ಹನಿಟ್ರ್ಯಾಪ್‌ ನಲ್ಲಿ ಸಿಲುಕಿದ ಉಪತಹಸೀಲ್ದಾರ್‌! ಪ್ರಕರಣ ಮುಚ್ಚಿ ಹಾಕಲು ರೂ.25 ಲಕ್ಷಕ್ಕೆ ಬೇಡಿಕೆ

ಉಮೇಶ ಗೌರಿ (ಯರಡಾಲ)

ಬೆಂಗಳೂರು (ಮಾ. 21):  ಉಪ ತಹಶಿಲ್ದಾರ್‌ರೊಬ್ಬರನ್ನು ಹನಿಟ್ರ್ಯಾಪ್‌ ಖೆಡ್ಡಕ್ಕೆ ಕೆಡವಿ ರೂ. 25 ಲಕ್ಷ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಮಾನ ಹರಾಜು ಹಾಕುವುದಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಮೂವರನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಡಿಗೆಹಳ್ಳಿಯ ನಿವಾಸಿ ಗಣಪತಿ ನಾಯಕ್‌, ಸಂತೋಷ್‌ ಅಲಿಯಾಸ್‌ ಕಿಶನ್‌, ರಾಮೇಗೌಡ ಅಲಿಯಾಸ್‌ ಕೇಶವ್‌ ಬಂಧಿತರು. ಗದಗ ಮೂಲದ ಜ್ಯೋತಿ ವಿಶ್ವನಾಥ್‌ ತೋಪಗಿ ಅಲಿಯಾಸ್‌ ನಿಖಿತಾ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. 

ಆರೋಪಿಗಳು ಹೊಸಕೋಟೆ ನಿವಾಸಿಯಾಗಿರುವ ಕೋಲಾರ ಜಿಲ್ಲೆ ಉಪ ತಹಸೀಲ್ದಾರ್‌ ಕೆ.ಗೌತಮ್‌ (40) ಅವರನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿ .25 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಗೌತಮ್‌ 2021ರ ಜುಲೈನಲ್ಲಿ ಹೊಸಕೋಟೆ ಸಮೀಪದ ಕಾಟಂನಲ್ಲೂರು ಕ್ರಾಸ್‌ ಬಳಿ ಇರುವ ಹೋಟೆಲ್‌ವೊಂದಕ್ಕೆ ಊಟಕ್ಕೆ ತೆರಳಿದ್ದರು.

ಈ ವೇಳೆ ಹೋಟೆಲ್‌ ಸಿಬ್ಬಂದಿ ನಾಗರಾಜ್‌ ಎಂಬುವವರು ಪ್ಕಕದ ಟೇಬಲ್‌ನಲ್ಲಿದ್ದ ಜ್ಯೋತಿ ಎಂಬಾಕೆಯನ್ನು ಪರಿಚಯಿಸಿದ್ದರು. ಈ ವೇಳೆ ಜ್ಯೋತಿ, ಗೌತಮ್‌ ಅವರ ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದಳು. ಅಂತೆಯೆ ಮೆಸೇಜ್‌ ಮಾಡಲು ಆರಂಭಿಸಿದ್ದಳು. ಕೆಲ ದಿನಗಳ ಬಳಿಕ ಎರಡು ಮೂರು ಬಾರಿ ಹೋಟೆಲ್‌ವೊಂದಕ್ಕೆ ಊಟಕ್ಕೆ ಕರೆದು ಗೌತಮ್‌ ಜತೆ ಊಟ ಮಾಡಿದ್ದಳು.

ಜ್ಯೂಸ್‌ಗೆ ಮತ್ತು ಬರುವ ಔಷಧಿ ಬೆರೆಕೆ: ಕೆಲ ದಿನಗಳ ನಂತರ ಯಾವುದೋ ವಿಚಾರದ ಬಗ್ಗೆ ಮಾತನಾಡಬೇಕು ಎಂದು ಭಟ್ಟರಹಳ್ಳಿ ಸಮೀಪದ ಹೋಟೆಲ್‌ಗೆ ಗೌತಮ್‌ ಅವರನ್ನು ಬರುವಂತೆ ಹೇಳಿದ್ದಳು. ಅದರಂತೆ ಗೌತಮ್‌ ಆ ಹೋಟೆಲ್‌ ಬಳಿಗೆ ಹೋದಾಗ ಹೋಟೆಲ್‌ನ ಮೇಲ್ಭಾಗದ ರೂಮ್‌ವೊಂದಕ್ಕೆ ಕರೆದೊಯ್ದು ಕುಡಿಯಲು ತಂಪು ಪಾನೀಯ ಕೊಟ್ಟಿದ್ದಾಳೆ. 

ಬಳಿಕ ಗೌತಮ್‌ ಅವರಿಗೆ ಮಂಪರು ಬಂದಂತಾಗಿದೆ. ಈ ವೇಳೆ ಆಕೆ ಗೌತಮ್‌ ಜತೆಗೆ ಅಶ್ಲೀಲವಾಗಿರುವ ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ. ಹಾಗೆಯೇ ವಿಡಿಯೋ ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿದ್ದಳು. ಸುಮಾರು ಒಂದೂವರೆ ಗಂಟೆ ಬಳಿಕ ಎಚ್ಚರವಾದಾಗ ಗೌತಮ್‌ ಅರೆ ನಗ್ನಾವಸ್ಥೆಯಲ್ಲಿದ್ದರು.

