ಮೇಟಿ ಸಾಂಸ್ಕೃತಿಕ ಲೋಕದ ಅಮರ ಚೇತನ :ಪ್ರೊ.ಸಿದ್ದು ಯಾಪಲಪರವಿ

ಕಾರಟಗಿ:ಬೇವಿನಹಾಳ ಮೂಲದ ಮೇಟಿ ಮುದಿಯಪ್ಪ ಕನ್ನಡದ ಹೆಸರಾಂತ ಸಾಹಿತಿಗಳು, ಉಡುಪಿ ಭಾಗದಲ್ಲಿ ಉಪನ್ಯಾಸಕರಾಗಿ, ಸಂಘಟಿಕರಾಗಿ ಹೆಸರು ಮಾಡಿದವರು. ಪ್ರತಿಭಾವಂತರ ತವರು ಎನಿಸಿಕೊಂಡ ಕಡಲ ತೀರದಲ್ಲಿ ಶ್ರೀಕೃಷ್ಣನಷ್ಟೇ ಕನಕನೂ ಕೂಡ ಮಹತ್ವದ ವ್ಯಕ್ತಿ ಎಂದು ಪರಿಚಯಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಸಾಹಿತಿ, ಕಾರಟಗಿ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಪ್ರೊ.ಸಿದ್ದು ಯಾಪಲಪರವಿ ಹೇಳಿದರು.

ಅವರು ಕಾರಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಮೇಟಿ ಮುದಿಯಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ‌ ಅವರು ಕಾರಟಗಿ ಸರಕಾರಿ ಶಾಲೆಯಲ್ಲಿ ತಮ್ಮ ವ್ಯಾಸಂಗ ಮುಗಿಸಿ, ತಮ್ಮ ಕುಟುಂಬದ ಎಲ್ಲ ಸದಸ್ಯರಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಉಡುಪಿಗೆ ಕರೆದೊಯ್ದು, ಅವರ ಇಡೀ ಕುಟುಂಬ ಉನ್ನತ ಶಿಕ್ಷಣ ಪಡೆಯಲು ಕಾರಣರಾದರು. ‌ಕಾರಟಗಿ, ಬೇವಿನಹಾಳ ಕುರಿತು ವಿಪರೀತ ವ್ಯಾಮೋಹ ಹೊಂದಿದ್ದ ಅವರು, ಅನಿರೀಕ್ಷಿತ ಅನಾರೋಗ್ಯದಿಂದ ನಿಧನರಾದದ್ದು ನಿಜಾರ್ಥದಲಿ ತುಂಬಲಾಗದ ನಷ್ಟ, ನೆಲದ ಮೂಲದ ಭಾವನಾತ್ಮಕ ಪ್ರೀತಿಯನ್ನು ತಮ್ಮ ಬದುಕಿನುದ್ದಕ್ಕೂ ಕಾಪಾಡಿಕೊಂಡು ಬಂದವರಾಗಿದ್ದರು ಎಂದು, ಅವರ ಜೊತೆಗಿನ ಹಲವಾರು ಪ್ರಸಂಗಗಳನ್ನು ಮೆಲುಕು ಹಾಕಿದರು. ‌ಅವರ ಸ್ಮರಣಾರ್ಥ ಪರಿಷತ್ತು ವಿವಿಧ ಬಗೆಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿ ಎಂದರು.

ಬೇವಿನಹಾಳ ಭಾಗದ ಹೆಮ್ಮೆಯಾಗಿದ್ದ ಮೇಟಿ ಅವರು ನಮಗೆಲ್ಲ ಆದರ್ಶಪ್ರಾಯರಾಗಿದ್ದು, ಉನ್ನತ ವ್ಯಾಸಂಗ ಮಾಡಲು ಪ್ರೇರಕರಾಗಿದ್ದರು ಎಂದು ನಿವೃತ್ತ ಪ್ರಾಚಾರ್ಯರಾದ ಮೆಹಬೂಬ್ ಹುಸೇನ್ ನುಡಿದರು. ಅವರೊಬ್ಬ ಆಕರ್ಷಕ ಮತ್ತು ಸರಳ ಪ್ರಾಧ್ಯಾಪಕರಾಗಿದ್ದು, ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಅವರ ವಿದ್ಯಾರ್ಥಿನಿ ಮತ್ತು ಶಿಕ್ಷಕಿ ವಿಜಯಲಕ್ಷ್ಮಿ ಮೇಲಿನಮನಿ ಹೇಳಿದರು. ಅನೇಕ ಸಾಂಸ್ಕೃತಿಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗಾಗಿ ಆಯೊಜಿಸುತ್ತಿದ್ದರು ಎಂದರು.

ಸುಹಾಸ ಮೇಟಿ ಮಾತನಾಡಿ, ತಂದೆಯವರ ಆದರ್ಶ ಗುಣ ಮತ್ತು ಕುಟುಂಬ ಬಾಂಧವ್ಯವನ್ನು ಸ್ಮರಿಸಿಕೊಂಡು, ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಗೌರವ ಸಲ್ಲಿಸಿದ್ದಕ್ಕೆ ಕುಟುಂಬದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತಾಲ್ಲೂಕು ಕಸಾಪ ಅಧ್ಯಕ್ಷರಾದ ಶರಣು ಕೋಟ್ಯಾಳ ಪರಿಷತ್ತು ಅವರ ಸ್ಮರಣೆಗಾಗಿ ವಿವಿಧ ಸಾಹಿತ್ಯಕ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣ ಆಯೋಜಿಸುತ್ತದೆ ಎಂದರು.‌

ಕಾರ್ಯಕ್ರಮದಲ್ಲಿ ರೈತ ಮುಖಂಡ ಮರಿಯಪ್ಪ ಸಾಲೋಣಿ, ಚನ್ನಬಸಪ್ಪ ವಕ್ಕಳದ, ಸಾಹಿತ್ಯ ಪ್ರೇಮಿಗಳು, ಈ ಭಾಗದ ಮೇಟಿ ಪರಿವಾರದ ಹಿತೈಷಿಗಳು, ಸ್ನೇಹಿತರು ಉಪಸ್ಥಿತರಿರುತ್ತಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";