ಪಂಚಾಯತಿ ಸದಸ್ಯರಾಗಲು ಅರ್ಹತೆಗಳನ್ನು ಬಿಗಿಗೊಳಿಸುವ ಅತ್ಯಂತ ಮಹತ್ವದ ತಿದ್ದುಪಡಿ

ಸಚಿವ.ಕೆ ಎಸ್ ಈಶ್ವರಪ್ಪ
ಉಮೇಶ ಗೌರಿ (ಯರಡಾಲ)

ಬೆಂಗಳೂರು.21-ಜಿಲ್ಲಾ-ತಾಲ್ಲೂಕು ಪಂಚಾಯತಿ ಚುನಾವಣೆಗೆ ಜನಸಂಖ್ಯೆ ಮಿತಿ ನಿಗದಿ ಮಾಡುವ, ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯರಾಗಲು ಅರ್ಹತೆಗಳನ್ನು ಬಿಗಿಗೊಳಿಸುವ ಅತ್ಯಂತ ಮಹತ್ವದ ತಿದ್ದುಪಡಿಯನ್ನು ಪಂಚಾಯತಿ ಕಾಯ್ದೆಗೆ ತರಲು ಉದ್ದೇಶಿಸಲಾಗಿದೆ.

ಈ ತಿದ್ದುಪಡಿಯನ್ನು ಒಳಗೊಂಡ 2022ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸಭೆಯಲ್ಲಿ ಮಂಡಿಸಿದರು. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳಿಗೆ ಜನಸಂಖ್ಯೆಯನ್ನು ನಿಗದಿ ಮಾಡಲಾಗುತ್ತದೆ. ಅಲ್ಲದೇ ಜನಸಂಖ್ಯೆಯ ಅನುಪಾತದ ಉದ್ದೇಶಕ್ಕಾಗಿ ಮಲೆನಾಡು ಪ್ರದೇಶದಿಂದ ತರೀಕೆರೆ, ಕಡೂರು ಮತ್ತು ಅಜ್ಜಂಪುರ ತಾಲ್ಲೂಕುಗಳನ್ನು ವಿನಾಯಿತಿ ಗೊಳಿಸುವ ಪ್ರಸ್ತಾಪವಿದೆ.

ಕೇಂದ್ರ ಅಥವಾ ರಾಜ್ಯ ಸರ್ಕಾರದ ಸೇವೆಯಿಂದ ಕಡ್ಡಾಯ ನಿವೃತ್ತಿಗೆ ಒಳಗಾದವರು ಅಥವಾ ವಜಾಗೊಂಡಿರುವ ವ್ಯಕ್ತಿ; ಸಹಕಾರ ಸಂಘ ಮತ್ತು ಸಂಸ್ಥೆಗಳ ಸೇವೆಯಿಂದ ನಿವೃತ್ತರಾಗಿರುವವರು ಅಥವಾ ವಜಾಗೊಂಡವರು; ಸಹಕಾರ ಸಂಘ ಅಥವಾ ಸಂಸ್ಥೆಯ ಅಧ್ಯಕ್ಷ- ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಲಾಗಿರುವ ವ್ಯಕ್ತಿ ಈ ಮೂರು ಹಂತದ ಪಂಚಾಯ್ತಿ ವ್ಯವಸ್ಥೆಯ ಸದಸ್ಯನಾಗಲು ಅನರ್ಹ. ಇವು ವಿಧೇಯಕದ ಪ್ರಮುಖ ತಿದ್ದುಪಡಿಗಳು.

ಇವಲ್ಲದೇ, ತಿದ್ದುಪಡಿಯಿಂದಾಗಿ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಸಂಬಂಸಿದ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುತ್ತದೆ. ಸಂಬಂಧಪಟ್ಟ ನಗರಸಭೆ, ಪಾಲಿಕೆ ಅಥವಾ ಆಯಾ ಜಿಲ್ಲಾ ಕೇಂದ್ರದ ಪೌರಾಡಳಿತದ ಮೇಯರ್/ಅಧ್ಯಕ್ಷರು ಜಿಲ್ಲಾ ಯೋಜನಾ ಸಮಿತಿಯ ಉಪಾಧ್ಯಕ್ಷರಾಗಿರಲಿದ್ದಾರೆ.
ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನಾ ಮತ್ತು ಅಭಿವೃದ್ಧಿ ಸಮಿತಿಯ ವಿಶೇಷ ಆಹ್ವಾನಿತರನ್ನಾಗಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನು ನಿಯುಕ್ತಿಗೊಳಿಸುವಾಗಿ ತಿದ್ದುಪಡಿ ವಿಧೇಯಕ ಹೇಳಿದೆ.
Share This Article
";