ಬಳಿಕ ಗೌತಮ್‌ ಎದ್ದು ಮನೆಗೆ ಹೋಗಿದ್ದರು. ನಂತರವೂ ಜ್ಯೋತಿ, ಗೌತಮ್‌ ಅವರೊಂದಿಗೆ ಚಾಟಿಂಗ್‌ ಮುಂದುವರಿಸಿದ್ದಳು. ಬಳಿಕ ಅಕ್ಟೋಬರ್‌ 26ರಂದು ನಿಶಾರಾವ್‌ ಹೆಸರಿನಲ್ಲಿ ಮೆಸೆಂಜರ್‌ನಲ್ಲಿ ‘ನಿನ್ನ ವಿಡಿಯೋ ಲೀಕ್‌ ಆಗಿದೆ. ಯಾರನ್ನೂ ನಂಬಬೇಡ. ಹುಷಾರಾಗಿರು’. ಮಾತುಕತೆ ಮೂಲಕ ಬಗೆಹರಿಸಿಕೋ ಎಂದು ಎಂದು ಮೆಸೇಜ್‌ ಕಳುಹಿಸಿದ್ದಳು. ಇದರಿಂದ ಅನುಮಾನಗೊಂಡು ಗೌತಮ್‌, ಈ ಮೆಸೇಜ್‌ಗೆ ರಿಪ್ಲೆ ಮಾಡಿರಲಿಲ್ಲ.

ಪ್ರಕರಣ ಮುಚ್ಚಿ ಹಾಕಲು ರೂ.25 ಲಕ್ಷಕ್ಕೆ ಬೇಡಿಕೆ:  ಬಳಿಕ 2022ರ ಫೆ.24ರಂದು ಕೋಲಾರದ ಎ.ಸಿ. ಕಚೇರಿಗೆ ಬಂದಿರುವ ಆರೋಪಿಗಳಾದ ಗಣಪತಿ ನಾಯಕ್‌, ರಮೇಶ್‌ ಗೌಡ, ಸಂತೋಷ್‌ ತಮ್ಮನ್ನು ವಕೀಲರು ಎಂದು ಗೌತಮ್‌ ಅವರಿಗೆ ಪರಿಚಯಿಸಿಕೊಂಡಿದ್ದರು. ಅಶ್ಲೀಲ ವಿಡಿಯೋ ತೋರಿಸಿ ಬಳಿಕ ನಾವು ಹೇಳುವ ಜಾಗಕ್ಕೆ ಬಂದು ಭೇಟಿಯಾದರೆ, ಸಂಪೂರ್ಣ ವಿಡಿಯೋ ತೋರಿಸುವುದಾಗಿ ಹೇಳಿ ಹೊರಟು ಹೋಗಿದ್ದರು. 

ಬಳಿಕ ಫೆ.24ರಂದು ಕೊಡಿಗೇಹಳ್ಳಿ ಹೋಟೆಲ್‌ವೊಂದಕ್ಕೆ ಬರುವಂತೆ ಸೂಚಿಸಿದ್ದರು. ಅದರಂತೆ ಗೌತಮ್‌, ಮಹೇಶ್‌ ಎಂಬ ವಕೀಲರನ್ನು ಜತೆಯಲ್ಲಿ ಕರೆದುಕೊಂಡು ಹೋಟೆಲ್‌ಗೆ ಹೋಗಿದ್ದಾರೆ. ಈ ವೇಳೆ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರದಂತೆ ನೋಡಿಕೊಳ್ಳಲು .25 ಲಕ್ಷ ಕೋಡಬೇಕು ಎಂದು ಹೇಳಿ ಹೊರಟ್ಟಿದ್ದರು.

ಬಳಿಕ ಫೆ.27ರಂದು ಮತ್ತೆ ಅದೇ ಹೋಟೆಲ್‌ಗೆ ಗೌತಮ್‌ ಅವರನ್ನು ಕರೆಸಿಕೊಂಡು ಮತ್ತೆ ಹಣಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ ಮಾ.10ರಂದು ಕೆ.ಆರ್‌.ಪುರಂ ಹೋಟೆಲ್‌ವೊಂದಕ್ಕೆ ಗೌತಮ್‌ ಅವರನ್ನು ಕರೆಸಿಕೊಂಡು ಹಣಕ್ಕೆ ಬೇಡಿಕೆ ಇರಿಸಿದ್ದರು. ಸದ್ಯಕ್ಕೆ ಮಾ.17ರೊಳಗೆ .10 ಲಕ್ಷ ಕೊಡುವಂತೆ ತಾಕೀತು ಮಾಡಿ ಹೊರಟ್ಟಿದ್ದರು.

ಮಾ.17ರಂದು ಆರೋಪಿಗಳು ಗೌತಮ್‌ ಅವರಿಗೆ ಹತ್ತಾರು ಬಾರಿ ಕರೆ ಮಾಡಿದ್ದು, ಗೌತಮ್‌ ಕರೆ ಸ್ವೀಕರಿಸಿಲ್ಲ. ಈ ವೇಳೆ ಗೌತಮ್‌ ಸ್ನೇಹಿತ ವಕೀಲರಾದ ಮಹೇಶ್‌ಗೆ ಕರೆ ಮಾಡಿ, ಗೌತಮ್‌ ಹಣ ಕೊಡದಿದ್ದಲ್ಲಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋ ಹಾಕಿಸಿ ಅಪಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದರು. 

ಆರೋಪಿಗಳ ಕಾಟದಿಂದ ಬೇಸತ್ತಿದ್ದ ಉಪತಹಸೀಲ್ದಾರ್‌ ಗೌತಮ್‌ ಅವರು ಕೆ.ಆರ್‌.ಪುರಂ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";