ ಭತ್ತ ಬೆಳೆಯುತ್ತಾರೆ. ಭಾರತದಲ್ಲಿ ನೀರಿನ ಫಲ ಉತ್ಪಾದಕತೆ ಜಗತ್ತಿನಲ್ಲಿಯೇ ತೀರ ಕಡಿಮೆ ಇರುವುದು ಅತ್ಯಂತ ನೋವಿನ ಸಂಗತಿ. ಮಳೆ ನೀರು ಕೊಯ್ಲು, ವ್ಯಕ್ತಿಗತವಾಗಿ ಅವಶ್ಯವಿರುವಷ್ಟೇ ನೀರಿನ ಬಳಕೆ, ಅಂತರ್‌ಜಲ ರಕ್ಷಣೆಗೆ ಕ್ರಮ, ಬಳಸಿದ ನೀರು ಶುದ್ಧೀಕರಿಸಿ ಪುನರ್ ಬಳಸುವುದು, ಕೃಷಿ ಕೈಗಾರಿಕೆಗಳಿಗೆ ತಾಂತ್ರಿಕ ವಿಧಾನದ ಮೂಲಕ ನೀರಿನ ಬಳಕೆ ಇವು ನೀರು ರಕ್ಷಣೆಯ ಪ್ರಮುಖ ಸ್ತಂಭಗಳಾಗಿವೆ. ಈ ಐದು ವಿಧಾನಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದರೆ ದೇಶದಲ್ಲಿ ನೀರಿನ ವಿಷಯದಲ್ಲಿ ಬಹುದೊಡ್ಡ ಬದಲಾವಣೆ ಕಾಣಬಹುದು.
ಒಂದು ಕಾಲೇಶ್ವರಂ ಯೋಜನೆ ಬಂಗಾರು ತೆಲಂಗಾಣ ಕನಸನ್ನು ಸಾಕಾರಗೊಳಿಸುತ್ತಿದೆ. ನರ್ಮದಾ ಯೋಜನೆ ಗುಜರಾತನ್ನು ಬೆಳಕಾಗಿಸಿದೆ. ಕೇಂದ್ರ ಸರ್ಕಾರ ರಾಷ್ಟಿಯ ನದಿಜೋಡಣೆಗೆ ಸಜ್ಜಾಗಿದೆ. ಕರ್ನಾಟಕ ಸರ್ಕಾರವು ಕಾಳಿ ನದಿ ಸೇರಿದಂತೆ ಪಶ್ಚಿಮವಾಹಿನಿಯ ನೀರನ್ನು ಬಳಕೆ ಮಾಡಲು ತಯಾರಿಮಾಡಿಕೊಳ್ಳುತ್ತಿದೆ. ಭೂಮಂಡಲದ ಹನಿ ನೀರು ಸದ್ಬಳಕೆಯಾಗಬೇಕು. ಸರ್ಕಾರದ ಇಚ್ಚಾಶಕ್ತಿಯ ಜೊತೆಗೆ ಜನರ ಸಹಭಾಗಿತ್ವ, ಜನಾಂದೋಲನದಿಂದ ಮಾತ್ರ ಜಲಪೂರ್ಣತೆ ಸಾಧಿಸುವುದು ಸಾಧ್ಯವಾ ಗುತ್ತದೆ. ಜನಾಂದೋಲನದಿಂದ ಜಗತ್ತಿನ ಅನೇಕ ರಾಷ್ಟಗಳು ಪ್ರಗತಿ ಸಾಧಿಸಿವೆ. ಸುಜಲಾಂ ಸುಫಲಾಂ ಎಂದು ಭಕ್ತಿಯಿಂದ ಹಾಡುತ್ತೇವೆ. ಜಲವಿದ್ದರೆ ಮಾತ್ರ ಫಲ. ಇಲ್ಲದಿದ್ದರೆ ಏನೂ ಇಲ್ಲ. ಎಂಬುದು ಅರಿತು ಮುನ್ನಡೆಯೋಣ. ಭಗೀರಥನಂತೆ ತಪಸ್ಸು ಮಾಡಿ ಗಂಗೆಯನ್ನು ಉಕ್ಕಿಸಲೂ ನಮ್ಮಿಂದ ಸಾಧ್ಯವಿಲ್ಲ. ಆದರೆ ಇರುವ ಗಂಗೆ (ನೀರು) ಯನ್ನು ಸಂರಕ್ಷಿಸುವುದು ಖಂಡಿತಾ ಸಾಧ್ಯವಿದೆ ಅಲ್ಲವೇ?